ಅಡಿಕೆಯಿಂದ ಸ್ಯಾನಿಟೈಸರ್ ತಯಾರಿಕೆ: ಯುವ ಉದ್ಯಮಿ ನಿವೇದನ್ ಹೊಸ ಪ್ರಯೋಗ
ಶಿವಮೊಗ್ಗ, ಜೂನ್ 22: ಮಲೆನಾಡಿನಲ್ಲಿ ಅದರಲ್ಲೂ ಶಿವಮೊಗ್ಗ ಜಿಲ್ಲೆ ಅತೀ ಹೆಚ್ಚು ಅಡಿಕೆ ಬೆಳೆಯುವ ಬೆಳೆಗಾರರಿದ್ದು, ಅಡಿಕೆಯನ್ನು ಅನೇಕ ಪದಾರ್ಥಗಳಿಗೆ ಬಳಸುತ್ತಾರೆ. ಅದರೆ ಶಿವಮೊಗ್ಗದ ಯುವ ಉದ್ಯಮಿ ನಿವೇದನ್ ಸೆಂಪೆ ಹೊಸ ಪ್ರಯೋಗವನ್ನು ಮಾಡಿದ್ದಾರೆ.
ಈ ಅಡಿಕೆ ಚಹಾ, ಜ್ಯೂಸ್, ವಾಹನಗಳಲ್ಲಿ ಬಳಕೆ ಮಾಡುವ ಫರ್ಫ್ಯೂಮ್ ಮೊದಲಾದವುಗಳನ್ನು ಮಲೆನಾಡಿನ ಜನರ ಜೀವನಾಡಿ ಅಡಿಕೆಯಿಂದಲೇ ತಯಾರು ಮಾಡುವ ಮೂಲಕ ಜನರಿಲ್ಲಿ ಹೆಸರಾಗಿದ್ದಾರೆ.
ಅಡಿಕೆಯಿಂದ ಅರೇಕಾ ಟೀ ಅಭಿವೃದ್ಧಿಪಡಿಸಿದ ನಿವೇದನ್ ಸೆಂಪೆ ಅವರು, ಅಡಿಕೆಯಿಂದ ಹ್ಯಾಂಡ್ ಸ್ಯಾನಿಟೈಸರ್ ಕೂಡಾ ಅಭಿವೃದ್ಧಿಪಡಿಸಿದ್ದಾರೆ. ಕೊರೊನಾ ವೈರಸ್ ಸಂಕಷ್ಟದ ಕಾಲದಲ್ಲಿ ಅಡಿಕೆಯಿಂದ ಅರೇಕಾ ಸ್ಯಾನಿಟೈಸರ್ ಅಭಿವೃದ್ಧಿಪಡಿಸಿರುವ ನಿವೇದನ್ ಅವರು, ಅದನ್ನು ಗ್ರಾಮೀಣ ಯುವ ಉದ್ಯಮಿಗಳ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡುವ ಆಲೋಚನೆ ಹೊಂದಿದ್ದಾರೆ.

ಸರಕಾರದ ಮಾನದಂಡದ ಪ್ರಕಾರ ಹ್ಯಾಂಡ್ ಸ್ಯಾನಿಟೈಸರ್ನಲ್ಲಿ ಶೇ.70 ರಷ್ಟು ಆಲ್ಕೋಹಾಲ್ ಅಂಶ ಇರಬೇಕು. ಇದರ ಜತೆಗೆ ಅಡಿಕೆಯಲ್ಲಿರುವ ಆ್ಯಂಟಿ ಮೈಕ್ರೋಬಿಯಲ್ ಪದಾರ್ಥ, ಗ್ಯಾಲಿಕ್ ಆ್ಯಸಿಡ್, ಟ್ಯಾನಿಚ್ ಸೇರಿದಂತೆ ಇತರೆ ಅಂಶಗಳನ್ನು ಬಳಸಿಕೊಂಡು ಹ್ಯಾಂಡ್ ಸ್ಯಾನಿಟೈಸರ್ ತಯಾರು ಮಾಡಲಾಗಿದೆ.
ಈ ಕುರಿತು ಒನ್ ಇಂಡಿಯಾದೊಂದಿಗೆ ಮಾತನಾಡಿದ ಯುವ ಉದ್ಯಮಿ ನಿವೇದನ್ ಸೆಂಪೆ, ಇಡೀ ದೇಶವೇ ಕೊರೊನಾ ವೈರಸ್ ನಿಂದ ತತ್ತರಿಸಿದ್ದು, ಬೆಂಗಳೂರು ಸೇರಿದಂತೆ ದೇಶ-ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದ ಸಾವಿರಾರು ಯುವಕರು, ನಗರಗಳನ್ನು ಬಿಟ್ಟು ಹಳ್ಳಿ ಸೇರಿಕೊಂಡಿದ್ದಾರೆ. ಈ ಯುವಕರಿಗೆ ಕೆಲಸಗಳಿಲ್ಲ ಆದ್ದರಿಂದ ಅಡಿಕೆ ಮಲೆನಾಡಿನಲ್ಲಿ ಸುಲಭವಾಗಿ ಸಿಗುವ ವಸ್ತು. ಇದನ್ನು ಬಳಸಿಕೊಂಡು ಉತ್ಪಾದನೆ ಮಾಡಲು ಯಾರಾದರೂ ಯುವಕರು ಮುಂದಾದರೇ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ನೀಡಿ ಎಲ್ಲಾ ರೀತಿಯಲ್ಲೂ ಪ್ರೋತ್ಸಾಹಿಸುತ್ತೇವೆ ಎಂದರು.

ಇದರ ಮುಖ್ಯ ಉದ್ದೇಶ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವುದು ಹಾಗೂ ಗ್ರಾಮೀಣ ಯುವಕರಿಗೆ ಸ್ವಗ್ರಾಮದಲ್ಲಿಯೇ ಉದ್ಯೋಗವನ್ನು ಒದಗಿಸುವುದಾಗಿದೆ ಎಂದು ನಿವೇದನ್ ತಿಳಿಸಿದರು.
ಒಟ್ಟಿನಲ್ಲಿ ಗ್ರಾಮೀಣ ಭಾಗದ ಯುವಕರಿಗೆ ಸ್ವ ಉದ್ಯೋಗ ಸೃಷ್ಠಿಸುವಲ್ಲಿ ಹಾಗೂ ಕೊರಾನಾದಿಂದ ಪಾರಾಗಲು ಸ್ಯಾನಿಟೈಸರ್ ಉತ್ಪಾದನೆ ಹಾಗೂ ಅಡಿಕೆ ಬೆಳೆಗಾರರಿಗೂ ಉಪಯೋಗವಾಗುವ ನಿಟ್ಟಿನಲ್ಲಿ ನಿವೇದನ್ ಅವರ ಆಲೋಚನೆ ವಿಶಿಷ್ಟವಾಗಿದ್ದು, ಸರ್ಕಾರದ ಮಟ್ಟದಲ್ಲಿ ಇದಕ್ಕೆ ಪ್ರೋತ್ಸಾಹ ದೊರೆತರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬಹು ಉಪಯೋಗಿಯಾಗಲಿದೆ.












Click it and Unblock the Notifications