ಬಂಡಾಯದ ಬೆಂಕಿಯಲ್ಲಿ ಬಿಜೆಪಿ: ಶಿವಮೊಗ್ಗ ಮೇಯರ್, 18 ಕಾರ್ಪೊರೇಟರ್‌ಗಳ ರಾಜೀನಾಮೆ- ಈಶ್ವರಪ್ಪ ಪರ ನಿಂತ ಬೆಂಬಲಿಗರು
ಶಿವಮೊಗ್ಗ, ಏಪ್ರಿಲ್ 12: ಬಿಜೆಪಿ ( BJP ) ವಿರುದ್ಧ ಪ್ರತಿಭಟನೆಯ ದ್ಯೋತಕವಾಗಿ ಶಿವಮೊಗ್ಗ ( Shivamogga ) ಮಹಾನಗರ ಪಾಲಿಕೆಯ ಮೇಯರ್ ಹಾಗೂ 18 ಕಾರ್ಪೊರೇಟರ್‌ಗಳು ರಾಜೀನಾಮೆ ನೀಡಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ( KS Eshwarappa ) ಅವರನ್ನು ಸಕ್ರಿಯ ರಾಜಕಾರಣದಿಂದ ಬಲವಂತವಾಗಿ ನಿವೃತ್ತಿಯಾಗಲು ಸೂಚಿಸಲಾಗಿದೆ ಎಂದು ಬೆಂಬಲಿಗರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಮೇಯರ್, ಉಪಮೇಯರ್ ಸೇರಿದಂತೆ 18 ಕಾರ್ಪೊರೇಟರ್‌ಗಳು ನಗರ ಬಿಜೆಪಿ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು 'ಟಿವಿ9 ಕನ್ನಡ' ವರದಿ ಮಾಡಿದೆ.

ಮಂಗಳವಾರ ಈಶ್ವರಪ್ಪ ಚುನಾವಣಾ ರಾಜಕೀಯ ತ್ಯಜಿಸುವ ನಿರ್ಧಾರವನ್ನು ಪ್ರಕಟಿಸಿದ ನಂತರ, ಅವರ ಬೆಂಬಲಿಗರು ಅವರ ನಿವಾಸದ ಹೊರಗೆ ಮತ್ತು ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಶ್ವರಪ್ಪ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪಕ್ಷದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಕಾರ್ಪೊರೇಟರ್‌ಗಳು ನಿರ್ಧಾರಿಸಿದ್ದಾರೆ. ಅವರು ಇಂದೇ ಬೆಂಗಳೂರಿಗೆ ಆಗಮಿಸಿ ಯಡಿಯೂರಪ್ಪ ಜೊತೆ ಮಾತನಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಈಶ್ವರಪ್ಪ ಬೆಂಬಲಿಗರನ್ನು ಸಮಾಧಾನಪಡಿಸಲು ಬಿಜೆಪಿ ಮುಖಂಡರು ಪಕ್ಷದ ಕಚೇರಿಯಲ್ಲಿ ಸಭೆ ಕರೆದಿದ್ದರು. ಆದರೆ ಇದು ಎರಡು ಬಣಗಳ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.
ಈಶ್ವರಪ್ಪ ಪ್ರಸ್ತುತ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಭಾಗದಿಂದ ಬಿಜೆಪಿ ಅಭ್ಯರ್ಥಿಯ ಹೆಸರನ್ನು ಇನ್ನೂ ಬಿಡುಗಡೆ ಮಾಡಿಲ್ಲ.
ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಮತ್ತು ನೀವೃತ್ತಿ ತೀರ್ಮಾನವೇ ಅಂತಿಮ ಎಂದು ಈಶ್ವರಪ್ಪ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಎಂಎಲ್‌ಸಿ ಆಯನೂರು ಮಂಜುನಾಥ್ ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಈಶ್ವರಪ್ಪ ಪುತ್ರ ಕಾಂತೇಶ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ದೆಹಲಿಗೆ ತೆರಳಿದ ಶೆಟ್ಟರ್
ಮುಂಬರುವ ರಾಜ್ಯ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ನಂತರ ಪಕ್ಷದೊಳಗೆ ಬಂಡಾಯ ಮುಂದುವರೆದಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಬುಧವಾರ ಮಧ್ಯಾಹ್ನ 2 ಗಂಟೆಗೆ ಭೇಟಿಯಾಗಲಿದ್ದಾರೆ.
'ನಡ್ಡಾ ನನಗೆ ಫೋನ್ ಮಾಡಿದ್ದರಿಂದ ನಾನು ದೆಹಲಿಗೆ ಹೋಗುತ್ತಿದ್ದೇನೆ. ಅವರು ನನ್ನನ್ನು ಚರ್ಚೆಗೆ ಬರಲು ಹೇಳಿದರು. ನಾನು ಸಕಾರಾತ್ಮಕ ಫಲಿತಾಂಶಕ್ಕಾಗಿ ಆಶಿಸುತ್ತೇನೆ. ಏನೇ ಆಗಲಿ ಪಕ್ಷದ ಒಳಿತಿಗಾಗಿ ನಾನು ದುಡಿಯುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ನಾಯಕರು ಎಲ್ಲವನ್ನೂ ಸ್ಪಷ್ಟಪಡಿಸುತ್ತಾರೆ' ಎಂದು ಶೆಟ್ಟರ್ ಹೇಳಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಅಂತಿಮಗೊಳಿಸುವ ಸಭೆಗಾಗಿ ದೆಹಲಿಯಲ್ಲಿದ್ದ ಬಿಎಸ್ ಯಡಿಯೂರಪ್ಪ ಅವರನ್ನು ಈಗಾಗಲೇ ಭೇಟಿ ಮಾಡಿದ್ದೇನೆ ಎಂದು ಶೆಟ್ಟರ್ ತಿಳಿಸಿದ್ದಾರೆ. 'ನನ್ನ ವಿಮಾನ ತಡವಾಗಿದ್ದರಿಂದ ನಾನು ನೇರವಾಗಿ ದೆಹಲಿಗೆ ಹೋಗುತ್ತಿದ್ದೇನೆ. ರಾಷ್ಟ್ರ ರಾಜಧಾನಿಯಿಂದ ಬಂದ ನಂತರ ಮತ್ತೊಮ್ಮೆ ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತೇನೆ' ಎಂದು ಅವರು ಹೇಳಿದ್ದಾರೆ.
ಬಿಜೆಪಿ ಟಿಕೆಟ್ ವಿಚಾರವಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ಬಿಜೆಪಿ ಒಡೆದು ಹೋಗಿದ್ದು, ಪತನವಾಗಲಿದೆ ಎಂದು ಹೇಳಿದ್ದಾರೆ. ಬಿಜೆಪಿಯಲ್ಲಿ ಹೆಚ್ಚುತ್ತಿರುವ ನಿರಾಶೆಯ ನಡುವೆ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯನ್ನು ಸೆಳೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.












Click it and Unblock the Notifications