ಶಿವಮೊಗ್ಗ: ಮಧ್ಯರಾತ್ರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ರಕ್ಷಿಸಿದ ಪೊಲೀಸರು
ಶಿವಮೊಗ್ಗ, ಆಗಸ್ಟ್ 09: ಮಧ್ಯರಾತ್ರಿಯಲ್ಲಿ ತುಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದ ಯುವತಿಯನ್ನು ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ಪೊಲೀಸ್ ಮನು ಶಂಕರ್ ರಕ್ಷಿಸಿದ್ದಾರೆ.
ಚಂದ್ರಿಕಾ ಎಂಬ 24 ವರ್ಷದ ಯುವತಿ ಬೆಕ್ಕಿನಕಲ್ಮಠದ ಬಳಿ ತುಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದರು. ರಾತ್ರಿ 12 ಗಂಟೆಗೆ ಯುವತಿ ಏಕಾಂಗಿಯಾಗಿ ಹೋಗುವುದನ್ನು ಗಮನಿಸಿದ ಕೋಟೆ ಪೊಲೀಸ್ ಠಾಣೆಯ ಮನು ಶಂಕರ್ ಯುವತಿಯನ್ನು ವಿಚಾರಿಸಿದ್ದಾರೆ.
ಮನೆಯಲ್ಲಿ ಮಗಳು ಇಲ್ಲದಿರುವುದು ಪೋಷಕರಾದ ಸುಬ್ರಹ್ಮಣ್ಯ ದಂಪತಿಗಳಿಗೆ ತಳಮಳವುಂಟಾಗಿದೆ. ಮಗಳನ್ನು ಹುಡುಕಿಕೊಂಡು ಹೊರಟ ದಂಪತಿಗಳಿಗೆ ವಿನಾಯಕ ನಗರದ ಬಳಿ ಜಯನಗರ ಪೊಲೀಸ್ ಠಾಣೆಯ ಚೀತಾ ಪೊಲೀಸ್ ಗಂಗಾಧರ್ ಎದುರಾಗಿದ್ದಾರೆ.

ಗಂಗಾಧರ್ ಗೆ ಸುಬ್ರಹ್ಮಣ್ಯರವರು ಮಗಳು ಚಂದ್ರಿಕಾಳಿಗೆ ಬೈದಿದ್ದಕ್ಕೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಾಳೆ, ದಯವಿಟ್ಟು ಹುಡುಕಿಕೊಡಿ ಎಂದು ಕೋರಿದ್ದಾರೆ. ಗಂಗಾಧರ್ ವಾಕಿಟಾಕಿಯಲ್ಲಿ ಕಂಟ್ರೋಲ್ ರೂಂಗೆ ವಿಷಯ ತಿಳಿಸಿದ್ದಾರೆ.
ಅಷ್ಟರಲ್ಲಿ ಕೋಟೆ ಪೊಲೀಸ್ ಆತ್ಮಹತ್ಯೆಗೆ ಮುಂದಾಗಿದ್ದ ಯುವತಿಯನ್ನು ತಡೆದು ನಿಲ್ಲಿಸಿಕೊಂಡಿದ್ದು, ನಂತರ ಜಯನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿದೆ. ಠಾಣೆಯಲ್ಲಿ ಯುವತಿಗೆ ಬುದ್ದಿವಾದ ಹೇಳಿ ಪೋಷಕ ಸುಬ್ರಹ್ಮಣ್ಯರ ಜೊತೆ ಮನೆಗೆ ಕಳುಹಿಸಲಾಗಿದೆ.












Click it and Unblock the Notifications