ಶಿವಮೊಗ್ಗ ಗ್ರಾಮಾಂತರ; ಈ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ?
ಶಿವಮೊಗ್ಗ, ಏಪ್ರಿಲ್ 29; ಈ ಬಾರಿಯ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಫಲಿತಾಂಶ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅದೇ ರೀತಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿಯೂ ಪ್ರಬಲ ಪೈಪೋಟಿ ಇದೆ. ರಾಜಕೀಯ ಲೆಕ್ಕಾಚಾರಗಳನ್ನು ನೋಡಿದರೆ ಮೇ 10ರಂದು ನಡೆಯುವ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಿರೀಕ್ಷೆ ಮಾಡಲಾಗಿದೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಬಿಜೆಪಿಯಿಂದ ಹಾಲಿ ಶಾಸಕ ಕೆ. ಬಿ. ಅಶೋಕ್ ನಾಯ್ಕ್, ಕಾಂಗ್ರೆಸ್‌ನಿಂದ ಡಾ. ಶ್ರೀನಿವಾಸ ಕರಿಯಣ್ಣ ಮತ್ತು ಜೆಡಿಎಸ್‌ನಿಂದ ಶಾರದಾ ಪೂರ್ಯನಾಯ್ಕ್ ಅಭ್ಯರ್ಥಿಗಳು. ಕೆ. ಎಸ್. ಈಶ್ವರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರಭಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ. ಆದರೆ ಈ ಬಾರಿ ಇಬ್ಬರೂ ನಾಯಕರು ಚುನಾವಣಾ ರಾಜಕೀಯಿಂದ ನಿವೃತ್ತಿ ಪಡೆದಿರುವುದು ಕ್ಷೇತ್ರದ ಮೇಲೆ ಪ್ರಭಾವ ಬೀರಲಿದೆಯೇ?.

2018ರ ಚುನಾವಣೆಯಲ್ಲಿ ಎದುರಾಳಿಯಾಗಿದ್ದ ಮೂರು ಜನರು ಸಹ ಈ ಬಾರಿಯೂ ಅದೇ ಪಕ್ಷದಿಂದ ಎದುರಾಳಿಗಳು. ಶಿವಮೊಗ್ಗ ಗ್ರಾಮಾಂತರದಲ್ಲಿ ಜೆಡಿಸ್ ಪಕ್ಷವನ್ನು ಕಡೆಗಣಿಸುವಂತಿಲ್ಲ. ಶಾರದಾ ಪೂರ್ಯನಾಯ್ಕ್ ಕ್ಷೇತ್ರದ ಮಾಜಿ ಶಾಸಕರು. ಮೂರು ಚುನಾವಣೆಗಳಿಂದ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಿದ್ದಾರೆ. 2013ರ ಚುನಾವಣೆಯಲ್ಲಿ 48,639 ಮತಗಳನ್ನು ಪಡೆದು ಶಾಸಕಿಯಾಗಿ ಆಯ್ಕೆಯಾಗಿದ್ದರು. ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದರು.
ಪಕ್ಷಗಳ ಬಲಾಬಲ; ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ 2008ರಲ್ಲಿ ಬಿಜೆಪಿಯ ಕೆ. ಜಿ. ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿಯೂ ಅವರು ಬಿಜೆಪಿ ಅಭ್ಯರ್ಥಿಯಾದರು. ಆದರೆ ಬಿಜೆಪಿ ಮತ್ತು ಕೆಜೆಪಿ ನಡುವಿನ ಪೈಪೋಟಿಯಲ್ಲಿ ಕೆಜೆಪಿಯ ಜಿ. ಬಸವಣ್ಣಪ್ಪ 38,530 ಮತಗಳನ್ನು ಪಡೆದು ಮತ ವಿಭಜನೆ ಮಾಡಿದರು. ಬಿಜೆಪಿ, ಕೆಜೆಪಿ ಗೊಂದಲದಲ್ಲಿ ಗೆಲುವು ಜೆಡಿಎಸ್‌ಗೆ ಸಿಕ್ಕಿತು. 2018ರಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಮಾಡಿ ಕೆ. ಬಿ. ಅಶೋಕ್ ನಾಯ್ಕ್ ಕಣಕ್ಕಿಳಿಸಿತು. 69,326 ಮತಗಳನ್ನು ಪಡೆದು ಗೆಲುವು ಸಾಧಿಸಿದರು.

ಕಾಂಗ್ರೆಸ್‌ನಿಂದ ಈ ಬಾರಿಯ ಚುನಾವಣೆಗೂ ಸಹ ಡಾ. ಶ್ರೀನಿವಾಸ ಕರಿಯಣ್ಣ ಅಭ್ಯರ್ಥಿ. ಮಾಜಿ ಶಾಸಕ ಕರಿಯಣ್ಣ ಅವರ ಪುತ್ರ 2008, 2013 ಮತ್ತು 2018ರ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಈ ಬಾರಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಬಂಜಾರ ಸಮುದಾಯಕ್ಕೆ ಟಿಕೆಟ್ ನೀಡಿದ್ದು, ಕಾಂಗ್ರೆಸ್ ಸಹ ಅಭ್ಯರ್ಥಿ ಬದಲಾವಣೆ ಮಾಡುವ ಸಾಹಸ ಮಾಡಿಲ್ಲ.
2018ರಲ್ಲಿ ಡಾ. ಶ್ರೀನಿವಾಸ ಕರಿಯಣ್ಣ 33,493. 2013ರ ಚುನಾವಣೆಯಲ್ಲಿ 35,640 ಮತ್ತು 2008ರ ಚುನಾವಣೆಯಲ್ಲಿ 32,714 ಮತಗಳನ್ನು ಪಡೆದಿದ್ದಾರೆ. 2013 ಮತ್ತು 2018ರಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ಜೋರಾಗಿದ್ದರೂ ಸಹ ಡಾ. ಶ್ರೀನಿವಾಸ ಕರಿಯಣ್ಣ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ.
ಜೆಡಿಎಸ್‌ನ ಶಾರದಾ ಪೂರ್ಯನಾಯ್ಕ್ ಸಹ ಪ್ರಬಲ ಅಭ್ಯರ್ಥಿ. 2008ರಲ್ಲಿ 26,644 ಮತ ಪಡೆದರು. 2013ರಲ್ಲಿ 48,639 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾದರು. 2018ರ ಚುನಾವಣೆಯಲ್ಲಿ 65,549 ಮತಗಳನ್ನು ಪಡೆದು ಎರಡನೇ ಸ್ಥಾನವನ್ನುಗಳಿಸಿದರು.
ಮೂರು ಚುನಾವಣೆ; ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಕಂಡಿರುವುದು ಮೂರು ಚುನಾವಣೆಗಳನ್ನು ಮಾತ್ರ. ಆದರೆ ಕಾಂಗ್ರೆಸ್ ನಾಯಕರಲ್ಲಿ ಕ್ಷೇತ್ರ ಗೆಲ್ಲಲಾಗಿಲ್ಲ ಎಂಬ ನೋವಿದೆ. ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬೆಂಬಲಿಗರು ಅಧಿಕವಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂಬ ಕಾರಣಕ್ಕಾಗಿಯೇ ಬಿಜೆಪಿಯನ್ನು ಜನರು ಬೆಂಬಲಿಸಿದ್ದರು. ಆದರೆ ಈ ಬಾರಿ ಚಿತ್ರಣವೇ ಬದಲಾಗುವ ನಿರೀಕ್ಷೆ ಇದೆ.
ಜೆಡಿಎಸ್‌ನ ಶಾರದಾ ಪೂರ್ಯನಾಯ್ಕ್ 2013ರಲ್ಲಿ ಗೆದ್ದಾಗ ಉತ್ತಮ ಕೆಲಸಗಳನ್ನು ಮಾಡಿದ್ದರು. ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರು ಹೆಚ್ಚಾಗಿರುವುದರಿಂದ ಜೆಡಿಎಸ್ ಪಕ್ಷಕ್ಕೆ ಈ ಬಾರಿಯು ಬೆಂಬಲ ಸಿಗಲಿದೆ ಎಂಬ ಮಾತಿದೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಕ್ಷೇತ್ರಕ್ಕೆ ಆಗಮಿಸಿದಾಗ ಭಾರೀ ಬೆಂಬಲ ವ್ಯಕ್ತವಾಗಿತ್ತು.












Click it and Unblock the Notifications