ಹಿಂದೂಗಳಿಗೆ ಮಾತ್ರ ಮಳಿಗೆ; ಶಿವಮೊಗ್ಗ ಮಾರಿಕಾಂಬ ದೇವಿ ಜಾತ್ರೆಯಲ್ಲಿ ಹೇಗಿದೆ ಮಳಿಗೆ ವ್ಯವಸ್ಥೆ?
ಶಿವಮೊಗ್ಗ, ಮಾರ್ಚ್ 24: ಹಿಂದೂ ಸಂಘಟನೆಗಳ ಕಾರ್ಯಕರ್ತರು ಪಟ್ಟು ಹಿಡಿದಿದ್ದರಿಂದ ಹಿಂದೂ ಧರ್ಮೀಯರ ಹೊರತು ಬೇರೆಯವರಿಗೆ ಮಳಿಗೆ ನೀಡಿಲ್ಲ. ಇದರಿಂದ ಶಿವಮೊಗ್ಗದ ಕೋಟೆ ಮಾರಿಕಾಂಬ ದೇವಿ ಜಾತ್ರೆಯ ಮಳಿಗೆಗಳ ಸಂಖ್ಯೆ ಕಡಿಮೆಯಾಗಿದೆ.
ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಯ ಮಳಿಗೆಗಳ ಸ್ಥಾಪನೆ ವಿಚಾರ ಗೊಂದಲಕ್ಕೆ ಕಾರಣವಾಗಿತ್ತು. ಅನ್ಯ ಧರ್ಮೀಯರಿಗೆ ಮಳಿಗೆ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದವು.
ಅಂಗಡಿಗಳ ಮೇಲೆ ರಾರಾಜಿಸಿದ ಕೇಸರಿ ಬಾವುಟ
ಜಾತ್ರೆಯಲ್ಲಿ ಅಂಗಡಿಗಳ ಸಂಖ್ಯೆ ಕಡಿಮೆ ಇದೆ. ಸುಮಾರು ನೂರು ಮಳಿಗೆಗಳನ್ನು ಸ್ಥಾಪಿಸಲಾಗಿದೆ. "ಈ ಬಾರಿ ಹಿಂದೂ ಧರ್ಮೀಯರಿಗೆ ಮಾತ್ರ ಮಳಿಗೆ ಸ್ಥಾಪನೆಗೆ ಅವಕಾಶ ನೀಡಲಾಗಿದೆ. ಒಂದೇ ಒಂದು ಮಳಿಗೆ ಕೂಡ ಅನ್ಯ ಧರ್ಮೀಯರದ್ದಿಲ್ಲ," ಎಂದು ಹಿಂದೂ ಸಂಘಟನೆಗಳ ಮುಖಂಡ ದೀನದಯಾಳು ತಿಳಿಸಿದ್ದಾರೆ.

ಜಾತ್ರೆ ಅಂಗವಾಗಿ ಸ್ಥಾಪನೆ ಮಾಡಿರುವ ಪ್ರತಿ ಅಂಗಡಿಗಳ ಮುಂದೆ ಕೇಸರಿ ಧ್ವಜ ರಾರಾಜಿಸುತ್ತಿವೆ. ಎಲ್ಲಾ ಮಳಿಗೆಗಳ ಮೇಲೆ ಭಗವಾಧ್ವಜ ಕಟ್ಟಲಾಗಿದೆ. ಹಿಂದೂಗಳಿಗೆ ಮಾತ್ರ ಮಳಿಗೆ ನೀಡಲಾಗಿದೆ ಎಂಬುದರ ಸಂಕೇತವಾಗಿ ಧ್ವಜಗಳನ್ನು ಕಟ್ಟಲಾಗಿದೆ.
ಜಾತ್ರೆಯಲ್ಲೂ ಹರ್ಷಗೆ ನಮನ
ಇತ್ತೀಚೆಗೆ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಹರ್ಷಗೆ ಮಾರಿ ಜಾತ್ರೆಯಲ್ಲೂ ನಮನ ಸಲ್ಲಿಸಲಾಯಿತು. ಕೋಟೆ ಮಾರಿಕಾಂಬಾ ದೇವಿ ದೇವಸ್ಥಾನದ ಬಳಿ ಹರ್ಷ ಸ್ಮರಣೆಯಲ್ಲಿ ಫ್ಲೆಕ್ಸ್ ಕಟ್ಟಲಾಗಿದೆ. ಇನ್ನು ಜಾತ್ರೆಯ ಕೆಲವು ಮಳಿಗೆಗಳಲ್ಲೂ ಹರ್ಷನ ಭಾವಚಿತ್ರಗಳನ್ನು ಹಾಕಲಾಗಿದೆ.
ಮಳಿಗೆಗಳ ಬಳಿ ಜನವೋ ಜನ
ಕೋಟೆ ರಸ್ತೆಯಲ್ಲಿ ಸ್ಥಾಪನೆ ಮಾಡಲಾಗಿರುವ ಮಳಿಗೆಗಳು ಶ್ರೀ ಮಾರಿಕಾಂಬಾ ದೇವಿ ಜಾತ್ರೆಯ ಮೆರಗು ಹೆಚ್ಚಿಸಿವೆ. ಜಾತ್ರೆಗೆ ಬಂದ ಭಕ್ತರು ಮಳಿಗೆಗಳ ಮುಂದೆ ಗುಂಪುಗೂಡಿದ್ದು, ಹಲವು ವಸ್ತುಗಳ ಖರೀದಿಯಲ್ಲಿ ಮಗ್ನರಾಗಿದ್ದಾರೆ.

ನೂರು ಮಳಿಗೆಗಳಿಗೆ ಅವಕಾಶ
ಈ ಬಾರಿ ಮಾರಿಕಾಂಬಾ ಜಾತ್ರೆಯಲ್ಲಿ ಸುಮಾರು ನೂರು ಮಳಿಗೆಗಳನ್ನು ಹಾಕಲಾಗಿದೆ. ವಿವಿಧ ತಿಂಡಿ, ತಿನಿಸು, ಕ್ಯಾಂಟೀನ್, ಅಲಂಕಾರಿಕ ವಸ್ತುಗಳು, ಟ್ಯಾಟೋ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಜಾತ್ರೆಗೆ ಬಂದ ಜನರು ಬಹುತೇಕ ಎಲ್ಲಾ ಮಳಿಗೆಗಳ ಮುಂದೆ ಗುಂಪುಗೂಡಿದ್ದಾರೆ. ತಮ್ಮಿಷ್ಟದ ವಸ್ತುಗಳ ಖರೀದಿಯಲ್ಲಿ ನಿರತವಾಗಿದ್ದಾರೆ.
ಮಾನಿನಿಯರ ಮನ ಸೆಳೆದ ನಾವೆಲ್ಟಿ
ವಿವಿಧ ಬಗೆಯ ಸರಗಳು, ಹಲವು ಡಿಸೈನ್ ಬಳೆಗಳು ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳು ಮಾನಿನಿಯರ ಮನ ಸೆಳೆದಿವೆ. ನಾವೆಲ್ಟಿ ಶಾಪ್‌ಗಳ ಮುಂದೆ ಮಹಿಳೆಯರು, ಯುವತಿಯರು ಸಾಲುಗಟ್ಟಿ ನಿಂತಿದ್ದಾರೆ. ತಮ್ಮಿಷ್ಟದ ಚೈನು, ಬಳೆ, ಇಯರ್ ರಿಂಗ್ಸ್ ಆಯ್ಕೆಯಲ್ಲಿ ತೊಡಗಿದ್ದಾರೆ.
ಬಾಜಿ ಕಟ್ಟಿ ಆಟ ಆಡು
ಇನ್ನು ಜಾತ್ರೆಯಲ್ಲಿ ವಿವಿಧ ಆಟಗಳ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಬಾಜಿ ಕಟ್ಟಿ ಆಡುವ ಆಟಗಳು ಹಲವರನ್ನು ಸೆಳೆಯುತ್ತಿವೆ. ಹೆಚ್ಚಿನ ಸಂಖ್ಯೆಯ ಯುವಕರು ಈ ಆಟಗಳಲ್ಲಿ ಮಗ್ನರಾಗಿದ್ದಾರೆ.

ಹಠಕ್ಕೆ ಬೀಳುವ ಮಕ್ಕಳು
ಆಟಿಕೆಗಳ ಮಳಿಗೆಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಆಟಿಕೆಗಳನ್ನು ಕೊಡಿಸುವಂತೆ ಮಕ್ಕಳು ಪೋಷಕರನ್ನು ದುಂಬಾಲು ಬೀಳುವುದು, ಹಠ ಹಿಡಿಯವುದು ಜಾತ್ರೆಯಲ್ಲಿ ಸಾಮಾನ್ಯವಾಗಿವೆ. ಬಲೂನು, ಪೀಪಿಗಳು ಸೇರಿದಂತೆ ವಿವಿಧ ಆಟಿಕೆಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಅನ್ಯ ಧರ್ಮಿಯರಿಗೆ ಮಳಿಗೆ ಹಾಕಲು ಅವಕಾಶ ಇಲ್ಲದಿರುವುದು ಮಳಿಗೆಗಳ ಸಂಖ್ಯೆ ಕಡಿಮೆ ಇದೆ. ಆದರೆ ಜಾತ್ರೆಯ ಗಮ್ಮತ್ತಿಗೇನು ಕೊರತೆ ಇಲ್ಲವಾಗಿದೆ. ಬೆಳಗ್ಗೆಯಿಂದಲೇ ಮಳಿಗೆಗಳು ಜನರನ್ನು ಸೆಳೆಯುತ್ತಿವೆ.
ಮಾರಿ ಗದ್ದುಗೆಯತ್ತ ಸಹಸ್ರ ಭಕ್ತರು
ಶಿವಮೊಗ್ಗದ ಕೋಟೆ ಮಾರಿಕಾಂಬಾ ದೇವಿ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದೆ. ದೇವಿಯನ್ನು ಮಾರಿ ಗದ್ದುಗೆ ಮೇಲೆ ಪ್ರತಿಷ್ಠಾಪನೆ ಮಾಡಲಾಗಿದೆ. ದೊಡ್ಡ ಸಂಖ್ಯೆಯ ಭಕ್ತರು ದೇಗುಲಕ್ಕೆ ಆಗಮಿಸುತ್ತಿದ್ದು, ಹರಕೆ ತೀರಿಸಿ, ಪೂಜೆ ಸಲ್ಲಿಸಿ ಪುನೀತರಾಗುತ್ತಿದ್ದಾರೆ.
ಬೇವಿನ ಹರಕೆ ತೀರಿಸುತ್ತಿದ್ದಾರೆ
ಶಿವಮೊಗ್ಗ ನಗರದ ವಿವಿಧೆಡೆಯಿಂದ ಜನರು ಕಾಲ್ನಡಿಗೆಯಲ್ಲಿ ಬಂದು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಬೇವಿನ ಉಡುಗೆ ತೊಟ್ಟು ಬಂದು ದೇವಿಗೆ ಹರಕೆ ತೀರಿಸುತ್ತಿದ್ದಾರೆ. ಬೇವಿನ ಉಡುಗೆ ತೆಗೆದಿರಿಸಲು ದೇಗುಲದ ಮುಂದೆಯೇ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ದೇವಿ ದರ್ಶನಕ್ಕೆ ಸಕಲ ವ್ಯವಸ್ಥೆ
ಜಾತ್ರೆಯಲ್ಲಿ ನೂಕುನುಗ್ಗಲು ತಗ್ಗಿಸಲು ಈ ಬಾರಿ ದೇವಸ್ಥಾನದ ಸುತ್ತಮುತ್ತ ಯಾವುದೇ ಅಂಗಡಿಗಳಿಗೆ ಅವಕಾಶ ಕಲ್ಪಿಸಿಲ್ಲ. ಹಾಗಾಗಿ ಜನ ಸಂಚಾರ ಸುಗಮವಾಗಿದೆ. ದೇವಸ್ಥಾನದ ಒಳಗೆ ಸರತಿಯಲ್ಲಿ ಜನರು ತೆರಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಗಣ್ಯರು, ಪಾಸ್ ಹೊಂದಿರುವವರಿಗೆ ಪ್ರತ್ಯೇಕ ಪ್ರವೇಶ ಕಲ್ಪಿಸಲಾಗಿದೆ.
ದೇವಸ್ಥಾನದ ಬಾಗಿಲಲ್ಲೂ ಪೂಜೆ
ಮತ್ತೊಂದೆಡೆ ದೇವಸ್ಥಾನದ ಬಾಗಿಲಲ್ಲೂ ಜನರು ಪೂಜೆ ಸಲ್ಲಿಸುತ್ತಿದ್ದಾರೆ. ದೇಗುಲದ ಮುಖ್ಯ ದ್ವಾರದ ಮುಂಭಾಗ ಹೂವು, ಹಣ್ಣು ಇಟ್ಟು ಪೂಜೆ ಸಲ್ಲಿಸಲಾಗುತ್ತಿದೆ. ತಂಬಿಟ್ಟಿನ ದೀಪ ಬೆಳಗಿ ಮಹಿಳೆಯರು ಹರಕೆ ತೀರಿಸುತ್ತಿದ್ದಾರೆ.
ಸರ್ವ ಭಕ್ತರಿಗೂ ಪ್ರಸಾದ
ಇನ್ನು ದೇವಿಯ ದರ್ಶನಕ್ಕೆ ಬರುವ ಸರ್ವ ಭಕ್ತರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದೆ. ಇಲ್ಲಿಯೆ ಪ್ರಸಾದ ಸೇವನೆಗೆ ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications