ಭದ್ರಾವತಿ-ಚಿಕ್ಕಜಾಜೂರು ನಡುವೆ ನೂತನ ರೈಲು ಮಾರ್ಗ
ಶಿವಮೊಗ್ಗ, ಜನವರಿ 15: ಮಲೆನಾಡು ಮತ್ತು ಉತ್ತರ ಕರ್ನಾಟಕ ನಡುವೆ ರೈಲು ಸಂಪರ್ಕ ಕಲ್ಪಿಸಲು ಹೊಸ ಯೋಜನೆಯನ್ನು ರೂಪಿಸಲಾಗಿದೆ. ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಸಂಪರ್ಕಿಸುವ ನೂತನ ರೈಲು ಮಾರ್ಗ ನಿರ್ಮಾಣ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಗೆ ಒಪ್ಪಿಗೆ ಸಿಗಲಿದೆಯೇ? ಎಂದು ಕಾದು ನೋಡಬೇಕಿದೆ.
ಮಲೆನಾಡು- ಉತ್ತರ ಕರ್ನಾಟಕ ಸಂಪರ್ಕಕ್ಕೆ ಭದ್ರಾವತಿ-ಚಿಕ್ಕಜಾಜೂರು ನಡುವೆ ನೂತನ ರೈಲು ಮಾರ್ಗವನ್ನು ನಿರ್ಮಾಣ ಮಾಡಲಾಗುತ್ತದೆ. ಚಿಕ್ಕಜಾಜೂರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿದೆ. ಇದು ಉತ್ತರ ಕರ್ನಾಟಕ ಭಾಗದ ಕಡೆಯ ರೈಲುಗಳು ಚಿಕ್ಕಜಾಜೂರು ಜಂಕ್ಷನ್ ಮೂಲಕ ಸಂಚಾರ ನಡೆಸುತ್ತವೆ.

ಈ ರೈಲು ಯೋಜನೆ ಕುರಿತು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಮಾತನಾಡಿದ್ದಾರೆ, "ಚಿತ್ರದುರ್ಗ, ಕಲ್ಯಾಣ ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ಭದ್ರಾವತಿ-ಚಿಕ್ಕಜಾಜೂರು ನಡುವೆ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ" ಎಂದರು.
ನೂತನ ರೈಲು ಮಾರ್ಗದ ವಿವರ: ಭದ್ರಾವತಿ-ಚನ್ನಗಿರಿ-ಚಿಕ್ಕಜಾಜೂರು ನಡುವಿನ ರಸ್ತೆ ಮಾರ್ಗದ ಉದ್ದ 71 ಕಿ. ಮೀ. ಇದೆ. ಈ ಮಾರ್ಗದಲ್ಲಿ ರೈಲು ಮಾರ್ಗ ನಿರ್ಮಾಣ ಮಾಡಿದರೆ 10 ಕಿ. ಮೀ. ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ರೈಲು ಮಾರ್ಗದಿಂದ ಹೊಳಲ್ಕೆರೆಯ ಜನರು ಸಹ ಚಿಕ್ಕಜಾಜೂರಿಗೆ ಆಗಮಿಸಿ, ಶಿವಮೊಗ್ಗಕ್ಕೆ ಪ್ರಯಾಣ ನಡೆಸಲು ಸಹಕಾರಿಯಾಗಲಿದೆ.
ಮಲೆನಾಡಿನಿಂದ ಕಲ್ಯಾಣ ಕರ್ನಾಟಕ, ಆಂಧ್ರ ಪ್ರದೇಶ ಕಡೆಗೆ ಸಾಗುವಾಗ ಸುತ್ತುಬಳಸಿ ಸಾಗಬೇಕಿದೆ. ರಸ್ತೆ ಮೂಲಕ ಸಾಗಲು 3 ರಿಂದ 4 ಗಂಟೆ ಸಂಚಾರ ನಡೆಸಬೇಕಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮೂಲಕ ಉತ್ತರ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸಲು ರೈಲು ಮಾರ್ಗ ನಿರ್ಮಾಣವಾಗುತ್ತಿದೆ.
ಭದ್ರಾವತಿ-ಚಿಕ್ಕಜಾಜೂರು ರೈಲು ಮಾರ್ಗ ನಿರ್ಮಾಣವಾದರೆ ಶಿವಮೊಗ್ಗ-ಚಿತ್ರದುರ್ಗ ಜಿಲ್ಲೆಗೆ ರೈಲು ಸಂಪರ್ಕ ಸಾಧ್ಯವಾಗಲಿದೆ. ಇದರಿಂದಾಗಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗೆ ರೈಲು ಸಂಪರ್ಕ ಸಿಗಲಿದ್ದು, ಜನರಿಗೆ ಸಮಯ, ಹಣ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಇದೆ. ಇದಕ್ಕೆ ಬಳ್ಳಾರಿಯ ಸಂಡೂರಿನಲ್ಲಿ ಭೂಮಿ ಮಂಜೂರು ಆಗಿದೆ. ಕಾರ್ಖಾನೆ ಪುನಃ ಆರಂಭವಾರೆ ಭದ್ರಾವತಿಗೆ ಕಬ್ಬಿಣದ ಅದಿರು ಸಾಗಣೆ ಮಾಡಲು ಸಹ ಭದ್ರಾವತಿ-ಚಿಕ್ಕಜಾಜೂರು ಮಾರ್ಗ ಸಹಾಯಕವಾಗಲಿದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.
ಸಂಸದ ಬಿ. ವೈ. ರಾಘವೇಂದ್ರ ನೂತನ ರೈಲು ಮಾರ್ಗಕ್ಕಾಗಿ ಸಚಿವ ವಿ. ಸೋಮಣ್ಣಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಫೆಬ್ರವರಿಯಲ್ಲಿ ಮಂಡನೆಯಾಗಲಿರುವ ಬಜೆಟ್‌ನಲ್ಲಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲು ಹಣ ಮಂಜೂರಾಗುವ ನಿರೀಕ್ಷೆಯೂ ಇದೆ.
ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ನಗರಗಳಿಗೆ ಶಿವಮೊಗ್ಗದಿಂದ ರೈಲು ಸಂಪರ್ಕವಿದೆ. ಶಿವಮೊಗ್ಗದಿಂದ ಸಾಗುವ ರೈಲುಗಳು ಭದ್ರಾವತಿ ಮೂಲಕ ಸಂಚಾರ ನಡೆಸುತ್ತವೆ. ಆದರೆ ಶಿವಮೊಗ್ಗ-ಚಿತ್ರದುರ್ಗ ನಡುವೆ ರೈಲು ಸಂಪರ್ಕವಿಲ್ಲ. ಭದ್ರಾವತಿ-ಚಿಕ್ಕಜಾಜೂರು ಮಾರ್ಗದಿಂದ ಎರಡು ಜಿಲ್ಲೆಗಳಿಗೆ ರೈಲು ಸಂಪರ್ಕ ಸಿಕ್ಕಿದಂತೆ ಆಗುತ್ತದೆ.












Click it and Unblock the Notifications