ಸೊರಬ ಚುನಾವಣಾ ಫಲಿತಾಂಶ 2023; ಮಧು ಬಂಗಾರಪ್ಪ ಗೆಲುವು
ಶಿವಮೊಗ್ಗ, ಮೇ 13; ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಸಹೋದರರ ಸವಾಲಿನಲ್ಲಿ ಕಾಂಗ್ರೆಸ್‌ನ ಮಧು ಬಂಗಾರಪ್ಪ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಕುಮಾರ್ ಬಂಗಾರಪ್ಪರನ್ನು ಸೋಲಿಸಿದ್ದಾರೆ.
ಬಿಜೆಪಿಯ ಕುಮಾರ್ ಬಂಗಾರಪ್ಪ 53794 ಮತಗಳನ್ನು ಪಡೆದಿದ್ದಾರೆ. ಮಧು ಬಂಗಾರಪ್ಪ 97932 ಮತಗಳನ್ನು ಪಡೆದಿದ್ದಾರೆ.
ಹಿಂದಿನ ಅಪ್‌ಡೇಟ್; ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಧು ಬಂಗಾರಪ್ಪ ಭಾರೀ ಮುನ್ನಡೆ ಪಡೆದುಕೊಂಡಿದ್ದಾರೆ. 45,532 ಮತಗಳನ್ನು ಅವರು ಪಡೆದಿದ್ದು, ಬಿಜೆಪಿಯ ಕುಮಾರ್ ಬಂಗಾರಪ್ಪ 24,911 ಮತಗಳನ್ನು ಪಡೆದಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ಬಾರಿಯೂ ಗಮನ ಸೆಳೆಯುವ ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಸೊರಬ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪುತ್ರರು ಎದುರಾಳಿಗಳು. ಹಾಲಿ ಶಾಸಕರು ಬಿಜೆಪಿಯ ಕುಮಾರ್ ಬಂಗಾರಪ್ಪ. ಎದುರಾಳಿ ಕಾಂಗ್ರೆಸ್‌ನ ಮಧು ಬಂಗಾರಪ್ಪ.

ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದ ಮಧು ಬಂಗಾರಪ್ಪ ಈ ಬಾರಿ ಕಾಂಗ್ರೆಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಪಕ್ಷದೊಳಗಿನ ಅಸಮಾಧಾನದ ಜೊತೆಗೆ ಸಹೋದರನ ವಿರುದ್ಧವೂ ಕುಮಾರ್ ಬಂಗಾರಪ್ಪ ಹೋರಾಟ ನಡೆಸಬೇಕಿದೆ.
ದಿ. ಎಸ್. ಬಂಗಾರಪ್ಪ ಇಬ್ಬರು ಪುತ್ರರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಪುತ್ರ ಡಾ. ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಸಹ ಕಾಂಗ್ರೆಸ್ ಸೇರಿ ಮಧು ಬಂಗಾರಪ್ಪ ಬೆಂಬಲಕ್ಕೆ ನಿಂತಿದ್ದಾರೆ. ಸಹೋದರರ ನಡುವೆ ಜೆಡಿಎಸ್‌ನ ಬಸೂರು ಚಂದ್ರೇಗೌಡ ಅಭ್ಯರ್ಥಿ.
2004ರ ಚುನಾವಣೆಯಲ್ಲಿ ಮೊದಲ ಬಾರಿಗೆ ಕುಮಾರ್ ಬಂಗಾರಪ್ಪ (ಕಾಂಗ್ರೆಸ್), ಮಧು ಬಂಗಾರಪ್ಪ (ಬಿಜೆಪಿ) ಮುಖಾಮುಖಿಯಾದರು. 44,677 ಮತಗಳನ್ನು ಪಡೆದು ಕುಮಾರ್ ಬಂಗಾರಪ್ಪ ಗೆದ್ದರು. 32,748 ಮತಗಳನ್ನು ಪಡೆದು ಬಿಜೆಪಿಯ ಮಧು ಬಂಗಾರಪ್ಪ ಸೋಲು ಕಂಡರು.

2008ರಲ್ಲಿ ಬಿಜೆಪಿಯ ಹರತಾಳು ಹಾಲಪ್ಪ ಸಹೋದರರಿಗೆ ಸೋಲಿನ ರುಚಿ ತೋರಿಸಿದ್ದರು. ಕಾಂಗ್ರೆಸ್‌ನ ಕುಮಾರ್ ಬಂಗಾರಪ್ಪ 32,499 ಮತ ಪಡೆದು ಸೋಲು ಕಂಡರು. ಇನ್ನು ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿದ್ದ ಮಧು ಬಂಗಾರಪ್ಪ 31,135 ಮತಗಳನ್ನು ಪಡೆದಿದ್ದರು.
ಸೊರಬದ ಚುನಾವಣಾ ಚಿತ್ರಣ 2013ರಲ್ಲಿ ಬದಲಾಯಿತು. ಮಧು ಬಂಗಾರಪ್ಪ ಜೆಡಿಎಸ್‌ನಿಂದ ಕಣಕ್ಕಿಳಿದು 58,541 ಮತಗಳನ್ನು ಪಡೆದು ಗೆದ್ದರು. ಕೆಜೆಪಿ ಅಭ್ಯರ್ಥಿಯಾಗಿದ್ದ ಹರತಾಳು ಹಾಲಪ್ಪ 37,316 ಮತ ಪಡೆದು ಸೋತರು. ಕಾಂಗ್ರೆಸ್‌ನ ಕುಮಾರ್ ಬಂಗಾರಪ್ಪ 33,176 ಮತಗಳನ್ನು ಪಡೆದು 3ನೇ ಸ್ಥಾನ ಪಡೆದರು.
2018ರ ಚುನಾವಣೆಯ ಹೊತ್ತಿಗೆ ಹರತಾಳು ಹಾಲಪ್ಪ ಸಾಗರಕ್ಕೆ ವಲಸೆ ಹೋದರು. ಅಲ್ಲಿ ಬಿಜೆಪಿ ಟಿಕೆಟ್ ಪಡೆದು ಗೆದ್ದರು. ಕಾಂಗ್ರೆಸ್‌ನಲ್ಲಿದ್ದ ಕುಮಾರ್ ಬಂಗಾರಪ್ಪ ಬಿಜೆಪಿ ಸೇರಿದರು. ಸೊರಬದಲ್ಲಿ ಕಣಕ್ಕಿಳಿದು 72,091 ಮತ ಪಡೆದು ಜೆಡಿಎಸ್‌ನ ಮಧು ಬಂಗಾರಪ್ಪ (58,805) ಸೋಲಿಸಿದರು.
ಈ ಬಾರಿ ಮಧು ಬಂಗಾರಪ್ಪ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ ಕಣಕ್ಕಿಳಿದಿದ್ದಾರೆ. ಕುಮಾರ್ ಬಂಗಾರಪ್ಪ ಬಿಜೆಪಿ ಟಿಕೆಟ್‌ನಲ್ಲಿಯೇ ಸ್ಪರ್ಧಿಸಿದ್ದಾರೆ. ಎಸ್. ಬಂಗಾರಪ್ಪ ಪುತ್ರರಲ್ಲಿ ಯಾರಿಗೆ ಜಯ?.












Click it and Unblock the Notifications