ಶಿವಮೊಗ್ಗದ ಚುನಾವಣಾ ಕಣ; ಪ್ರತಿಷ್ಠೆ ಈ ಬಾರಿ ಯಾರದ್ದು?
ಶಿವಮೊಗ್ಗ, ಮೇ 04: ಈ ಬಾರಿಯ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದಾಗ ಶಿವಮೊಗ್ಗ ಕ್ಷೇತ್ರ ಎಲ್ಲರ ಗಮನ ಸೆಳೆಯಿತು. ಕಾರಣ ಪುನಃ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಎಸ್. ಬಂಗಾರಪ್ಪ ಕುಟುಂಬಗಳ ಪ್ರತಿಷ್ಠೆ ಚುನಾವಣೆಯಲ್ಲಿ ಅಡಗಿದೆ ಎಂಬ ಲೆಕ್ಕಾಚಾರವಿತ್ತು. ಆದರೆ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಚುನಾವಣಾ ಚಿತ್ರಣ ಬದಲಿಸಿದರು.
ಮೇ 7ರ ಮಂಗಳವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾನ ನಡೆಯುತ್ತಿದೆ. ಬಹಿರಂಗ ಪ್ರಚಾರ ಭಾನವಾರ ಅಂತ್ಯಗೊಳ್ಳಲಿದ್ದು, ಅಭ್ಯರ್ಥಿಗಳು ಪ್ರಚಾರದಲ್ಲಿ ಬ್ಯುಸಿ. ಬಿಜೆಪಿಯಿಂದ ಹಾಲಿ ಸಂಸದ ಬಿ. ವೈ. ರಾಘವೇಂದ್ರ, ಕಾಂಗ್ರೆಸ್‌ನಿಂದ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿಗಳು. ಪಕ್ಷೇತರ ಅಭ್ಯರ್ಥಿಯಾಗಿ ಕೆ. ಎಸ್. ಈಶ್ವರಪ್ಪ ಕಣದಲ್ಲಿದ್ದಾರೆ.

2009ರಿಂದಲೂ ಶಿವಮೊಗ್ಗ ಲೋಕಸಭಾ ಕ್ಷೇತ್ರ ಎಸ್. ಬಂಗಾರಪ್ಪ ಮತ್ತು ಬಿ. ಎಸ್. ಯಡಿಯೂರಪ್ಪ ಕುಟುಂಬದ ನಡುವಿನ ಪ್ರತಿಷ್ಠೆಯಾಗಿದೆ. 2009ರಲ್ಲಿ ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದು, ಕಾಂಗ್ರೆಸ್‌ನಿಂದ ಎದುರಾಳಿಯಾಗಿದ್ದ ಎಸ್. ಬಂಗಾರಪ್ಪ ಸೋಲಿಸಿದರು.
ರಾಘವೇಂದ್ರ ಮೊದಲ ಚುನಾವಣೆಯಲ್ಲಿಯೇ 482,783 ಮತಗಳನ್ನು ಪಡೆದು ಗೆದ್ದರು. ಎಸ್. ಬಂಗಾರಪ್ಪ 429,890 ಮತಗಳನ್ನು ಪಡೆದು ಸೋಲು ಕಂಡರು. ಈ ಮೂಲಕ ಬಂಗಾರಪ್ಪ ಕುಟುಂಬಕ್ಕೆ ಮೊದಲ ಹಿನ್ನಡೆ ಆಯಿತು. ಬಳಿಕ 2014ರಲ್ಲಿ ಬಿ. ಎಸ್. ಯಡಿಯೂರಪ್ಪ ಜೆಡಿಎಸ್ ಅಭ್ಯರ್ಥಿ, ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ಸೋಲಿಸಿದರು.
2018ರ ಉಪ ಚುನಾವಣೆಯಲ್ಲಿ ಬಿ. ವೈ. ರಾಘವೇಂದ್ರ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಸೋಲಿಸಿದರು. 2019ರಲ್ಲಿ ಪುನಃ ಮಧು ಬಂಗಾರಪ್ಪ ರಾಘವೇಂದ್ರ ವಿರುದ್ಧ ಸೋಲು ಕಂಡರು. ಈ ಮೂಲಕ ಯಡಿಯೂರಪ್ಪ ಕುಟುಂಬ ಮೇಲುಗೈ ಸಾಧಿಸಿದೆ.
ಆದರೆ ಈಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಸೊರಬದ ಕಾಂಗ್ರೆಸ್ ಶಾಸಕ ಮಧು ಬಂಗಾರಪ್ಪ ಕಳೆದ ಎಲ್ಲಾ ಚುನಾವಣೆ ಸೋಲುಗಳ ಸೇಡು ತೀರಿಸಿಕೊಂಡು ಪ್ರತಿಷ್ಠೆ ಕಾಪಾಡಿಕೊಳ್ಳಲು ಪಣ ತೊಟ್ಟಿದ್ದಾರೆ. ಗೀತಾ ಶಿವರಾಜ್ ಕುಮಾರ್ ಪರವಾಗಿ ಪ್ರಚಾರ ಅಬ್ಬರದಿಂದಲೇ ಸಾಗಿದೆ.
ಶಿವಮೊಗ್ಗ ಕ್ಷೇತ್ರದಲ್ಲಿ 8,90,061 ಮಹಿಳಾ ಮತದಾರರು ಇದ್ದಾರೆ. ರಾಜ್ಯದಲ್ಲಿ ಮಹಿಳಾ ಮತದಾರರು ಹೆಚ್ಚು ಇರುವ ಕ್ಷೇತ್ರಗಳಲ್ಲಿ ಇದು ಸಹ ಒಂದು. ಕಾಂಗ್ರೆಸ್‌ನ 5 ಗ್ಯಾರಂಟಿಗಳು, ಮಹಿಳಾ ಅಭ್ಯರ್ಥಿ, ಗೀತಾ ಶಿವರಾಜ್ ಕುಮಾರ್ ಹಿಂದಿನ ಸೋಲಿನ ಅನುಕಂಪ ಎಲ್ಲಾ ಸೇರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬುದು ಪಕ್ಷದ ನಾಯಕರ ಲೆಕ್ಕಾಚಾರವಾಗಿದೆ.
ಬಿ. ವೈ. ರಾಘವೇಂದ್ರ ಸಹೋದರ ಬಿ. ವೈ. ವಿಜಯೇಂದ್ರ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರು. ಶಿವಮೊಗ್ಗದಲ್ಲಿ ಅತಿ ಹೆಚ್ಚಿನ ಅಂತರದಿಂದ ಗೆಲ್ಲುವ ಮೂಲಕ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದು ಮತ್ತೆ ಸಾಬೀತು ಮಾಡಬೇಕು ಎಂದು ಅವರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.
ಮತ್ತೊಂದು ಕಡೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಪುತ್ರ ಕಾಂತೇಶ್ ಕೈ ತಪ್ಪಿತು. ಇದರಿಂದ ಅಸಮಾಧಾನಗೊಂಡ ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ರಾಘವೇಂದ್ರ ಸೋಲಿಸಿ ಸಂಸತ್ ಪ್ರವೇಶ ಮಾಡಬೇಕು ಎಂದು ಅವರು ಸಹ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕಾರ ಮಾಡಿದ್ದಾರೆ. ಆದರೆ ಗೀತಾ ಶಿವರಾಜ್ ಕುಮಾರ್, ಬಿ. ವೈ. ರಾಘವೇಂದ್ರ ಪೈಕಿ ಯಾರ ಮತಗಳನ್ನು ಈಶ್ವರಪ್ಪ ಪಡೆಯಲಿದ್ದಾರೆ? ಎಂಬುದರ ಮೇಲೆ ಚುನಾವಣಾ ಫಲಿತಾಂಶ ನಿರ್ಧಾರವಾಗಲಿದೆ.












Click it and Unblock the Notifications