ಶಿವಮೊಗ್ಗದ ಹಲವೆಡೆ ಲೋಕಾಯುಕ್ತ ದಾಳಿ, ಅಪಾರ ನಗದು, ಚಿನ್ನಾಭರಣ ವಶ
ಶಿವಮೊಗ್ಗ, ಜುಲೈ. 23: ಶಿವಮೊಗ್ಗ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಹಲವು ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಅಂತರಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗೇಶ್.ಬಿ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕಲಂ 13(1)(ಬಿ) ಸಹಿತ 13(2) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆ ಕೈಗೊಂಡು ಇವರಿಗೆ ಸಂಬಂಧಿಸಿದ 5 ಸ್ಥಳಗಳಲ್ಲಿ ಜುಲೈ 19 ರಂದು ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳು ಸ್ಥಳ ಶೋಧನೆ ಮಾಡಿದ್ದು, ನಾಗೇಶ್ ಬಿ. ರವರಿಗೆ ಸಂಬಂದಿಸಿದಂತೆ 2 ಖಾಲಿ ನಿವೇಶನಗಳು, 2 ಮನೆಗಳು, 5.14 ಎಕರೆ ಕೃಷಿ ಜಮೀನು , ಅಂದಾಜು ರೂ 12,80,000/- ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು, ಅಂದಾಜು 1,76,000/- ಮೌಲ್ಯದ ವಾಹನಗಳು, ಅಂದಾಜು 7,00,000/- ಮೌಲ್ಯದ ಗೃಹಪಯೋಗಿ ವಸ್ತುಗಳು ಮತ್ತು ರೂ 5,71,640/- ಗಳು ನಗದು ಹಣ ಪತ್ತೆಯಾಗಿದೆ.
ಅಂದಾಜು 1,33,87,826 ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ. ಹಾಗೂ ಅವರ ಮನೆಯಲ್ಲಿ ಪತ್ತೆಯಾದ ನಗದು 5,00,000 ರೂಗಳನ್ನು ತನಿಖೆ ಸಂಬಂಧ ವಶಪಡಿಸಿಕೊಳ್ಳಲಾಗಿರುತ್ತದೆ. ಈ ಪ್ರಕರಣವನ್ನು ಶಿವಮೊಗ್ಗದ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಚೌದರಿ ಎಂ.ಹೆಚ್ ದಾಖಲಿಸಿದ್ದು, ಪೊಲೀಸ್ ನಿರೀಕ್ಷಕ ವೀರಬಸಪ್ಪ ಎಲ್ ಕುಸಲಾಪುರ ತನಿಖೆ ಮುಂದುವರೆಸಿದ್ದಾರೆ.
ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಮನೆ ಮೇಲೆ ಲೋಕಾಯುಕ್ತ ದಾಳಿ
ಇನ್ನು, ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಕಾಶ್.ಜಿ.ಎನ್ ಅವರು ತಮ್ಮ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಸಿರುತ್ತಾರೆಂಬ ದೂರಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕಲಂ 13(1)(ಬಿ) ಸಹಿತ 13(2) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆ ಕೈಗೊಂಡು ಪ್ರಕಾಶ್ ಜಿ.ಎನ್ ರವರಿಗೆ ಸಂಬಂಧಿಸಿದ 3 ಸ್ಥಳಗಳಲ್ಲಿ ಜುಲೈ 19 ರಂದು ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳು ಸ್ಥಳ ಶೋಧನೆ ಮಾಡಿದ್ದು, ಪ್ರಕಾಶ್ ಜಿ.ಎನ್ ರವರಿಗೆ ಸಂಬಂದಿಸಿದಂತೆ 1 ಖಾಲಿ ನಿವೇಶನ, 2 ಮನೆಗಳು, 2.8 ಎಕರೆ ಕೃಷಿ ಜಮೀನು ಅಂದಾಜು ಸ್ಥಿರಾಸ್ಥಿ ಮೌಲ್ಯ ರೂ 1,57,00,000/- ಕಂಡು ಬಂದಿರುತ್ತದೆ. ಹಾಗೂ ಅವರ ವಾಸದ ಮನೆಯಲ್ಲಿ ರೂ 38,32,630/- ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು, ಅಂದಾಜು 5,20,000/-ರೂ ಮೌಲ್ಯದ ವಾಹನಗಳು, ಅಂದಾಜು 11,30,000/-ರೂ ಮೌಲ್ಯದ ಗೃಹಪಯೋಗಿ ವಸ್ತುಗಳು ಮತ್ತು ರೂ 12,86,500/- ನಗದು ಹಣ ಪತ್ತೆಯಾಗಿರುತ್ತದೆ.
ನಂತರ ಈ ತನಿಖೆಯನ್ನು ಮುಂದುವರೆಸಿದ್ದು, ಜುಲೈ 20 ರಂದು ಪ್ರಕಾಶ್ ಜಿ.ಎನ್ ರವರ ಪತ್ನಿ ಹೆಸರಿನಲ್ಲಿದ್ದ ಬ್ಯಾಂಕ್ ಲಾಕರ್‍ನ್ನು ಶೋಧನೆ ಮಾಡಲಾಗಿ ಈ ಬ್ಯಾಂಕ್ ಲಾಕರ್‍ನಲ್ಲಿ ರೂ,32,06,000/- ನಗದು ಹಣ ಮತ್ತು ಅಂದಾಜು ರೂ 18,48,200/- ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿರುತ್ತದೆ. ಈ ಅಧಿಕಾರಿಯು ಅಂದಾಜು 2,05,23,330/- ರೂ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ.
ಅವರ ಮನೆ ಮತ್ತು ಲಾಕರ್ ನಲ್ಲಿ ಪತ್ತೆಯಾದ ನಗದು ರೂ 44,06,000/- ಗಳನ್ನು ತನಿಖೆ ಸಂಬ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣವನ್ನು ಶಿವಮೊಗ್ಗದ ಪೊಲೀಸ್ ಅಧೀಕ್ಷಕ ಮಂಜುನಾಥ್ ಚೌದರಿ ಎಂ.ಹೆಚ್ ದಾಖಲಿಸಿದ್ದು, ಪೊಲೀಸ್ ನಿರೀಕ್ಷ ಹೆಚ್.ಎಸ್.ಸುರೇಶ್ ಕರು ತನಿಖೆ ಮುಂದುವರೆಸುತ್ತಿದ್ದಾರೆ.












Click it and Unblock the Notifications