ಭದ್ರಾವತಿಯಲ್ಲಿ ನಿಷೇಧಾಜ್ಞೆ; ಬಂಧನದ ಬಗ್ಗೆ ಶಾಸಕರ ಸ್ಪಷ್ಟನೆ
ಶಿವಮೊಗ್ಗ, ಮಾರ್ಚ್ 03: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಮಾರ್ಚ್ 5ರ ಮಧ್ಯರಾತ್ರಿ 12 ಗಂಟೆಯ ತನಕ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕ್ಷೇತ್ರದ ಶಾಸಕ ಬಿ. ಕೆ. ಸಂಗಮೇಶ್ವರ್ ಬಂಧನದ ಕುರಿತಾಗಿ ಸ್ಪಷ್ಟನೆಯನ್ನು ನೀಡಿದ್ದಾರೆ.
ಕನಕ ಮಂಟಪದಲ್ಲಿ ನಡೆದ ಕಬ್ಬಡಿ ಪಂದ್ಯಾವಳಿ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿತ್ತು. ನಂತರ ಬೆಳವಣಿಗೆಯಲ್ಲಿ ಮತ್ತೊಮ್ಮೆ ಗಲಾಟೆ ನಡೆಯುವ ಸುಳಿವು ಸಿಕ್ಕಿತ್ತು.
ಆದ್ದರಿಂದ ಭದ್ರಾವತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಸಂತೋಷ್ ಕುಮಾರ್ ಜಿ. ಆದೇಶ ಹೊರಡಿಸಿದ್ದಾರೆ. ಮಾರಾಮಾರಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು, ಪ್ರತಿದೂರು ದಾಖಲಾಗಿದೆ. ಐದು ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗಿದೆ.

ಪಟ್ಟಣದಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ನಡೆಸುವುದು, ಸಭೆ ಮಾಡವುದು, ಮಾರಕಾಸ್ತ್ರ ಹಿಡಿದು ಓಡಾಡುವುದನ್ನು ನಿಷೇಧಿಸಲಾಗಿದೆ. ಪ್ರತಿಕೃತಿ ದಹನ, ಬಹಿರಂಗ ಘೋಷಣೆ ಕೂಗದಂತೆ ಸೂಚನೆ ನೀಡಲಾಗಿದೆ.
ಭದ್ರಾವತಿ ಶಾಸಕ ಬಿ. ಕೆ. ಸಂಗಮೇಶ್ವರ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿನ್ನಲೆಯಲ್ಲಿ ಶಾಸಕರ ನಿವಾಸಕ್ಕೆ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ.
ಶಾಸಕರ ಭದ್ರತೆ ಸುದ್ದಿ; ಬುಧವಾರ ವಾಟ್ಸಪ್‌ಗಳಲ್ಲಿ ಕಾಂಗ್ರೆಸ್ ಶಾಸಕ ಬಿ. ಕೆ. ಸಂಗಮೇಶ್ವರ್ ಬಂಧನವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. "ನನ್ನನ್ನು ಯಾಕೆ ಪೊಲೀಸರು ಬಂಧಿಸುತ್ತಾರೆ. ವದಂತಿಗಳಿಗೆ ಕಿವಿಗೊಡಬೇಡಿ. ನಾನು ಬೆಂಗಳೂರಿನ ಶಾಸಕರ ಭವನದಲ್ಲಿ ಇದ್ದೇನೆ" ಎಂದು ಶಾಸಕರು ವಿಡಿಯೋ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
"ಭ್ರಷ್ಟ ಬಿಜೆಪಿ ವಿರುದ್ಧ ಹೋರಾಟ ಮಾಡಿದ್ದೇನೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮಾಡಿದ್ದೇನೆ. ಬಿಜೆಪಿಯ ಅನಾಚಾರಗಳನ್ನು ಪ್ರಶ್ನೆ ಮಾಡಿ ಜನರಿಗೆ ತಿಳಿಸುವುದು ತಪ್ಪಾ?, ಭದ್ರಾವತಿಯಲ್ಲಿ ಕಬ್ಬಡಿ ಪಂದ್ಯ ಆಯೋಜನೆ ಮಾಡಿದ್ದು ತಪ್ಪಾ?" ಎಂದು ಶಾಸಕರು ವಿಡಿಯೋ ಸಂದೇಶದಲ್ಲಿ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications