ಶರಾವತಿ ಹಿನ್ನೀರಿನ ಮಟ್ಟ ಇಳಿಕೆಯಾಗಿ ಲಾಂಚ್ ಸ್ಥಗಿತ: ಸಿಗಂದೂರು ಪ್ರವಾಸಿಗರಿಗೆ ಸಂಕಷ್ಟ
ಶಿವಮೊಗ್ಗ, ಜೂ. 11: ಶರಾವತಿ ಹಿನ್ನೀರಿನ ಮಟ್ಟ ಕುಸಿದ ಹಿನ್ನೆಲೆ ಮುಪ್ಪಾನೆ ಮಾರ್ಗದ ಲಾಂಚ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಗ್ರಾಮಸ್ಥರು ಸಂಕಷ್ಟಕ್ಕೀಡಾಗಿದ್ದಾರೆ.
ಮುಪ್ಪಾನೆ ಮಾರ್ಗದಲ್ಲಿ ಸಣ್ಣ ಲಾಂಚ್ ಇದೆ. ಕರೂರು ಹೋಬಳಿಯ ಹಲವು ಗ್ರಾಮಗಳಿಗೆ ಈ ಲಾಂಚ್ ಸಂಪರ್ಕ ಸೇತುವೆಯಾಗಿತ್ತು. ಈಗ ಲಾಂಚ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಹೋಬಳಿಯ ಹಲವು ಗ್ರಾಮಗಳ ಜನರಿಗೆ ಸಂಕಷ್ಟ ತಂದೊಡ್ಡಿದೆ.
35 ಕಿ.ಮೀ ಬದಲು 72 ಕಿ.ಮೀ
ಕರೂರು ಹೋಬಳಿಯ ಒಳಗಿನ ಅನೇಕ ಗ್ರಾಮಗಳಿಗೆ ಮುಪ್ಪಾನೆ ಲಾಂಚ್ ಸಂಪರ್ಕ ಒದಗಿಸುತ್ತಿತ್ತು. 2017ರಲ್ಲಿ ಶಾಸಕ ಹರತಾಳು ಹಾಲಪ್ಪ ಅವರು ಈ ಮಾರ್ಗಕ್ಕೆ ಆದ್ಯತೆ ನೀಡಿ, ಜನ ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಮುಪ್ಪಾನೆ ಲಾಂಚ್ ಇಲ್ಲದೆ ಹೋದರೆ ಈ ಭಾಗದ ಗ್ರಾಮಸ್ಥರು ಹೋಬಳಿ ಕೇಂದ್ರ ತಲುಪಲು 72 ಕಿ.ಮೀ ಸಂಚರಿಸಬೇಕಾಗುತ್ತದೆ. ಲಾಂಚ್ ಮೂಲಕ ಶರಾವತಿ ನದಿ ದಾಟಿದರೆ ಕೇವಲ 35 ಕಿ.ಮೀ ಮೂಲಕ ತಲುಪಬಹುದಾಗಿದೆ.

ಪೊಲೀಸರು, ಪ್ರವಾಸಿಗರಿಗೂ ಅನುಕೂಲ
ತುರ್ತು ಸಂದರ್ಭದಲ್ಲಿ ಪೊಲೀಸರು, ವಿದ್ಯುತ್ ಇಲಾಖೆ ಸಿಬ್ಬಂದಿ ಕರೂರು ಹೋಬಳಿಯ ಗ್ರಾಮಗಳಿಗೆ ತಲುಪಲು ಲಾಂಚ್ ಬಳಕೆ ಮಾಡಿಕೊಳ್ಳುತ್ತಿದ್ದರು. ಶಿರಸಿ, ಸಿದ್ಧಾಪುರ ಮಾರ್ಗದಲ್ಲಿ ಓಡಾಡುವವರಿಗೂ ಲಾಂಚ್ ಅನುಕೂಲವಾಗಿತ್ತು. ಸಿಗಂದೂರು ಪ್ರವಾಸಿಗರು ಕೂಡ ಈ ಮಾರ್ಗದಲ್ಲಿ ಓಡಾಡುತ್ತಿದ್ದರು. ಮುಪ್ಪಾನೆ ಲಾಂಚ್ ಸ್ಥಗಿತಗೊಂಡಿರುವುದರಿಂದ ಜನರು ಸುತ್ತಿಬಳಸಿ ಓಡಾಡುವಂತಾಗಿದೆ. ಮಳೆ ಹೆಚ್ಚಳವಾಗಿ ಹಿನ್ನೀರಿನ ಮಟ್ಟ ಏರಿಕೆಯಾದರೆ ಲಾಂಚ್ ಸೇವೆ ಪುನಾರಂಭವಾಗಲಿದೆ.
ಫೆ.28ರಂದು ಸಾಗರ ತಾಲೂಕಿನ ಶರಾವತಿ ಹಿನ್ನಿರಿನಲ್ಲಿ ಸಂತ್ರಸ್ತ ಜನರಿಗೆ ಅಗತ್ಯ ಇರುವ ಕಡೆಗಳಲ್ಲಿ ಲಾಂಚ್ ಹಾಗು ಸೇತುವೆ ನಿರ್ಮಾಣದ ಕೆಲಸಕ್ಕೆ ಆದ್ಯತೆ ನೀಡುತ್ತಿರುವುದಾಗಿ ಶಾಸಕ ಎಚ್ ಹಾಲಪ್ಪ ಹೇಳಿದ್ದರು.

ಸಾಗರದ ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶರಾವತಿ ಹಿನ್ನಿರಿನ ಎಣ್ಣೆ ಹೊಳೆಯ ಶಿಗ್ಗಲು ಕೋಗಾರು ಲಾಂಚ್ ಸೇವೆಗೆ ಅವರು ಚಾಲನೆ ನೀಡಿದ್ದರು.












Click it and Unblock the Notifications