Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣ ನಿರ್ವಹಣೆ ಕೇಂದ್ರಕ್ಕೆ
ಶಿವಮೊಗ್ಗ, ಫೆಬ್ರವರಿ 01: ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ಗೆ ಹಸ್ತಾಂತರ ಮಾಡಲು ಮುಂದಾಗಿದೆ. ಶಿವಮೊಗ್ಗ ಹೊರವಲಯದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ 27/2/2023ರಂದು ಲೋಕಾರ್ಪಣೆ ಮಾಡಿದ್ದರು. ಬೆಂಗಳೂರು-ಶಿವಮೊಗ್ಗ ಸೇರಿದಂತೆ ವಿವಿಧ ನಗರಗಳಿಗೆ ಈ ವಿಮಾನ ನಿಲ್ದಾಣದಿಂದ ಸಂಪರ್ಕವಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಈ ಕುರಿತು ಮಾಹಿತಿ ನೀಡಿದ್ದಾರೆ. "ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಗುತ್ತಿಗೆ ಆಧಾರದ ಮೇಲೆ ಎಎಐಗೆ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆದರೆ ಈ ಕುರಿತು ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ" ಎಂದು ಹೇಳಿದ್ದಾರೆ.

"ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆ ಈಗಾಗಲೇ ಅಧಿಕ ವೆಚ್ಚದಾಯಕವಾಗಿದೆ. ಅಷ್ಟು ಹಣವನ್ನು ಖರ್ಚು ಮಾಡಿದರೂ ಸಹ ಇನ್ನೂ ಸಹ ರಾತ್ರಿ ವಿಮಾನಗಳ ಲ್ಯಾಂಡಿಂಗ್ ಸೇವೆ ಆರಂಭವಾಗಿಲ್ಲ. ನಾವು ಉದ್ಯಮವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಬಯಸಿದ್ದೇವೆ" ಎಂದರು.
ಕರ್ನಾಟಕ ಸರ್ಕಾರದಿಂದ ನಿರ್ವಹಣೆ: ಕರ್ನಾಟಕ ಸರ್ಕಾರ ನಿರ್ವಹಣೆ ಮಾಡುತ್ತಿರುವ ರಾಜ್ಯದ ಏಕೈಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯನ್ನು ಶಿವಮೊಗ್ಗ ವಿಮಾನ ನಿಲ್ದಾಣ ಪಡೆದುಕೊಂಡಿದೆ. ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಮೂಲಕ ವಿಮಾನ ನಿಲ್ದಾಣ ನಿರ್ವಹಣೆ ಮಾಡುತ್ತಿದ್ದು, ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಮಾಡಲಾಗುತ್ತಿದೆ.
ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ನೇಮಕ ಮಾಡಿದೆ. ಸದ್ಯ ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್ ಕಾರ್ಯಾಚರಣೆ ನಡೆಸಲು ಅಗತ್ಯವಿರುವ ಕಾಮಗಾರಿ ನಡೆಯುತ್ತಿದೆ. ಈ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಪೀಕ್ ಅವರ್‌ನಲ್ಲಿ ಸುಮಾರು 300 ಪ್ರಯಾಣಿಕರನ್ನು ನಿಭಾಯಿಸುವ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಶಿವಮೊಗ್ಗ ತಾಲೂಕಿನ ಸೋಗಾನೆ ಬಳಿ 775 ಎಕರೆ ಪ್ರದೇಶದಲ್ಲಿ 450 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. 3.2 ಕಿ. ಮೀ. ಉದ್ದದ ರನ್ ವೇಯನ್ನು ಇದು ಹೊಂದಿದೆ. ಏರ್ ಬಸ್ ಮಾದರಿಯ ವಿಮಾನಗಳು ಸಹ ಇಳಿಯಲು ಅನುಕೂಲವಾಗುವ ಮಾದರಿಯಲ್ಲಿ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ.
ವಿಮಾನ ನಿಲ್ದಾಣವನ್ನು ಎಎಐಗೆ ಹಸ್ತಾಂತರ ಮಾಡಿದರೆ ಈ ಯೋಜನೆಗಾಗಿ ವಶಕ್ಕೆ ಪಡೆದುಕೊಂಡ ಜಮೀನನ್ನು ಸಹ ಎಎಐಗೆ ಹಸ್ತಾಂತರ ಮಾಡಬೇಕಿದೆ. ಆದರೆ ಯೋಜನೆಗಾಗಿ ವಶಕ್ಕೆ ಪಡೆದ ಭೂಮಿ ಮಾಲೀಕತ್ವವನ್ನು ತಮ್ಮಲ್ಲೇ ಇಟ್ಟುಕೊಂಡು, ವಿಮಾನ ನಿಲ್ದಾಣದ ನಿರ್ವಹಣೆಯನ್ನು ಮಾತ್ರ ಎಎಐಗೆ ಹಸ್ತಾಂತರ ಮಾಡಲು ರಾಜ್ಯ ಸರ್ಕಾರ ಬಯಸಿದೆ.
ಎಎಐ ಸಹ ವಿಮಾನ ನಿಲ್ದಾಣ ನಿರ್ವಹಣೆಯನ್ನು ಹಸ್ತಾಂತರ ಮಾಡುವಂತೆ ರಾಜ್ಯ ಸರ್ಕಾರವನ್ನು ಕೋರಿದೆ. ವಿಮಾನ ನಿಲ್ದಾಣ ನಿರ್ವಹಣೆಯನ್ನು ಹಸ್ತಾಂತರ ಮಾಡಿದರೆ ಅದಕ್ಕಾಗಿ ವಶಪಡಿಸಿಕೊಂಡ ಭೂಮಿಯನ್ನು ನೀಡಬೇಕಿದೆ. ಆದರೆ ಭೂಮಿಯನ್ನು ಕೆಲವು ವರ್ಷಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡಿ, ಮಾಲೀಕತ್ವವನ್ನು ಉಳಿಸಿಕೊಳ್ಳಬೇಕು ಎಂದು ಸರ್ಕಾರ ಚಿಂತನೆ ನಡೆಸಿದೆ.
ಕರ್ನಾಟಕ ಸರ್ಕಾರ ಕೆಲವು ವರ್ಷಗಳ ಹಿಂದೆ ಕಲಬುರಗಿ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಎಎಪಿಗೆ ಹಸ್ತಾಂತರ ಮಾಡಿದೆ. ಈ ಯೋಜನೆಗಾಗಿ 1,500 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ವಿಮಾನ ನಿಲ್ದಾಣಕ್ಕೆ ವಶಕ್ಕೆ ಪಡೆದುಕೊಂಡಿದ್ದ ಭೂಮಿಯನ್ನು ಸಹ ಎಎಐಗೆ ನೀಡಲಾಗಿದೆ. ಆದ್ದರಿಂದ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ವಹಣೆಯನ್ನು ಹಸ್ತಾಂತರ ಮಾಡುವಾಗ ಈ ಕುರಿತು ತೀರ್ಮಾನ ಕೈಗೊಳ್ಳಲು ಸರ್ಕಾರ ಬಯಸಿದೆ.
775 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ವಿಮಾನ ನಿಲ್ದಾಣ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ಜನರಿಗೆ ಅನುಕೂಲವಾಗಿದೆ. ಶಿವಮೊಗ್ಗದಿಂದ ಬೆಂಗಳೂರು, ತಿರುಪತಿ, ಗೋವಾ ಮತ್ತು ಹೈದರಾಬಾದ್‌ಗೆ ವಿಮಾನ ಸೇವೆ ಸದ್ಯಕ್ಕೆ ಲಭ್ಯವಿದೆ. ನವದೆಹಲಿ, ಮುಂಬೈಗೆ ವಿಮಾನ ಸೇವೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.












Click it and Unblock the Notifications