ಮಲೆನಾಡಿನಲ್ಲಿ ಹೆಚ್ಚಾದ ಕಳ್ಳತನ: ಸಾಗರ ತಾಲ್ಲೂಕಿನ ಮೂರು ಮನೆಗಳಲ್ಲಿ ಹಾಡಹಗಲೇ ಕಳವು
ಶಿವಮೊಗ್ಗ, ಅಕ್ಟೋಬರ್ 30: ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶದ ಒಂಟಿ ಮನೆಗಳಲ್ಲಿ ಒಂದಿಷ್ಟು ಆತಂಕ ಹುಟ್ಟಿಸಿದೆ. ಈ ಭಾಗದಲ್ಲಿ ಕೊಲೆ ಹಾಗೂ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಮೂರು ಮನೆಗಳಲ್ಲಿ ಕಳವು ಪ್ರಕರಣ ನಡೆದಿದೆ.
ಸಾಗರ ತಾಲೂಕಿನ ಚುಟ್ಟಿಕೆರೆ, ತುಮರಿ ಮತ್ತು ಬ್ರಾಹ್ಮಣ ಕೆಪ್ಪಿಗೆಯಲ್ಲಿ ಹಾಡಹಗಲೇ ಕಳ್ಳತನ ನಡೆದಿದೆ. ನಗರ ಪ್ರದೇಶಗಳಲ್ಲಿ ಪೊಲೀಸ್ ಚುರುಕಿನ ಚಟುವಟಿಕೆ ನಡೆಸುತ್ತಾರೆ ಎಂಬ ಕಾರಣಕ್ಕೆ, ಗ್ರಾಮಾಂತರ ಭಾಗಗಳಲ್ಲಿ ಕಳವು ಸುಲಿಗೆ ಪ್ರಕರಣ ಹೆಚ್ಚಾಗುತ್ತಿವೆಯಾ ಎಂಬ ಶಂಕೆಯೂ ವ್ಯಕ್ತವಾಗುತ್ತಿವೆ.
ಕೊರೊನಾ ಲಾಕ್ ಡೌನ್ ನಿಂದ ಆರ್ಥಿಕವಾಗಿ ಕಂಗಾಲಾಗಿರುವ ಜನ, ಇಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳಲು ಆರಂಭಿಸಿದ್ದಾರೆ ಎಂಬ ಅನುಮಾನ ಸಹ ಮೂಡಿದೆ.

ಬ್ರಾಹ್ಮಣ ಕೆಪ್ಪಿಗೆಯಲ್ಲಿ ಚಕ್ಕೋಡು ರಾಜು ಮನೆಯಲ್ಲಿ 3 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 20 ಸಾವಿರ ನಗದು ಹಣ ಕಳವು ಮಾಡಲಾಗಿದೆ. ಉಳಿದ ಎರಡು ಮನೆಗಳ ಕಳ್ಳತನದ ವಸ್ತು, ಹಣ ಬಗ್ಗೆ ಮಾಹಿತಿ ಅಧಿಕೃತ ಆಗಿಲ್ಲ. ತುಮರಿಯಲ್ಲಿ ಲಕ್ಷ್ಮಣರ ಕುಟುಂಬ ಮದುವೆಗೆ ಹೋಗಿದ್ದ ಕಾರಣ ಮಾಹಿತಿ ಲಭ್ಯವಾಗಿಲ್ಲ.
ಕರೂರು ಹೋಬಳಿಯಲ್ಲಿ ಜೋಡಿ ಕೊಲೆಯ ಪತ್ತೆಗೆ ಪೊಲೀಸ್ ಹರಸಾಹಸ ಪಡುತ್ತಿದ್ದ ವೇಳೆಯಲ್ಲಿಯೇ ಕಳವು ಪ್ರಕರಣ ಅಲ್ಲಿನ ಜನರಲ್ಲಿ ಭಯ ಹುಟ್ಟಿಸಿದೆ. ಪ್ರಕರಣ ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.












Click it and Unblock the Notifications