KS Eshwarappa: ಸಿದ್ದರಾಮಯ್ಯ ಕುಂಕುಮ ಹಚ್ಚಲು ಮೈಮೇಲೆ ದೆವ್ವ ಬಂದಂತೆ ಆಡೋರು... ಈಗ...
ಶಿವಮೊಗ್ಗ ಅಕ್ಟೋಬರ್ 15: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಗೂಂಡಾಗಳ ರಕ್ಷಣೆಗೆ ಹೊರಟ್ಟಿದ್ದಾರೆ ಎಂದು ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಹಿಂದುಳಿದ ವರ್ಗ ಹಾಗೂ ದಲಿತ ವರ್ಗದ ಜೊತೆಗೆ ಎಲ್ಲಾ ಸಮುದಾಯದ ದೊಡ್ಡ ಸಂಘಟನೆ ಮಾಡಬೇಕು ಇದು ಅನೇಕ ಸಾಧು ಸಂತರ ಆಸೆಯಾಗಿದೆ, ಇದಕ್ಕಾಗಿ ಸಭೆ ನಡೆಸಲಾಗುತ್ತದೆ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ.
ಹೌದು.. ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುಳಿದ ವರ್ಗ ದಲಿತ ವರ್ಗದ ಜೊತೆಗೆ ಎಲ್ಲಾ ಸಮುದಾಯದ ದೊಡ್ಡ ಸಂಘಟನೆ ಮಾಡಬೇಕು ಅನ್ನೋದು ಅನೇಕ ಸಾಧು ಸಂತರ ಅಪೇಕ್ಷೆಯಾಗಿದೆ. ಇದಕ್ಕಾಗಿ ಹುಬ್ಬಳ್ಳಿಯಲ್ಲಿ ಒಂದು ಸಭೆ ಆಯ್ತು. ಸಭೆಯಲ್ಲಿ ತೀರ್ಮಾನ ಆಗಿರುವ ಪ್ರಕಾರ ಅಕ್ಟೋಬರ್ 20 ರಂದು ಬಾಗಲಕೋಟೆಯಲ್ಲಿ ಉತ್ತರ ಕರ್ನಾಟಕದ ಪ್ರಮುಖ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಎಂದರು.

ಬಾಗಲಕೋಟೆಯ ಚರಂತಿಮಠ ಸಭಾಂಗಣದಲ್ಲಿ ಸಮಾವೇಶ ಆಯೋಜನೆ ಮಾಡಲಾಗುತ್ತದೆ. ಇದರಲ್ಲಿ ಸುಮಾರು ಎರಡೂವರೆ ಸಾವಿರ ಜನ ಸೇರುತ್ತಾರೆ. ಉತ್ತರ ಕರ್ನಾಟಕ ಭಾಗದ ಸಾಧು ಸಂತರು ನಾಯಕತ್ವ ವಹಿಸಲಿದ್ದಾರೆ. ಸಾಧು ಸಂತರು ಹೆಸರು ಘೋಷಣೆ ಮಾಡುತ್ತಾರೆ. ಸುಮಾರು 25 ಮಂದಿ ಸಾಧು ಸಂತರು ಭಾಗವಹಿಸುತ್ತಾರೆ ಎಂದು ಈಶ್ವರಪ್ಪ ಹೇಳಿದರು.
ಹಿಂದೂ ಸಮಾಜದ ಬಡವರ ಸಂಘಟನೆ
ಹಿಂದು ಸಮಾಜದ ಎಲ್ಲಾ ಬಡವರಿಗೆ ಸರಿಯಾದ ಸಂಘಟನೆ ಇಲ್ಲ. ರಾಷ್ಟ್ರ ಭಕ್ತರ ದೊಡ್ಡ ಸಂಘಟನೆ ಆಗಬೇಕಿದೆ ಅಂತಾ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದರು. ಈ ಹಿಂದೆ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಿದ್ದೆ, ಯಡಿಯೂರಪ್ಪ ಹೇಳಿದರೂ ಅಂತಾ ರಾಯಣ್ಣ ಬ್ರಿಗೇಡ್ ನಿಲ್ಲಿಸಿ ತಪ್ಪು ಮಾಡಿದೆ. ಈಗ ಆ ರೀತಿ ಮಾಡಲ್ಲ, ನನ್ನ ಸಂಘಟನೆ ಮುಂದುವರಿಸುತ್ತೇನೆ ಎಂದರು.

ವಕ್ಪ್ ಆಸ್ತಿ ಬಗ್ಗೆ ಅನ್ವರ್ ಮಾನಪ್ಪಾಡಿ ವರದಿ ಕೊಟ್ಟಿದ್ದಾರೆ. ರಾಜ್ಯದ ಶ್ರೀಮಂತ ಮುಸ್ಲಿಂರು ವಕ್ಪ್ ಆಸ್ತಿ ಕಬಳಿಕೆ ಮಾಡಿದ್ದಾರೆ. ವರದಿ ಪ್ರಕಾರ ರೆಹಮಾನ್ ಖಾನ್, ಮಲ್ಲಿಕಾರ್ಜುನ ಖರ್ಗೆ ಆಸ್ತಿ ಲೂಟಿ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್ ಹಾಗೂ ಬೇರೆ ಬೇರೆ ಪಕ್ಷದವರು ಇದ್ದಾರೆ. ಸಾವಿರಾರು ಕೋಟಿ ಲೂಟಿಯಾಗಿದೆ ಎಂದು ಈಶ್ವರಪ್ಪ ಆರೋಪಿಸಿದರು.
ಬಡ ಮುಸ್ಲಿಂರಿಗೆ ಸಹಾಯ ಮಾಡಲು ಎಲ್ಲರೂ ಪ್ರಯತ್ನ ಮಾಡಿದರು. ಪ್ರಭಾವಿ ಮುಸ್ಲಿಂರು ತಮ್ಮ ಆಸ್ತಿ ಹೋಗ್ತದೆ ಅಂತಾ ಏನು ಬೇಕಾದರೂ ಮಾಡಬಹುದು. ಡಿ.ಎಚ್.ಶಂಕರಮೂರ್ತಿ ಅವರು ಸಭಾಧ್ಯಕ್ಷರಾಗಿದ್ದಾಗ ವರದಿ ಸ್ವೀಕಾರ ಮಾಡಿದ್ದರು. ಅನ್ವರ್ ಮಾನಪ್ಪಾಡಿ ಹಾಗು ಡಿ.ಎಚ್.ಶಂಕರಮೂರ್ತಿ ಅವರಿಗೆ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಡಿಕೆಶಿ ಗೂಂಡಾಗಳ ರಕ್ಷಣೆಗೆ ಹೊರಟ್ಟಿದ್ದಾರೆ....
ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಬಗ್ಗೆ ಮಾತನಾಡಿದ ಅವರು, ಪೊಲೀಸರ ರಕ್ಷಣೆಯನ್ನು ಸರಕಾರ ಮಾಡಲ್ಲ ಅಂದರೆ ಸರಕಾರ ಬದುಕಿದೆಯಾ, ಸತ್ತಿದೆಯಾ? ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿದರು, ಬೆಂಕಿ ಹಚ್ಚಿದರು. ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದೆ. ಸಿದ್ದರಾಮಯ್ಯ ಡಿಕೆಶಿ ಗೂಂಡಾಗಳ ರಕ್ಷಣೆಗೆ ಹೊರಟ್ಟಿದ್ದಾರೆ. ಇದು ಗೂಂಡಾ ಸರಕಾರನಾ? ಈ ಧೋರಣೆ ಸರಿಯಲ್ಲ ಎಂದರು.
ಈಡಿ ಕೇಸ್ ರದ್ದು ಮಾಡ್ತೀವಿ, ಕೇಸ್ ವಾಪಸ್ ಪಡೆಯುತ್ತೇವೆ ಅಂದ್ರೆ ಪೊಲೀಸರಿಗೆ ರಕ್ಷಣೆ ಕೊಡುವವರು ಯಾರು? ನಮಗೆ ರಕ್ಷಣೆ ಇಲ್ಲ ಅಂತಾ ಪೊಲೀಸರು ಕೈಕಟ್ಟಿ ಕುಳಿತರೇ ರಕ್ಷಣೆ ಮಾಡುವವರು ಯಾರು? ಮಂತ್ರಿಗಳಿಗೆ ಪೊಲೀಸರು ರಕ್ಷಣೆ ಕೊಡುವುದಿಲ್ಲ. ಗುಂಡಾಗಳಿಗೆ ರಕ್ಷಣೆ ಕೊಡುತ್ತದೆ. ಹೀಗಾದರೆ ಕರ್ನಾಟಕ ಗೂಂಡಾ ರಾಜ್ಯ ಆಗುತ್ತದೆ ಎಂದು ಆಕ್ರೋಶಗೊಂಡರು.
ಸಿದ್ದರಾಮಯ್ಯ ಕುಂಕುಮ ಹಚ್ಚಿಕೊಳ್ಳುತ್ತಿರಲಿಲ್ಲ....
ಬಾಂಗ್ಲಾದೇಶದಲ್ಲಿ ಇದೇ ನಡೆದಿದ್ದು, ಸಿದ್ದರಾಮಯ್ಯ ಇತ್ತೀಚಿಗೆ ದೇವಸ್ಥಾನಕ್ಕೆ ಹೋಗ್ತಿದ್ದಾರೆ. ಈಗ ಕುಂಕುಮ ಹಚ್ಚಿಕೊಳ್ಳುತ್ತಿದ್ದಾರೆ. ಮೊದಲು ಕುಂಕುಮ ಹಚ್ಚಲು ಹೋದರೆ ಮೈಮೇಲೆ ದೆವ್ವ ಬಂದ ರೀತಿ ಆಡೋರು. ಈ ಭಕ್ತಿ ನಾಟಕೀಯ ಆಗಬಾರದು. ಈ ಭಕ್ತಿ ಮುಂದುವರಿಸಿ. ಮುಡಾ ಹಗರಣದಲ್ಲಿ ಸಿಲುಕಿದ್ದೀನಿ, ವೈಯಕ್ತಿಕ ಲಾಭಕ್ಕೆ ಚಾಮುಂಡೇಶ್ವರಿ, ಸವದತ್ತಿ ಎಲ್ಲಮ್ಮ ರಕ್ಷಣೆ ಕೊಡಬೇಕಾ? ಮುಸ್ಲಿಂರು, ಗೂಂಡಾಗಳ ಪರ ಇದ್ದರೆ ಚಾಮುಂಡೇಶ್ವರಿ, ಎಲ್ಲಮ್ಮ ಹೇಗೆ ಕಾಪಾಡ್ತಾಳೆ... ಚಾಮುಂಡೇಶ್ವರಿ, ಎಲ್ಲಮ್ಮ ಸಹಿಸುವುದಿಲ್ಲ. ಚಾಮುಂಡೇಶ್ವರಿ ಮಹಿಷಾಸುರನ ಸಂಹಾರ ಮಾಡಿದ ರೀತಿ ನೀವು ಸಂಹಾರ ಆಗ್ತೀರಾ.. ಎಂದು ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಕಿಡಿ ಕಾರಿದರು.
ಜಾತಿಗಣತಿ ಯಾವಾಗ?
ಜಾತಿ ಜನಗಣತಿ 18 ಕ್ಕೆ ಮಂಡಿಸುತ್ತೇನೆ ಅಂದಿದ್ದರು. ಇದೀಗ 18 ಕ್ಕೆ ಆಗಲ್ಲ ಮುಂದೂಡುತ್ತೇನೆ ಅಂದಿದ್ದಾರೆ. 9 ವರ್ಷದ ಹಿಂದೆಯೇ ಜಾತಿಜನಗಣತಿ ಮಂಡಿಸುತ್ತೇನೆ ಅಂದಿದ್ದರು. 9 ವರ್ಷ ಆದರೂ ಮಂಡಿಸಲು ಆಗಿಲ್ಲ. ಇದೀಗ 25 ಕ್ಕೆ ಮಂಡನೆ ಮಾಡ್ತೀನಿ ಅಂದಿದ್ದಾರೆ. ನೋಡೋಣ 9 ವರ್ಷ ಕಾಯ್ದಿದ್ದೇವೆ ಇನ್ನೊಂದು ವಾರ ಕಾಯೋದಕ್ಕೆ ಆಗಲ್ವಾ.. ಎಂದು ವಾಗ್ದಾಳಿ ಮಾಡಿದರು.
ಮುಡಾ ಹಗರಣ ಡೈವರ್ಟ್ ಮಾಡಲು ಜಾತಿ ಜನಗಣತಿ ವರದಿ ಪ್ರಸ್ತಾಪ ಮಾಡಿದ್ದರೆ ಜನ ಸಹಿಸಲ್ಲ. ವರದಿ ಇನ್ನು ಬಹಿರಂಗ ಆಗಿಲ್ಲ ಈಗಲೇ ಕೆಲವರು ವಿರೋಧ ಮಾಡ್ತಿದ್ದಾರೆ. ಮೊದಲು ವರದಿ ಬಿಡುಗಡೆ ಆಗಲಿ. ಅದರಲ್ಲಿ ಇರುವ ಅಂಶ ಚರ್ಚೆ ಆಗಲಿ.. ಸರಿ ತಪ್ಪು ಬಗ್ಗೆ ಚರ್ಚೆ ಆಗಲಿ... ಎಂದರು.












Click it and Unblock the Notifications