'ನಾವು ಸೋತಿದ್ದರೂ ಕುಮಾರಸ್ವಾಮಿ ಸಿಎಂ ಆಗಿರುವುದು ಸಂತಸ ತಂದಿದೆ'
ಶಿವಮೊಗ್ಗ, ಆಗಸ್ಟ್.29: ನಾವು ಸೋತಿದ್ದರೂ ಕುಮಾರಸ್ವಾಮಿ ಸಿಎಂ ಆಗಿರುವುದು ಸಂತಸ ತಂದಿದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.
ಜಿಲ್ಲಾ ಜೆಡಿಎಸ್ ಘಟಕದಲ್ಲಿ ಇಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಕಾರ್ಯಕ್ರಮ ಮತ್ತು ಹೋರಾಟ ಮುಂದುವರಿಯಲಿದೆ. ರಾಜ್ಯಕ್ಕೆ ಒಳ್ಳೆಯ ನಾಯಕತ್ವ ನೀಡಲು ಸಿಎಂ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದಾರೆ.
ನಾವು ಸೋತಿರಬಹುದು. ಆದರೆ ಹೀನಾಯವಾಗಿ ಸೋಲನ್ನು ಅನುಭವಿಸಲ್ಲ. ಚುನಾವಣೆ ಸೋಲಿನಿಂದ ಈಗಾಗಲೇ ಹೊರ ಬಂದಿದ್ದೇವೆ. ನಮ್ಮ ತಂದೆ ಅವರು ಕೊನೆಯ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದರು. ರಾಜಕಿಯದಲ್ಲಿ ಸೋಲು ಗೆಲುವು ಸಾಮಾನ್ಯ. ಜನರ ಸೇವೆ ಮಾಡುವುದು ಮುಖ್ಯ ಎಂದರು.

ಮುಂದಿನ ಲೋಕಸಭೆ ಚುನಾವಣೆಗೆ ತಯಾರಿ ಆರಂಭಗೊಂಡಿದ್ದು, ಹೊಸ ಅಧ್ಯಕ್ಷರ ನೇಮಕ ಹೊಸ ಹುರುಪು ತಂದಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದ ನಂತರ ಸಿದ್ಧತೆ ಮತ್ತು ಹೋರಾಟ ಆರಂಭಗೊಳ್ಳಲಿದೆ.
ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಹುದ್ದೆ ಸೇರಿದಂತೆ ಯಾವುದೇ ಸ್ಥಾನಮಾನವನ್ನು ನಾನು ಬಯಸಿಲ್ಲ. ಅದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ಎಂದು ಮಧು ಬಂಗಾರಪ್ಪ ತಿಳಿಸಿದರು.
ಇನ್ನು ಕೊಡಗು ಪ್ರವಾಹ ಕುರಿತು ಮಾತನಾಡಿದ ಅವರು, ಮಳೆ ಅನಾಹುತದಿಂದ ಸಾಕಷ್ಟು ಹಾನಿಯಾಗಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ನಿಖರವಾದ ನಷ್ಟದ ಚಿತ್ರಣ ತಿಳಿಯಲು ಇನ್ನಷ್ಟು ಸಮಯವಾಗಲಿದೆ ಎಂದರು.












Click it and Unblock the Notifications