ಶಿವಮೊಗ್ಗ; ತುಂಗಾ ರಿವರ್ ಫ್ರಂಟ್ ಪ್ರಾಜೆಕ್ಟ್ ಲೋಕಾರ್ಪಣೆ, ವಿವರ
ಶಿವಮೊಗ್ಗ, ಜನವರಿ 29: ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಕೈಗೊಂಡಿದ್ದ ತುಂಗಾ ರಿವರ್ ಫ್ರಂಟ್ ಪ್ರಾಜೆಕ್ಟ್ ಲೋಕಾರ್ಪಣೆಯಾಗಿದೆ. ಯೋಜನೆಯಡಿ ನಗರದಲ್ಲಿ ತುಂಗ ನದಿ ತೀರವನ್ನು ಅಭಿವೃದ್ಧಿಗೊಳಿಸಲಾಗಿದೆ.
ಸೋಮವಾರ ಶಿಕ್ಷಣ ಸಚಿವ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತುಂಗಾ ರಿವರ್ ಫ್ರಂಟ್ ಪ್ರಾಜೆಕ್ಟ್ ಉದ್ಘಾಟಿಸಿದರು. ಶಾಸಕ ಎಸ್. ಎನ್. ಚನ್ನಬಸಪ್ಪ, ಸ್ಪಾರ್ಟ್ ಸಿಟಿ ಎಂಡಿ ಕೆ. ಮಾಯಾಣ್ಣಗೌಡ, ಮುಖ್ಯ ಇಂಜನಿಯರ್ ರಂಗನಾಥ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಸಚಿವ ಮಧು ಬಂಗಾರಪ್ಪ ಮಾತನಾಡಿ, "ತುಂಗಾ ನದಿ ಉತ್ತರದಂಡೆ ಪಾದಚಾರಿ ಸೇತುವೆ, ವಾಯುವಿಹಾರ, ಸಾರ್ವಜನಿಕ ಬೈಸಿಕಲ್ ಯೋಜನೆ ಮುಂತಾದವುಗಳನ್ನು ಸಾರ್ವಜನಿಕರು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು. ಹೀಗೆ ಬಳಸಿಕೊಂಡರೆ ಮಾತ್ರ ಯೋಜನೆ ಸಾರ್ಥಕವಾಗುತ್ತದೆ" ಎಂದರು.
"ಜನರು ಕಟ್ಟುವ ಕಂದಾಯದ ಹಣದಿಂದಲೇ ನಿರ್ಮಾಣವಾಗಿರುವ ಸ್ಮಾರ್ಟ್‍ಸಿಟಿ ಯೋಜನೆಗಳ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಯೋಜನೆಯ ಉಪಯೋಗವನ್ನು ಎಲ್ಲರೂ ಪಡೆಯಬೇಕು. ಸಾರ್ವಜನಿಕರು ತುಂಗಾ ನದಿ ಉದ್ಯಾನವನದಲ್ಲಿ ಓಡಾಡಬೇಕು. ಆಗ ಮಾತ್ರ ಉದ್ಯಾನವನ ನಿರ್ಮಾಣ ಸಾರ್ಥಕವಾಗುತ್ತದೆ" ಎಂದು ಹೇಳಿದರು.
"ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ 50:50 ಅನುದಾನದಲ್ಲಿ ಕೆಲಸಗಳು ನಡೆದಿದ್ದು, ತುಂಗಾ ರಿವರ್ ಫ್ರಂಟ್ ಪ್ರಾಜೆಕ್ಟ್ ಅನ್ನು ರೂ. 103 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಾರ್ವಜನಿಕರು ಈ ಯೋಜನೆಗಳನ್ನು ತಮ್ಮ ಆಸ್ತಿ ಎಂದು ಅರಿತು ಸ್ವಚ್ಚತೆ ಹಾಗೂ ಕಾಳಜಿಯಿಂದ ನೋಡಿಕೊಳ್ಳಬೇಕು" ಎಂದು ಸಚಿವರು ಕರೆ ನೀಡಿದರು.
"ಉದ್ಯಾನವನದಲ್ಲಿ ಮಹಿಳೆಯರು, ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ರಕ್ಷಣಾ ವ್ಯವಸ್ಥೆ, ಸಿಸಿಟಿವಿ ಅವಳವಡಿಸುವುದು, ವಿದ್ಯುತ್ ದೀಪದ ವ್ಯವಸ್ಥೆ ಮಾಡಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು" ಎಂದು ಸಚಿವರು ತಿಳಿಸಿದರು.
ಶುಲ್ಕ ಸಂಗ್ರಹ; "ಉದ್ಯಾನವನ ನಿರ್ವಹಣೆಗಾಗಿ ಸಾರ್ವಜನಿಕರಿಗೆ ಹೊರೆಯಾಗದಂತೆ ಪ್ರವೇಶ ಶುಲ್ಕ ತೆಗೆದುಕೊಳ್ಳುವ ಬಗ್ಗೆ ಸ್ಮಾರ್ಟ್‍ಸಿಟಿ ಅಧಿಕಾರಿಗಳು ನಿರ್ಧರಿಸುವರು. ಇಲ್ಲಿ ಹಸಿರು, ಸ್ವಚ್ಚತೆ, ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನಿಡಬೇಕು. ಅಂಗಡಿ, ಜಾಹೀರಾತು, ಮಳಿಗೆಗಳಿಗೆ ಅವಕಾಶ ನೀಡಿ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು ಹಾಗೂ ಉತ್ತಮವಾಗಿ ನಿರ್ವಹಣೆ ಮಾಡಬೇಕೆಂದು" ಎಂದು ಮಧು ಬಂಗಾರಪ್ಪ ಹೇಳಿದರು.
"ಶಿವಮೊಗ್ಗ ನಗರದ ಹೃದಯಭಾಗವಾದ ಶಿವಪ್ಪನಾಯಕ ವೃತ್ತದಲ್ಲಿ ಪಾಲಿಕೆಗೆ ಹೊಂದಿಕೊಂಡಂತೆ ಹೂವು, ಹಣ್ಣು ಮಾರುಕಟ್ಟೆಗಾಗಿ 118 ಮಳಿಗೆ, ಮಲ್ಟಿಲೆವೆಲ್ ಕಾರ್ ನಿಲುಗಡೆಯಲ್ಲಿ ಒಟ್ಟು 172 ಕಾರು ಮತ್ತು 78 ಬೈಕ್ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ" ಎಂದು ಸಚಿವರು ವಿವರಿಸಿದರು.
ಶಿವಮೊಗ್ಗ ನಗರ ಶಾಸಕ ಎಸ್. ಎನ್. ಚನ್ನಬಸಪ್ಪ ಮಾತನಾಡಿ, "ಸ್ಮಾರ್ಟ್‍ಸಿಟಿ ಕಾಮಗಾರಿಗಳು ಉತ್ತಮವಾಗಿ ಆಗಿದ್ದು ಇಂದು ಸಾರ್ವಜನಿಕರಿಗೆ ಮುಕ್ತಗೊಳಿಸುವ ಕಾರ್ಯ ನಡೆದಿದೆ. ಈ ಯೋಜನೆ ಮಂಜೂರಾತಿ ಮತ್ತು ಅನುಷ್ಟಾನದಲ್ಲಿ ಅನೇಕರ ನಾಯಕರ ಪ್ರಯತ್ನ ಮತ್ತು ಶ್ರಮವಿದೆ" ಎಂದರು.
"ನಗರದ 6 ವಾರ್ಡ್‍ಗಳಲ್ಲಿ ಪೂರ್ಣ ಪ್ರಮಾಣ ಮತ್ತು 9 ವಾರ್ಡುಗಳಲ್ಲಿ ಭಾಗಶಃ ಸ್ಮಾರ್ಟ್‍ಸಿಟಿ ಕೆಲಸಗಳು ಆಗಿವೆ. ಮುಂದಿನ ಹಂತದಲ್ಲಿ ಇತರೆ ವಾರ್ಡುಗಳನ್ನು ಪರಿಗಣಿಸಲಾಗುವುದು" ಎಂದು ಶಾಸಕರು ಭರವಸೆ ನೀಡಿದರು.
ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ತುಂಗಾ ರಿವರ್ ಫ್ರಂಟ್ ಪ್ರಾಜೆಕ್ಟ್ ಹಾಗೂ ಸಾರ್ವಜನಿಕ ಬೈಸಿಕಲ್ ಯೋಜನೆಯನ್ನು ಕೈಗೊಳ್ಳಲಾಗಿತ್ತು. ನಗರದಲ್ಲಿ ಹರಿಯುವ ತುಂಗಾ ನದಿ ತೀರವನ್ನು ಯೋಜನೆಯಡಿ ಅಭಿವೃದ್ಧಿಗೊಳಿಸಲಾಗಿದೆ.












Click it and Unblock the Notifications