ಶಿವಮೊಗ್ಗ; ಶರಾವತಿ ಯೋಜನೆ ಸಂತ್ರಸ್ತರ ಪರಿಹಾರಕ್ಕಾಗಿ ಜಂಟಿ ಸಮೀಕ್ಷೆ
ಶಿವಮೊಗ್ಗ, ಜುಲೈ 20; "ಹಲವು ಕಡೆ ಅರಣ್ಯ ಭೂಮಿ ಮತ್ತು ಕಂದಾಯ ಭೂಮಿಗಳೆರಡಕ್ಕೂ ಒಂದೇ ಸರ್ವೇ ನಂಬರ್ ಇರುವ ಹಿನ್ನೆಲೆಯಲ್ಲಿ ಹಾಗೂ ಜಂಟಿ ಸರ್ವೆ ನಡೆಯದಿರುವ ಕಾರಣ ಗೊಂದಲ ಇದೆ. ಇದನ್ನು ಪರಿಹರಿಸಲು ಜಂಟಿ ಸರ್ವೆಯೇ ಪರಿಹಾರವಾಗಿದೆ. ಈ ಕುರಿತಂತೆ ಕಂದಾಯ ಸಚಿವರೊಂದಿಗೆ ಸಮಾಲೋಚಿಸಿ ಸಾಧ್ಯವಾದಷ್ಟು ಬೇಗ ಜಂಟಿ ಸಮೀಕ್ಷೆ ನಡೆಸಲಾಗುವುದು" ಎಂದು ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆ ಜಲ ವಿದ್ಯುತ್ ಯೋಜನೆಯ ಸಂತ್ರಸ್ತರು ಹಾಗೂ ಅರಣ್ಯ ಹಕ್ಕು ಭೂ ಮಂಜೂರಾತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಸಭೆಯನ್ನು ಕರೆದಿದ್ದರು.

ಈ ಸಭೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಪಾಲ್ಗೊಂಡಿದ್ದರು. ಸಭೆಯಲ್ಲಿ ಕ್ರೀಡೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ, ಮಲೆನಾಡು ಭಾಗದ ಶಾಸಕರುಗಳಾದ ಶಾರದಾ ಪೂರ್ಯನಾಯಕ್, ಭೀಮಣ್ಣ ನಾಯಕ್, ಬೇಳೂರು ಗೋಪಾಲಕೃಷ್ಣ, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಎ. ಎಸ್. ಪೊನ್ನಣ್ಣ, ಅರಣ್ಯ, ಕಂದಾಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪರಿಹಾರ ಕಲ್ಪಿಸಬೇಕಿದೆ; ಸಭೆಯಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, "1978ಕ್ಕೆ ಮೊದಲು ಮೂರು ತಲೆಮಾರುಗಳ ಕಾಲ ಅರಣ್ಯ ಭೂಮಿಯಲ್ಲಿ ವಾಸಿಸುತ್ತಿರುವ ಕುರಿತಂತೆ ದಾಖಲಾತಿ ಒದಗಿಸುವ ಬುಡಕಟ್ಟು ಜನರಿಗೆ ಅರಣ್ಯ ಹಕ್ಕು ಕಾಯಿದೆ ಅಡಿ ಭೂ ಮಂಜೂರಾತಿಗೆ ಅವಕಾಶವಿದ್ದು, ಜಾಗ ಗುರುತಿಸಿ ಪರಿಹಾರ ಕಲ್ಪಿಸಬೇಕಿದೆ" ಎಂದರು.
"ಶರಾವತಿ ಕಣಿವೆ ಜಲವಿದ್ಯುತ್ ಯೋಜನೆ ಭೂ ಮಂಜೂರಾತಿ ಉದ್ದೇಶಕ್ಕಾಗಿ ಸರ್ಕಾರ ಮಾಡಿದ್ದ ಡಿನೋಟಿಫಿಕೇಷನ್ ಆದೇಶವನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿ ಪಡೆದು, ಸುಪ್ರೀಂಕೋರ್ಟ್‌ಗೆ ನಿಯಮಾನುಸಾರ ಅರ್ಜಿ ಸಲ್ಲಿಸಬೇಕು" ಎಂದು ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.
ಹಲವು ಕಡೆ ಅರಣ್ಯ ಭೂಮಿ ಮತ್ತು ಕಂದಾಯ ಭೂಮಿಗಳೆರಡಕ್ಕೂ ಒಂದೇ ಸರ್ವೇ ನಂಬರ್ ಇರುವ ಹಿನ್ನೆಲೆಯಲ್ಲಿ ಹಾಗೂ ಜಂಟಿ ಸರ್ವೆ ನಡೆಯದಿರುವ ಕಾರಣ ಗೊಂದಲ ಇದೆ. ಇದನ್ನು ಪರಿಹರಿಸಲು ಜಂಟಿ ಸರ್ವೆಯೇ ಪರಿಹಾರವಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಜಂಟಿ ಸರ್ವೇ ನಡೆಸುವ ಕುರಿತು ಕಂದಾಯ ಸಚಿವರ ಜೊತೆ ಚರ್ಚಿಸಲು ನಿರ್ಧರಿಲಾಯಿತು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪ; ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಶರಾವತಿ ಯೋಜನೆ ಸಂತ್ರಸ್ತರ ಪರಿಹಾರದ ವಿಚಾರವನ್ನು ಪ್ರಸ್ತಾಪ ಮಾಡಿತ್ತು. ಚುನಾವಣೆಯಲ್ಲಿ ಜಯಗಳಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸೊರಬದ ಕಾಂಗ್ರೆಸ್ ಶಾಸಕ ಮಧು ಬಂಗಾರಪ್ಪ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದಾರೆ.
ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಶರಾವತಿ ಯೋಜನೆ ಮುಳುಗಡೆ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ಪರಿಹಾರ ನೀಡಲು ಯೋಜನೆ ಮತ್ತು ಸಂಬಂಧಿತ ಕಾನೂನುಗಳ ತಿದ್ದುಪಡಿ ತರಲಾಗುತ್ತದೆ ಎಂದು ಕಾಂಗ್ರೆಸ್ ಭರವಸೆ ನೀಡಿತ್ತು.
ಸಿದ್ದರಾಮಯ್ಯ ಭೇಟಿ; ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಶರಾವತಿ ಯೋಜನೆ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರದಲ್ಲಿ ವಿಧಾನಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ್ದರು. ಶಿವಮೊಗ್ಗದಲ್ಲಿ ಶರಾವತಿ ಯೋಜನೆ ಸಂತ್ರಸತರು ನಡೆಸಿದ ಹೋರಾಟದಲ್ಲಿಯೂ ಅವರು ಭಾಗಿಯಾಗಿದ್ದರು.
ವಿಧಾನಸಭೆಯಲ್ಲಿ ಮಾತನಾಡಿ, ರಾಜ್ಯದ ಜನರಿಗೆ ಅನೇಕ ದಶಕಗಳಿಂದ ಬೆಳಕು ಕೊಟ್ಟಿರುವ ಶಿವಮೊಗ್ಗ ಜಿಲ್ಲೆಯ ಶರಾವತಿ ಪ್ರದೇಶದ ಜನರ ಬದುಕು ಇಂದು ಕತ್ತಲೆಯಲ್ಲಿ ಮುಳುಗಿದೆ. ಶರಾವತಿ ಯೋಜನೆಗಾಗಿ ಭೂಮಿಯನ್ನು ಬಿಟ್ಟುಕೊಟ್ಟವರಿಗೆ ತಮ್ಮ ಪೂರ್ವಜರು ಬಾಳಿ ಬದುಕಿದ್ದ ನೆಲವನ್ನು, ನೆಲದೊಂದಿನ ನೆನಪುಗಳನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಿದ್ದೇವೆ ಎಂಬ ದುಃಖ ಕಾಡಿದ್ದರೂ ಸಹ ತಾವು ನಾಡಿಗಾಗಿ ತ್ಯಾಗದ ಕೆಲಸ ಮಾಡುತ್ತಿದ್ದೇವೆ ಎಂಬ ಭಾವನೆಯಲ್ಲಿ ಈ ಯೋಜನೆಗಾಗಿ ಜಾಗವನ್ನು ಬಿಟ್ಟುಕೊಟ್ಟಿದ್ದವರು ಇಂದು ತಮ್ಮ ಕಾಳಜಿಗಳಿಗಾಗಿ ಪರಿತಪಿಸುವಂತಾಗಿದೆ ಎಂದು ಹೇಳಿದ್ದರು.
ಈಗ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಶರಾವತಿ ಯೋಜನೆ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.












Click it and Unblock the Notifications