ಶಿವಮೊಗ್ಗ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಲಿದೆಯೇ ಬಂಗಾರಪ್ಪ ಪುತ್ರರಿಬ್ಬರ ಈ ಸುದ್ದಿ?
ಕರ್ನಾಟಕ ರಾಜಕೀಯದಲ್ಲಿ ಶಿವಮೊಗ್ಗ ಜಿಲ್ಲೆಗೆ ತನ್ನದೇ ಆದ ಸ್ಥಾನವಿದೆ. ಯಾಕೆಂದರೆ, ರಾಜ್ಯ ರಾಜಕಾರಣದಲ್ಲಿ ಮಿಂಚಿದ ಮತ್ತು ಮಿಂಚುತ್ತಿರುವ ಮಾಜಿ/ಹಾಲೀ ಮುಖಂಡರಿಗೆ ಶಿವಮೊಗ್ಗ ಜಿಲ್ಲೆ ಕರ್ಮಭೂಮಿ ಇದ್ದಂತೆ. ಹಾಗಾಗಿಯೇ, ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಮೂರು ಪ್ರಮುಖ ಪಕ್ಷಗಳು ಪ್ರಯತ್ನಿಸುತ್ತಲೇ ಇರುತ್ತದೆ.
ಸದ್ಯ, ಶಿವಮೊಗ್ಗ ಜಿಲ್ಲೆಯಲ್ಲಿ ಪಾಬಲ್ಯ ಮೆರೆಯುತ್ತಿರುವ ಬಿಜೆಪಿಯ ನಾಗಾಲೋಟವನ್ನು ಶತಾಯಗತಾಯು ನಿಲ್ಲಿಸಲೇ ಬೇಕೆಂದು ಹೊರಟಿರುವ ಕಾಂಗ್ರೆಸ್, ಹೊಸ ಪ್ರಯತ್ನಕ್ಕೆ ಕೈಹಾಕಿದೆ ಎನ್ನುವ ಸುದ್ದಿಯಿದೆ. ಇದು ಎಷ್ಟರ ಮಟ್ಟಿಗೆ ಫಲಕಾರಿಯಾಗಲಿದೆ ಎನ್ನುವುದು ನಂತರದ ವಿಚಾರವಾದರೂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ವಿಚಾರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿವಂಗತ ಸಾರೇಕೊಪ್ಪ ಬಂಗಾರಪ್ಪನವರ ಪುತ್ರರಿಬ್ಬರು ಬೇರೆ ಬೇರೆ ತೀರದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕುಮಾರ್ ಬಂಗಾರಪ್ಪ, ತನ್ನ ಒಡಹುಟ್ಟಿದ ಸಹೋದರ, ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಧು ಬಂಗಾರಪ್ಪ ಅವರನ್ನು ಸೋಲಿಸಿದ್ದರು.
ಇದಾದ ನಂತರ, ಬದಲಾದ ರಾಜಕೀಯ ಹೊಂದಾಣಿಕೆಯಂತೆ ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಜಂಟಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಅಲ್ಲೂ, ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಯಡಿಯೂರಪ್ಪನವರ ಪುತ್ರನ ವಿರುದ್ದ ಸೋಲುಂಡರು. ಇದಾದ ನಂತರ, ಮಧು ಬಂಗಾರಪ್ಪ ರಾಜಕೀಯದಲ್ಲಿ ಅಷ್ಟೊಂದು ಸಕ್ರಿಯರಾಗಿರಲಿಲ್ಲ. ಮುಂದೆ ಓದಿ..

ಸತತ ಸೋಲಿನಿಂದ ಹತಾಶರಾಗಿದ್ದ ಮಧು ಬಂಗಾರಪ್ಪ
ಸತತ ಸೋಲಿನಿಂದ ಹತಾಶರಾಗಿದ್ದ ಮಧು ಬಂಗಾರಪ್ಪ, ಜೆಡಿಎಸ್ ಪಕ್ಷದ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿಲ್ಲ. ಮಧು , ಜೆಡಿಎಸ್ಸಿನಿಂದ ಒಂದು ಹೆಜ್ಜೆ ಹೊರಗಿಟ್ಟಿರುವ ಸುದ್ದಿ ರಹಸ್ಯವಾಗಿಯೇನೂ ಉಳಿದಿಲ್ಲ. ಈ ಸಂದರ್ಭವನ್ನು ಡಿ.ಕೆ.ಶಿವಕುಮಾರ್ ಬಳಸಿಕೊಂಡು, ಮಧು ಮತ್ತು ಕುಮಾರ್ ಸಹೋದರರಿಬ್ಬರನ್ನು ತಮ್ಮ ಪಕ್ಷದತ್ತ ಸೆಳೆಯುವ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಈಡಿಗ ಸಮುದಾಯದವರೇ ಆಗಿರುವ ಬಿ.ಕೆ.ಹರಿಪ್ರಸಾದ್
ರಾಜ್ಯಸಭಾ ಸದಸ್ಯ ಮತ್ತು ಹೈಕಮಾಂಡ್ ಮಟ್ಟದಲ್ಲಿ ಪ್ರಬಾವಿಯಾಗಿರುವ ಬಿ.ಕೆ.ಹರಿಪ್ರಸಾದ್ ಅವರ ಮೂಲಕ ಸಹೋದರಿಬ್ಬರನ್ನು ಒಂದು ಗೂಡಿಸಲು ಡಿಕೆಶಿ ಪ್ರಯತ್ನಿಸುತ್ತಿದ್ದಾರೆ. ಈಡಿಗ ಸಮುದಾಯದವರೇ ಆಗಿರುವ ಹರಿಪ್ರಸಾದ್, ಸಹೋದರರ ಬಳಿ ಒಗ್ಗಟ್ಟಿನ ಮಂತ್ರವನ್ನು ಬೋಧಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ.

ಕುಮಾರ್ ಬಂಗಾರಪ್ಪ ಬಿಜೆಪಿ ಶಾಸಕ
ಕುಮಾರ್ ಬಂಗಾರಪ್ಪ ಬಿಜೆಪಿ ಶಾಸಕರಾಗಿದ್ದರೂ, ಜಿಲ್ಲೆಯ ಇತರ ಮುಖಂಡರ ಬೆಂಬಲ ಇವರಿಗೆ ಅಷ್ಟಾಗಿ ಇಲ್ಲ. ಯಡಿಯೂರಪ್ಪನವರ ರಕ್ಷೆ ಮಾತ್ರ ಕುಮಾರ್ ಮೇಲಿರುವುದು. ಇನ್ನೇನು ಕೆಲವು ವರ್ಷಗಳಲ್ಲಿ ಬಿಎಸ್ವೈ ಸಕ್ರಿಯ ರಾಜಕಾರಣದಿಂದ ದೂರವಾಗುವ ಸಾಧ್ಯತೆಯಿದೆ. ಇದಾದ ನಂತರ ಕುಮಾರ್ ಬಂಗಾರಪ್ಪಗೆ ಗಾಡ್ ಫಾದರ್ ಇರುವುದಿಲ್ಲ ಎನ್ನುವ ವಿಚಾರವನ್ನು ಅವರಿಗೆ ಮನದಟ್ಟು ಮಾಡಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಶಿವಮೊಗ್ಗ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಲಿದೆಯೇ ಬಂಗಾರಪ್ಪ ಪುತ್ರರಿಬ್ಬರ ಈ ಸುದ್ದಿ
ಇದೇ ರೀತಿ, ಕಾಂಗ್ರೆಸ್ಸಿಗೆ ಮಧು ಬಂಗಾರಪ್ಪನವರನ್ನು ಸೇರ್ಪಡೆಗೊಳಿಸಿ, ಅವರನ್ನು ಲೋಕಸಭೆಯಿಂದ ಮತ್ತು ಕುಮಾರ್ ಬಂಗಾರಪ್ಪನವರಿಗೆ ಸೊರಬ ಕ್ಷೇತ್ರದ ಟಿಕೆಟ್ ನೀಡುವ ಆಫರ್ ಅನ್ನು ಮುಂದಿಡಲಾಗುತ್ತಿದೆ. ಸಹೋದರರಿಬ್ಬರು ವೈಷಮ್ಯವನ್ನು ಮರೆತು ಒಂದಾಗಿ ಶಿಮಮೊಗ್ಗದಲ್ಲಿ ಕಾಂಗ್ರೆಸ್ ಬೇರನ್ನು ಬಲಾಢ್ಯಗೊಳಿಸುವ ಗುರಿಯನ್ನು ಡಿ.ಕೆ.ಶಿವಕುಮಾರ್ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತೋ ಎನ್ನುವುದನ್ನು ಶಿವಮೊಗ್ಗದ ಮತದಾರನೇ ನಿರ್ಧರಿಸಬೇಕು.












Click it and Unblock the Notifications