ಶಿವಮೊಗ್ಗದಲ್ಲಿ ಎಫ್. ಎಂ; ಮತ್ತೆ ಚಿಗುರೊಡೆದ ನಿರೀಕ್ಷೆ
ಶಿವಮೊಗ್ಗ, ಜನವರಿ 13 : ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಎಫ್. ಎಂ. ರೇಡಿಯೋ ಕೇಂದ್ರ ಆರಂಭವಾಗುವ ನಿರೀಕ್ಷೆ ಮತ್ತೆ ಚಿಗುರೊಡೆದಿದೆ. ಜಿಲ್ಲೆಯ ಭದ್ರಾವತಿಯಲ್ಲಿರುವ ಆಕಾಶವಾಣಿ ಕೇಂದ್ರ ಕಳೆದ 50 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ.
ಜಿಲ್ಲೆಯ ಜನರ ಕನಸಾಗಿರುವ ಎಫ್. ಎಂ. ರೇಡಿಯೋ ಕೇಂದ್ರವನ್ನು ಸ್ಥಾಪಿಸುವಂತೆ ಸಂಸದ ಬಿ. ವೈ. ರಾಘವೇಂದ್ರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್‌ರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
ಈ ಹಿಂದೆ ಸಹ ಎಫ್. ಎಂ. ರೇಡಿಯೋ ಕೇಂದ್ರ ಆರಂಭಿಸುವಂತೆ ಹಾಗೂ ಭದ್ರಾವತಿಯಲ್ಲಿ ಈಗಿರುವ ರೇಡಿಯೋ ಕೇಂದ್ರದ ತರಂಗಾಂತರಗಳನ್ನು ಹೆಚ್ಚಿಸಿ ಮೇಲ್ದರ್ಜೆಗೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.

ಎಫ್. ಎಂ. ರೇಡಿಯೋ ಕೇಂದ್ರ ಆರಂಭಿಸುವ ಕುರಿತು ಸಲ್ಲಿಸಿರುವ ಮನವಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದರಿಂದಾಗಿ ಜಿಲ್ಲೆಯ ಜನರ ನಿರೀಕ್ಷೆಗಳು ಸಹ ಹೆಚ್ಚಾಗಿದೆ.
ಶಿವಮೊಗ್ಗ ಜಿಲ್ಲೆಯ ಕೇಂದ್ರ ಸ್ಥಳವಾಗಿರುವ ಶಿವಮೊಗ್ಗ ನಗರದಲ್ಲಿ ಒಂದು ಎಫ್. ಎಂ. ಕೇಂದ್ರ ಇರುವುದಿಲ್ಲ.
ಭದ್ರಾವತಿ ಆಕಾಶವಾಣಿ ಕೇಂದ್ರವು ಕಳೆದ 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಕಡಿಮೆ ಶಕ್ತಿಯ ಟ್ರಾನ್ಸ್‍ಮೀರ್‌ಗಳಿಂದ ಉತ್ತಮವಾದ ಕಾರ್ಯಕ್ರಮಗಳನ್ನು ಆಯೋಜಿಸಿದರೂ ಕೂಡ ಕೆಲವೇ ಕಿ.ಮಿ.ಗಳ ದೂರದಲ್ಲಿರುವ ಜಿಲ್ಲಾ ಕೇಂದ್ರಕ್ಕೂ ತಲುಪದಿರುವ ಬಗ್ಗೆ ಸಂಸದರು ಸಚಿವರ ಗಮನ ಸೆಳೆದಿದ್ದಾರೆ.
ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಡಿಮೆ ಶಕ್ತಿಯ ದೂರದರ್ಶನ ಕೇಂದ್ರದಲ್ಲಿ ಹೆಚ್ಚಿನ ಸ್ಥಳಾವಕಾಶವಿದೆ. ಟ್ರಾನ್ಸ್‌ಮೀಟರ್ ಉನ್ನತೀಕರಿಸಿದರೆ ಇಲ್ಲಿರುವ ಸ್ಥಳವಾಕಾಶದ ಉಪಯೋಗವಾಗಲಿದೆ ಮತ್ತು ಸ್ಥಳೀಯ ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆಕಾಶವಾಣಿ ಕೇಂದ್ರ ಶಿವಮೊಗ್ಗದಿಂದ 20ಕಿ.ಮೀ. ದೂರದಲ್ಲಿರುವ ಭದ್ರಾವತಿಯಲ್ಲಿದೆ. ಅದೂ ನಗರ ವ್ಯಾಪ್ತಿ ಪ್ರದೇಶದಿಂದ 5 ಕಿ.ಮೀ. ದೂರದಲ್ಲಿದೆ. ಕೇಂದ್ರಕ್ಕೆ ನಿರ್ವಹಣಾಧಿಕಾರಿಗಳು ಇಲ್ಲದಿರುವುದರಿಂದ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರೆಯದಂತಾಗಿದೆ ಎಂದು ಸಚಿವರಿಗೆ ಮನವಿಯಲ್ಲಿ ತಿಳಿಸಲಾಗಿದೆ.
ನಗರದಲ್ಲಿ ಯಾವುದೇ ರೀತಿಯ ರೇಡಿಯೋ ಚಾನಲ್‍ಗಳು ಇಲ್ಲದಿರುವ ಪ್ರಯುಕ್ತ, ಎಫ್. ಎಂ. ಕೇಂದ್ರ ಪ್ರಾರಂಭವಾದಲ್ಲಿ ಇದೊಂದು ಅತ್ಯುತ್ತಮ ರೇಡಿಯೋ ಕೇಂದ್ರ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸರ್ಕಾರಿ ಎಫ್.ಎಂ. ಕೇಂದ್ರ ಸ್ಥಾಪನೆಯಾದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳು ಮತ್ತು ಅವುಗಳ ಉಪಯುಕ್ತತೆ ಬಗ್ಗೆ ಜನ ಜಾಗೃತಿಯನ್ನು ಮೂಡಿಸಬಹುದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications