ದೀಪಕ್ ಹತ್ಯೆಗೆ ಬಣ್ಣ ಬಳಿಯುವ ಕೆಲಸ ನಡೆದಿದೆ : ಕಾಗೋಡು
ಶಿವಮೊಗ್ಗ, ಜನವರಿ 04 : 'ಹುಟ್ಟಿದ ಮೇಲೆ ಸಾವು ಖಚಿತ. ಕೊಲೆ ನಮ್ಮ, ನಿಮ್ಮ ಊರಿನಲ್ಲೂ ಆಗುತ್ತದೆ. ಆದರೆ, ಕರಾವಳಿಯಲ್ಲಿ ಕೆಲವು ಶಕ್ತಿಗಳು ಇಂತಹ ಘಟನೆಗಳಿಗೆ ಬಣ್ಣ ಬಳಿಯುವ ಕೆಲಸ ಮಾಡುತ್ತವೆ' ಎಂದು ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಗುರುವಾರ ಮಾತನಾಡಿದ ಅವರು, 'ದೀಪಕ್ ಕೊಲೆ ಖಂಡನೀಯ. ಯಾರು ಇಂತಹ ಕೃತ್ಯ ಮಾಡಿದ್ದಾರೆಯೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದರು.

'ಭಾರತೀಯ ದಂಡ ಸಂಹಿತೆ ಬಂದಿದ್ದು ಬ್ರಿಟಿಷರ ಕಾಲದಲ್ಲಿ. ಆದರೂ ಇಂದಿಗೂ ಹತ್ಯೆಗಳು ನಡೆಯುತ್ತಿವೆ. ಸಮಾಜ ಎಂದ ಮೇಲೆ ಏರು ಪೇರು ಇದಿದ್ದೆ. ಕರಾವಳಿಯಲ್ಲಿ ನಡೆಯುವ ಕೃತ್ಯಗಳಿಗೆ ಕೆಲವು ಶಕ್ತಿಗಳು ಬಣ್ಣ ಹಚ್ಚುತ್ತಿವೆ' ಎಂದು ದೂರಿದರು.
'ನಮ್ಮದು ವಿಶ್ವದಲ್ಲೇ ಬಹುಸಂಸ್ಕೃತಿ ಹೊಂದಿರುವ ದೇಶ. ಆಗಾಗ್ಗೆ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಪುರಾಣಗಳು ಕೂಡ ಇದಕ್ಕೆ ಹೊರತಾಗಿಲ್ಲ. ಶ್ರೀರಾಮನೇ ತನ್ನ ಗರ್ಭಿಣಿ ಪತ್ನಿಯನ್ನು ವನವಾಸಕ್ಕೆ ತಳ್ಳಿದ ಉದಾಹರಣೆ ಇದೆ' ಎಂದರು.
ಬಿಜೆಪಿ ಕಾರ್ಯಕರ್ತ ದೀಪಕ್ ಹತ್ಯೆ ಪ್ರಕರಣ ಕರಾವಳಿಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.












Click it and Unblock the Notifications