ಶಿವಮೊಗ್ಗ : ಹೋರಿ ಬೆದರಿಸುವ ಸ್ಪರ್ಧೆ, ಪೊಲೀಸರ ಮೇಲೆ ಕಲ್ಲು ತೂರಾಟ
ಶಿವಮೊಗ್ಗ, ಅಕ್ಟೋಬರ್ 22 : ಹೋರಿ ಬೆದರಿಸುವ ಸ್ಪರ್ಧೆ ತಡೆದ ಪೊಲೀಸರು ಹಾಗೂ ಜನರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಸೊರಬದಲ್ಲಿ ನಡೆದಿದೆ. ಪೊಲೀಸರ ಮೇಲೆ ಜನರು ಕಲ್ಲು ತೂರಾಟ ನಡೆಸಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಭಾನುವಾರ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಜಡೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೀಪಾವಳಿ ನಂತರ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ನಿರ್ಬಂಧ ಹೇರಿತ್ತು.

ಇಂದು ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆ ಮಾಡಲು ಗ್ರಾಮಸ್ಥರು ಸಿದ್ಧತೆ ನಡೆಸಿದ್ದರು. ಈ ಸಂದರ್ಭದಲ್ಲಿ ಆಗಮಿಸಿದ ಪೊಲೀಸರು ಇದನ್ನು ತಡೆ ನೀಡಿದರು. ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯತು.
ಆಕ್ರೋಶ ಗೊಂಡ ಕೆಲವು ಗ್ರಾಮಸ್ಥರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದ ಇಬ್ಬರು ಪೊಲೀಸರು ಗಾಯಗೊಂಡರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆ ಮಾಡದಂತೆ ಪೊಲೀಸ್ ಇಲಾಖೆ ಮೊದಲೇ ಸೂಚನೆ ನೀಡಿತ್ತು.












Click it and Unblock the Notifications