ಶಿವಮೊಗ್ಗ: ಉದ್ವಿಗ್ನ ಸ್ಥಳಕ್ಕೆ ಇಂದು (ಅ.5) 'ಬಿಜೆಪಿ ಸತ್ಯಶೋಧನಾ ತಂಡ' ಭೇಟಿ
ಶಿವಮೊಗ್ಗ,ಅಕ್ಟೋಬರ್ 05: ಈದ್ ಮಿಲಾದ್ ವೇಳೆ ಕಲ್ಲು ತೂರಾಟ ನಡೆದು ಉದ್ವಿಗ್ನ ಸ್ಥಿತಿಯಲ್ಲಿದ್ದ ಶಿವಮೊಗ್ಗ ಜಿಲ್ಲೆಗೆ ಇಂದು ಗುರುವಾರ (ಅ.05) ಬಿಜೆಪಿಯ ಸತ್ಯಶೋಧನಾ ತಂಡ ಬೇಟಿ ನೀಡಿ ಪರಿಶೀಲಿಸಲಿದೆ. ಈ ತಂಡದಲ್ಲಿ ಪ್ರಮುಖ ನಾಯಕರು ಇರಲಿದ್ದು, ಖುದ್ದು ಸ್ಥಳದಲ್ಲಿ ಮಾಹಿತಿ ಪಡೆಯಲಿದ್ದಾರೆ. ನಂತರ ಘಟನೆ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆಗಳು ಇವೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಸತ್ಯ ಶೋಧನಾ ತಂಡ ಇಂದು ಗುರುವಾರ ಬೆಳಗ್ಗೆ 11 ಗಂಟೆಗೆ ಶಿವಮೊಗ್ಗದ ಶಾಂತಿನಗರ-ರಾಗಿಗುಡ್ಡದ ಪ್ರದೇಶಕ್ಕೆ ಭೇಟಿ ಕೊಡಲಿದೆ. ಘಟನೆ ಕುರಿತು ಸ್ಥಳೀಯರ ಜೊತೆ ಚರ್ಚಿಸಿ ನೈಜತೆ ತಿಳಿದುಕೊಳ್ಳಲಿದೆ.

ಹಾಗಾದರೆ ತಂಡದಲ್ಲಿ ಯಾರು ಇರಲಿದ್ದಾರೆ ಎಂದು ನೋಡುವುದಾದರೆ, ನಳಿನ್ ಕುಮಾರ್ ಕಟೀಲ್ ಅವರ ಜೊತೆಗೆ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಡಾ.ಸಿಎನ್. ಅಶ್ವಥ್ ನಾರಾಯಣ, ಆರಗ್ ಜ್ಞಾನೇಂದ್ರ, ಸಂಸದ ಬಿವೈ ರಾಘವೇಂದ್ರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ, ಎಂಎಲ್ ಸಿ ಡಿ.ಎಸ್. ಅರುಣ, ಎಸ್. ರುದ್ರೇಗೌಡ ಸೇರಿದಂತೆ ಮತ್ತಿತರ ನಾಯಕರು ತಂಡದಲ್ಲಿರಲಿದ್ದಾರೆ.
ಉದ್ವಿಗ್ನಗೊಂಡಿದ್ದ ಶಿವಮೊಗ್ಗ ಜಿಲ್ಲೆ
ರಾಜ್ಯದಲ್ಲಿ ನಿಗದಿಯಂತೆ ಸೆಪ್ಟಂಬರ್ 28ರಂದು ಗುರುವಾರ ಈದ್ ಮಿಲಾದ್ ಆಚರಣೆ ನಡೆಯಿತು. ಆದರೆ ಶಿವಮೊಗ್ಗದಲ್ಲಿ ಭಾನುವಾರ ಆಚರಣೆ ನಡೆಸಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಬೀದಿ ಬೀದಿಗಳಲ್ಲಿ ತಲ್ವಾರ್ ಪ್ರದರ್ಶಿಸಲಾಯಿತು. ಈ ವೇಳೆ ಪುಂಡರ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತು. ಪರಿಣಾಮ ಜಿಲ್ಲೆಯ ಉದ್ವಿಗ್ನಗೊಂಡಿತು.
ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟ ಪೊಲೀಸರು ಕೊನೆಗೆ 144 ಸೆಕ್ಷನ್ ಜಾರಿ ಮಾಡಿದರು. ಗಲಾಟೆಯಲ್ಲಿ ಒಂದಿಬ್ಬರು ಪೊಲೀಸರಿಗೆ ಮತ್ತು ಯುವಕರಿಗೆ ಗಾಯಗಳಾಗಿವೆ. ಪೊಲೀಸರು ಮನೆಗಳಿಗೆ ಭೇಟಿ ನೀಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಒಟ್ಟು ಸುಮಾರು 60 ಮಂದಿಯನ್ನು ವಶಕ್ಕೆ ಪಡೆದಿದ್ದು, 24 ಮಂದಿ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ
ಈ ಘಟನೆ ರಾಜ್ಯಾದ್ಯಂತ ಸುದ್ದಿ ಮಾಡಿದ್ದು, ರಾಜ್ಯ ಸರ್ಕಾರದ ಆಡಳಿತ ವಿರುದ್ಧ ಬಿಜೆಪಿ ಕಟುವಾಗಿ ಟೀಕಿಸಿತು. ಇದರ ಮುಂದಿನ ಭಾಗವಾಗಿಯೇ ಬಿಜೆಪಿ ನಾಯಕರು ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿ ನೈಜತೆ ತಿಳಿದುಕೊಳ್ಳಲಿದ್ದಾರೆ.












Click it and Unblock the Notifications