ಮಂಡಗದ್ದೆ ಬಳಿ ಬೈಕ್ ಅಪಘಾತ; ಗಾಯಾಳುಗಳಿಗೆ ನೆರವಾದ ಗೃಹ ಸಚಿವ
ಶಿವಮೊಗ್ಗ, ನವೆಂಬರ್ 13: ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಬಳಿ ಬೈಕ್ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದವರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಅವರ ಬೆಂಗಾವಲು ಸಿಬ್ಬಂದಿ ನೆರವಾಗಿದ್ದಾರೆ. ಗಾಯಾಳುಗಳಿಗೆ ಆರೈಕೆ ಮಾಡಿ, ತಮ್ಮ ಎಸ್ಕಾರ್ಟ್ ವಾಹನದಲ್ಲಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಮಂಡಗದ್ದೆ ಕಾಡಿನಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಬೈಕ್ ಸವಾರರು ಗಾಯಗೊಂಡಿದ್ದು, ರಸ್ತೆಯಲ್ಲಿ ನರಳಾಡುತ್ತಿದ್ದರು. ಈ ವೇಳೆ ವಾಹನ ಸವಾರರು ಗಾಯಾಳುಗಳಿಗೆ ನೆರವಾಗಿದ್ದರು.
ಗಾಯಳುಗೆ ನೆರವಾದ ಸಚಿವರು, ಸಿಬ್ಬಂದಿ
ಗೃಹ ಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದರು. ಶಿವಮೊಗ್ಗದಲ್ಲಿ ನಡೆಯುತ್ತಿರುವ ಕಾರ್ಯಕ್ರವೊಂದರಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು. ಬೈಕ್ ಅಪಘಾತ ಆಗಿರುವುದು ತಿಳಿಯುತ್ತಿದ್ದಂತೆ ಕಾರಿನಿಂದ ಇಳಿದು ಗಾಯಾಳುಗಳ ನೆರವಿಗೆ ಧಾವಿಸಿದರು.

ಗಾಯಾಳುಗಳಿಗೆ ನೀರು ಕುಡಿಸಿ, ಆರೈಕೆ ಮಾಡಿದರು. ಅಲ್ಲದೆ ತಮ್ಮ ಎಸ್ಕಾರ್ಟ್‌ಗೆ ಬಂದಿದ್ದ ಪೊಲೀಸ್ ಜೀಪಿನಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಿದರು.
ಆಸ್ಪತ್ರೆಗೆ ಫೋನ್ ಮಾಡಿ ಮಾಹಿತಿ
ಇನ್ನು ಘಟನೆ ಸಂಬಂಧ ಗಾಯಾಳುಗಳಿಗೆ ಕೂಡಲೆ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಆಸ್ಪತ್ರೆ ಸಿಬ್ಬಂದಿಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ನೀಡಿದರು. ಗಾಯಾಳುಗಳಿಬ್ಬರು ತೀರ್ಥಹಳ್ಳಿ ಮೂಲದವರು ಎಂದು ತಿಳಿದು ಬಂದಿದೆ.

ಈ ಹಿಂದೆಯೂ ನೆರವಾಗಿದ್ದರು
ತೀರ್ಥಹಳ್ಳಿ ತಾಲೂಕಿನಲ್ಲಿ ಈ ಹಿಂದೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ತಮ್ಮದೆ ಕಾರಿನಲ್ಲಿ ಕರೆದೊಯ್ದಿದ್ದರು. ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದರು.












Click it and Unblock the Notifications