Shivamogga airport: ಮಲೆನಾಡಿನ ಹೆಬ್ಬಾಗಿಲಿಗೆ ಬೆಂಗ್ಳೂರಿಂದ ಆಗಮಿಸಿದ ಇಂಡಿಗೋ ವಿಮಾನ, ಭರ್ಜರಿ ಸ್ವಾಗತ
ಶಿವಮೊಗ್ಗ, ಆಗಸ್ಟ್, 31: ಇಂದು ಬೆಂಗಳೂರಿನಿಂದ ಶಿವಮೊಗ್ಗ ಏರ್ಪೋರ್ಟ್‌ಗೆ ಪ್ರಥಮ ಬಾರಿಗೆ ಇಂಡಿಗೋ ವಿಮಾನ ಬಂದಿದ್ದು, ಇಂಡಿಗೋ ವಿಮಾನದಲ್ಲಿ ಆಗಮಿಸಿದ ಗಣ್ಯರಿಗೆ ಭವ್ಯ ಸ್ವಾಗತ ಮಾಡಲಾಯಿತು.
ಸಚಿವ ಎಂ.ಬಿ.ಪಾಟೀಲ್, ಮಾಜಿ ಸಿ.ಎಂ.ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಬಿ.ವೈ.ವಿಜಯೇಂದ್ರ, ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಗಣ್ಯರ ಇಂಡಿಗೋ ವಿಮಾನದಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಬಳಿಕ ವೆಬ್ ಸೈಟ್ ಬಿಡುಗಡೆ ಮಾಡಿದ ಮಾಡಿದ್ದಾರೆ.

ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಡಿ.ಎಸ್. ಅರುಣ್, ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ್, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಹಿಂದಿ ಭಾಷೆ ಬಳಕೆ, ಆಕ್ರೋಶ
ಬಹುನಿರೀಕ್ಷಿತ ಶಿವಮೊಗ್ಗ ವಿಮಾನ ನಿಲ್ದಾಣ ಇಂದಿನಿಂದ ಕಾರ್ಯ ಆರಂಭ ಮಾಡಿದೆ. ಬುಧವಾರ ಪ್ರಾಯೋಗಿಕವಾಗಿ ಬೆಂಗಳೂರಿನಿಂದ ತೆರಳಿದ ವಿಮಾನವು ಮಧ್ಯಾಹ್ನದ ಹೊತ್ತಿಗೆ ಶಿವಮೊಗ್ಗಕ್ಕೆ ತಲುಪಿತು. ಬೆಂಗಳೂರು ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳಲ್ಲಿ ಹಿಂದಿ ಭಾಷೆಯಲ್ಲಿ ಪ್ರಕಟಣೆಯನ್ನು ಎಲೆಕ್ಟ್ರಾನಿಕ್ ಡಿಸ್ಪ್ಲೇ ಪ್ಯಾನೆಲ್‌ಗಳಲ್ಲಿ ಪ್ರಕಟಿಸಲಾಗಿತ್ತು. ಈ ಬಗ್ಗೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.
ಬೆಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕನ್ನಡ ಮಾತನಾಡುವವರಿದ್ದಾರೆ. ಕನ್ನಡವೇ ಇಲ್ಲಿ ಪ್ರಮುಖ ಭಾಷೆ. ಹಾಗಿದ್ದರೂ, ಹಿಂದಿಯಲ್ಲಿ ಪ್ರಕಟಣೆ ಹಾಕುತ್ತಿರುವುದು ಯಾಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೊಂದಾದ ಟ್ವಿಟರ್‌ನಲ್ಲಿ ಈ ಬಗ್ಗೆ ಪ್ರಶ್ನಿಸಿರುವ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಡಿಜಿಟಲ್ ಸೂಚನಾ ಫಲಕ ಅಳವಡಿಸಲಾಗಿದ್ದು, ಅದರಲ್ಲಿ ಹಿಂದಿಯಲ್ಲಿ ಪ್ರಕಟಣೆಯನ್ನು ಪ್ರಕಟಿಸಿರುವ ಕುರಿತು ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದು ಹಿಂದಿ ರಾಜ್ಯವಲ್ಲ, ಇದು ಕರ್ನಾಟಕ. ಇಲ್ಲಿ ಹಿಂದಿ ಭಾಷೆಯ ಅಗತ್ಯವಿಲ್ಲ. ಇದನ್ನು ತೆಗೆದು ಹಾಕಬೇಕು. ಕನ್ನಡದಲ್ಲಿ ಪ್ರಕಟಣೆಯನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಟ್ವೀಟನ್ನು ಟ್ಯಾಗ್ ಮಾಡಿದ್ದಾರೆ.
ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಎಂ.ಬಿ.ಪಾಟೀಲ್ ಕನ್ನಡ ಮತ್ತು ಇಂಗ್ಲೀಷ್‌ಗೆ ಮಾತ್ರ ಆದ್ಯತೆ ನೀಡಲಾಗುವುದು. ಇದು ನನ್ನ ಗಮನಕ್ಕೆ ಬಂದಿಲ್ಲ. ನಾನು ಖಂಡಿತವಾಗಿಯೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ, ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರವೇ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ಇದು ನನ್ನ ಗಮನಕ್ಕೆ ಬಂದಿರಲಿಲ್ಲ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ಕುರಿತು ಮಾತನಾಡುವೆ.
— M B Patil (@MBPatil) August 31, 2023
# ಕನ್ನಡ in ಕರ್ನಾಟಕ https://t.co/PzC2Jx3TLP
ಅಧಿಕೃತವಾಗಿ ಇಂದಿನಿಂದ ಮೊದಲ ವಾಣಿಜ್ಯ ದೇಶೀಯ ವಿಮಾನವು ಬೆಂಗಳೂರಿನಿಂದ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣಕ್ಕೆ ತೆರಳಿತು. ಈ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಶಿವಮೊಗ್ಗ ಜಿಲ್ಲೆಯ ಹಲವು ಮುಖಂಡರು ಇಂಡಿಗೋ ಏರ್ ಲೈನ್ಸ್ ವಿಮಾನದಲ್ಲಿ ಪ್ರಯಾಣಿಸಿದರು.
ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣವು ರಾಜ್ಯದ ಒಂಬತ್ತನೆಯ ದೇಶಿಯ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು, ಮೈಸೂರು, ಬಳ್ಳಾರಿ, ಶಿವಮೊಗ್ಗ, ಬೀದರ್, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಮತ್ತು ಮಂಗಳೂರಿನಲ್ಲಿ ವಿಮಾನ ನಿಲ್ದಾಣಗಳಿವೆ. ಬೆಂಗಳೂರು ಹಾಗೂ ಮಂಗಳೂರು ನಿಲ್ದಾಣಗಳು ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯನ್ನು ನೀಡುತ್ತಿವೆ.












Click it and Unblock the Notifications