ಶಿವಮೊಗ್ಗದಲ್ಲಿ ಜೇಮ್ಸ್ ಚಿತ್ರ ಪ್ರದರ್ಶನ, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಭ್ರಮ
ಶಿವಮೊಗ್ಗ, ಮಾರ್ಚ್ 17: ಶಿವಮೊಗ್ಗದಲ್ಲಿ ಅಭಿಮಾನಿಗಳು ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಇದೇ ವೇಳೆ ಇಂದು ಜೇಮ್ಸ್ ಸಿನಿಮಾ ಬಿಡುಗಡೆಯಾಗಿದ್ದು, ಮೊದಲ ದಿನವೇ ಚಿತ್ರ ನೋಡಲು ಮುಗಿಬಿದ್ದರು.
ಶಿವಮೊಗ್ಗ ನಗರದ ಎಚ್.ಪಿ.ಸಿ ಟಾಕೀಸ್, ಲಕ್ಷ್ಮಿ ಚಿತ್ರಮಂದಿರ, ಭಾರತ್ ಸಿನಿಮಾಸ್‌ನಲ್ಲಿ ಜೇಮ್ಸ್ ಸಿನಿಮಾದ ಪ್ರದರ್ಶನವಾಗುತ್ತಿದ್ದು, ಬೆಳಗ್ಗೆಯಿಂದಲೇ ಅಭಿಮಾನಿಗಳು ಸಿನಿಮಾ ವೀಕ್ಷಿಸುತ್ತಿದ್ದಾರೆ.
ಚಿತ್ರಮಂದಿರ ಸಂಪೂರ್ಣ ಭರ್ತಿ
ಶಿವಮೊಗ್ಗದ ಎಚ್.ಪಿ.ಸಿ ಚಿತ್ರಮಂದಿರದಲ್ಲಿ ಮೊದಲು ಫ್ಯಾನ್ಸ್ ಶೋ ಆಯೋಜಿಸಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಜೇಮ್ಸ್ ಚಿತ್ರ ವೀಕ್ಷಿಸಿದ್ದು, ಚಿತ್ರಮಂದಿರದ ಒಳಗೆ ಮೆಟ್ಟಿಲುಗಳ ಮೇಲೆ ಕುಳಿತು ಸಿನಿಮಾ ನೋಡಿದರು. ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ನಿಯಂತ್ರಿಸಲು ಚಿತ್ರಮಂದಿರದ ಸಿಬ್ಬಂದಿ ಮತ್ತು ಪೊಲೀಸರು ಹರಸಹಾಸ ಪಡಬೇಕಾಯಿತು.

ಸಾಷ್ಟಾಂಗ ನಮಸ್ಕಾರ ಮಾಡಿದರು
ಚಿತ್ರ ವೀಕ್ಷಣೆಗೆ ಬಂದಿದ್ದ ಹಲವು ಅಭಿಮಾನಿಗಲು ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದರು. ನೂಕಾಟ, ತಳ್ಳಾಟದ ನಡುವೆಯೂ ಹಲವರು ಅಪ್ಪು ಭಾವಚಿತ್ರಕ್ಕೆ ನಮಸ್ಕಾರ ಮಾಡಿ, ಚಿತ್ರ ವೀಕ್ಷಣೆಗೆ ಚಿತ್ರಮಂದಿರದ ಒಳ ಪ್ರವೇಶ ಮಾಡಿದರು.
ಪಲಾವ್, ಬಿರಿಯಾನಿ ಹಂಚಿದರು
ಪುನೀತ್ ರಾಜ್‌ಕುಮಾರ್ ಅವರ ಹುಟುಹಬ್ಬದ ಅಂಗವಾಗಿ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ಬೆಳಗ್ಗೆ ಪಲಾವ್ ವಿತರಣೆ ಮಾಡಲಾಯಿತು. ಎಚ್.ಪಿ.ಸಿ ಟಾಕೀಸ್ ಮುಂಭಾಗದ ಟ್ಯಾಕ್ಸಿ ಸ್ಟಾಂಡ್ ಜಾಗದಲ್ಲಿ ಪಲಾವ್ ವಿತರಿಸಲಾಯಿತು. ಅಭಿಮಾನಿಗಳ ವತಿಯಿಂದ ಮಧ್ಯಾಹ್ನ ನೂರಾರು ಜನರಿಗೆ ಬಿರಿಯಾನಿ ವಿತರಣೆ ಮಾಡಲಾಯಿತು.

ನೂರಕ್ಕೂ ಹೆಚ್ಚು ಜನರಿಂದ ನೇತ್ರದಾನ
ಇನ್ನು ತಮ್ಮ ನೆಚ್ಚಿನ ನಟನ ಆಶಯದಂತೆ ಅಭಿಮಾನಿಗಳು ನೇತ್ರದಾನಕ್ಕೆ ಮುಂದಾಗಿದ್ದಾರೆ. ಅಭಿಮಾನಿಗಳ ಸಂಘದ ವತಿಯಿಂದ ಸ್ವಯಂ ಪ್ರೇರತವಾಗಿ ನೇತ್ರದಾನಕ್ಕೆ ಮನವಿ ಮಾಡಲಾಗಿತ್ತು. ಎಚ್.ಪಿ.ಸಿ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಬಂದಿದ್ದ ನೂರಕ್ಕೂ ಹೆಚ್ಚು ಮಂದಿ ನೇತ್ರದಾನ ಮಾಡಲು ಮುಂದಾಗಿದ್ದಾರೆ. ಶಂಕರ ಕಣ್ಣಿನ ಅಸ್ಪತ್ರೆ ವಿತರಿಸಿದ ನೇತ್ರದಾನದ ಅರ್ಜಿಯಲ್ಲಿ ಹೆಸರು ನೋಂದಾಯಿಸಿದ್ದಾರೆ.
ಕಣ್ಣೀರು ಹಾಕಿ ಅಭಿಮಾನಿಗಳು
ಚಿತ್ರಮಂದಿರಗಳ ಮುಂದೆ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪರವಾಗಿ ಘೋಷಣೆಗಳನ್ನು ಕೂಗಿದರು. ಈ ವೇಳೆ ಹಲವು ಅಭಿಮಾನಿಗಳು ಭಾವುಕರಾದರು, ಕಣ್ಣೀರು ಸುರಿಸಿದರು. ಮತ್ತೊಂದೆಡೆ ಚಿತ್ರ ವೀಕ್ಷಿಸಿ ಹೊರ ಬಂದ ಅಭಿಮಾನಿಗಳು, ಪುನೀತ್ ರಾಜಕುಮಾರ್ ಅವರ ಧ್ವನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ದುಃಖ ವ್ಯಕ್ತಪಡಿಸಿದರು.

ಅಭಿಮಾನಿಗಳ ನಿಯಂತ್ರಣಕ್ಕೆ ಹರಸಾಹಸ
ಮತ್ತೊಂದೆಡೆ ಬಾಲರಾಜ ಅರಸ್ ರಸ್ತೆಯಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಘೋಷಣೆ ಕೂಗಿ, ಸಂಭ್ರಮಾಚರಣೆ ಮಾಡಿದರು. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ನೂಕಾಟ ತಳ್ಳಾಟದಲ್ಲಿ ಎಚ್.ಪಿ.ಸಿ ಚಿತ್ರಮಂದಿರದ ಗೇಟು ಮರಿದು ಬಿತ್ತು.
ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು
ಮತ್ತೊಂದೆಡೆ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ನಗರದ ವಿವಿಧೆಡೆ ಹುಟ್ಟುಹಬ್ಬ ಆಚರಣೆ ಮಾಡಿದರು. ಗಾಂಧಿ ಬಜಾರ್‌ನ ಹೋಲ್‌ಸೇಲ್ ವರ್ತಕರ ಸಂಘದ ವತಿಯಿಂದ ಕೇಕ್ ಕತ್ತರಿಸಿ, ಪುಳಿಯೊಗರೆ, ಚಿತ್ರಾನ್ನ ವಿತರಣೆ ಮಾಡಿದರು. ಶಿವಮೊಗ್ಗ ಆರ್.ಎಂ.ಸಿ ಮಂಡಿ, ಜೈಲ್ ಸರ್ಕಲ್ ಸೇರಿದಂತೆ ಹಲವು ಕಡೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಣೆ ಮಾಡಿದರು.
ರಂಗೋಲಿಯಲ್ಲಿ ಅರಳಿದ ಅಪ್ಪು
ಶಿವಮೊಗ್ಗದ ಸಿಟಿ ಸೆಂಟರ್ ಮಾಲ್‌ನಲ್ಲಿ ಅಭಿಮಾನಿಯೊಬ್ಬರು ರಂಗೋಲಿಯಲ್ಲಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಬಿಡಿಸಿದ್ದಾರೆ. ಭಾರತ್ ಸಿನಿಮಾ ಮುಂಭಾಗ ಕರ್ನಾಟಕ ಧ್ವಜದ ಮುಂದೆ ಹಸನ್ಮುಖಿ ಪುನೀತ್ ರಾಜಕುಮಾರ್ ಮತ್ತು ಅವರ ಭುಜದ ಮೇಲೆ ಪಾರಿವಾಳ ಕುಳಿತಿರುವಂತೆ ರಂಗೋಲಿಯಲ್ಲಿ ಬಿಡಿಸಿದ್ದಾರೆ. ಕಲಾವಿದ ಹರೀಶ್ ಕುಮಾರ್ ಲಾತೋರ್ ಅವರು ಬಿಡಿಸಿದ ರಂಗೋಲಿ ಕಲೆಗೆ ಜನರನ್ನು ಆಕರ್ಷಿಸುತ್ತಿದೆ.
ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ಹಲವು ರೀತಿಯಲ್ಲಿ ವ್ಯಕ್ತಪಡಿಸಿದರು. ಪ್ರತಿ ವರ್ಷವು ಇದೆ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸುವುದಾಗಿಯೂ ತಿಳಿಸಿದ್ದಾರೆ.












Click it and Unblock the Notifications