ಬಾಯಲ್ಲಿ ನೀರೂರಿಸುವ ಅಪ್ಪೆಮಿಡಿಗೆ ಭಾರತೀಯ ಅಂಚೆ ಇಲಾಖೆಯ ಮಾನ್ಯತೆ
ಶಿವಮೊಗ್ಗ, ಆಗಸ್ಟ್ 31: ಮಲೆನಾಡಿಗರ ಬಾಯಲ್ಲಿ ನೀರೂರಿಸುತ್ತಿರುವ ಅಪ್ಪೆಮಿಡಿಗೆ ಈಗ ಭಾರತೀಯ ಅಂಚೆ ಇಲಾಖೆ ಮಾನ್ಯತೆ ಲಭಿಸಿದೆ. ಅಂಚೆ ಲಕೋಟೆ ಮೇಲೆ ಅಪ್ಪೆಮಿಡಿಯ ಭಾವಚಿತ್ರ ಪ್ರಕಟಿಸಲಾಗಿದೆ. ಮಂಗಳವಾರ ಈ ವಿಶೇಷ ಅಂಚೆ ಲಕೋಟೆಯನ್ನು ಶಿವಮೊಗ್ಗದಲ್ಲಿ ಬಿಡುಗಡೆ ಮಾಡಲಾಯಿತು.
ಕೇಂದ್ರ ಸರ್ಕಾರದ ಭೌಗೋಳಿಕ ಗುರುತಿಸುವಿಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಪ್ಪೆಮಿಡಿ ಇನ್ಮುಂದೆ ಅಂಚೆ ಇಲಾಖೆ ಲಕೋಟೆ ಮೇಲೆ ಕಾಣಿಸಲಿದೆ. ಪೋಸ್ಟ್ ಕವರ್ ಮೇಲೆ ಅಪ್ಪೆ ಮಿಡಿಯ ಭಾವಚಿತ್ರ ಪ್ರಕಟಿಸಲಾಗಿದೆ. ಲಕೋಟೆಯ ಹಿಂಭಾಗದಲ್ಲಿ ಅಪ್ಪೆ ಮಿಡಿಯ ವಿಶೇಷತೆ ಕುರಿತು ಮಾಹಿತಿ ಪ್ರಕಟವಾಗಿದೆ. ಅಲ್ಲದೆ ಅಪ್ಪೆಮಿಡಿ ಸಂರಕ್ಷಣೆ ಮಾಡುತ್ತಿರುವ ಸಾಗರದ ಕಾಕಲ್ ಇಂಡಸ್ಟ್ರಿಯ ವಿಳಾಸವನ್ನೂ ಪ್ರಕಟವಾಗಿದೆ.

ಜಗದ್ವಿಖ್ಯಾತಿಯಾಗುತ್ತೆ ಅಪ್ಪೆಮಿಡಿ
ಅಂಚೆ ಇಲಾಖೆಯ ಮಾನ್ಯತೆಯಿಂದಾಗಿ ಅಪ್ಪೆಮಿಡಿ ಈಗ ಜಗದ್ವಿಖ್ಯಾತಿ ಪಡೆಯಲಿದೆ. ಭಾರತದಾದ್ಯಂತ ಅಪ್ಪೆಮಿಡಿ ಭಾವಚಿತ್ರವಿರುವ ಕವರ್ ಲಭ್ಯವಾಗಲಿದೆ. ಅಲ್ಲದೆ ಭಾರತ ಸರ್ಕಾರ ಅಂತಾರಾಷ್ಟ್ರೀಯ ನಾಯಕರೊಂದಿಗೆ ಸಂಹವನಕ್ಕೆ ಈಗ ಕವರ್ ಬಳಕೆ ಮಾಡಲಿದೆ. ಹಾಗಾಗಿ ಅಪ್ಪೆಮಿಡಿಗೆ ಜಗದ್ವಿಖ್ಯಾತಿ ಲಭಿಸಲಿದೆ.

ಶಿವಮೊಗ್ಗದಲ್ಲಿ ಲಕೋಟೆ ಬಿಡುಗಡೆ
ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಮಂಗಳವಾರ(ಆ.31) ವಿಶೇಷ ಲಕೋಟೆ ಬಿಡುಗಡೆ ಮಾಡಲಾಯಿತು. ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್.ವಿ.ಆರ್. ಮೂರ್ತಿ, ಅಪ್ಪೆಮಿಡಿ ಸಂರಕ್ಷಕ ಸಂಸ್ಥೆ ಕಾಕಲ್‌ನ ಸಂಸ್ಥಾಪಕ ಗಣೇಶ್ ಕಾಕಲ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಡಾ. ರಾಮಚಂದ್ರ, ಶಿವಮೊಗ್ಗ ವಿಭಾಗದ ಅಂಚೆ ಅಧೀಕ್ಷಕ ಜಿ. ಹರೀಶ್ ಲಕೋಟೆಯನ್ನು ಬಿಡುಗಡೆ ಮಾಡಿದರು.

ಏನಿದು ಅಪ್ಪೆಮಿಡಿ?
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಪ್ಪೆಮಿಡಿ ಜನಜನಿತ. ಅಪ್ಪೆಮಿಡಿ ಉಪ್ಪಿನಕಾಯಿ ಜನರ ಬಾಯಲ್ಲಿ ನೀರೂರಿಸುತ್ತವೆ. ದೇಶ- ವಿದೇಶದಲ್ಲಿ ನೆಲೆಸಿರುವ ಮಲೆನಾಡಿಗರು ಅಪ್ಪೆಮಿಡಿ ಉಪ್ಪಿನಕಾಯಿ ಕೊಂಡೊಯ್ಯುತ್ತಾರೆ. ಮಲೆನಾಡಿನಲ್ಲಂತೂ ಪ್ರತಿ ಮನೆಯಲ್ಲೂ ಅಪ್ಪೆಮಿಡಿ ಉಪ್ಪಿನಕಾಯಿ ಇದ್ದೇ ಇರುತ್ತದೆ.
ಅಪ್ಪೆಮಿಡಿ ಅನ್ನುವುದು ಉಪ್ಪಿನಕಾಯಿಗೆಂದೇ ಬೆಳೆಯುವ ವಿಶೇಷ ಮಾವಿನ ತಳಿ. ರುಚಿ ಮತ್ತು ಸುವಾಸನೆಗೆ ಇದು ಹೆಸರುವಾಸಿ. ಹೆಚ್ಚು ತೇವಾಂಶಭರಿತ ವಾತಾವರಣದಲ್ಲಿ ಮಾತ್ರ ಈ ತಳಿಯ ಮಾವು ಬೆಳೆಯುತ್ತದೆ. ಉತ್ತರ ಕನ್ನಡದ ನದಿತೀರ, ಶಿವಮೊಗ್ಗ ಜಿಲ್ಲೆಯ ಸಾಗರ, ರಿಪ್ಪನ್‌ಪೇಟೆ, ಬೆಳಗಾವಿ ಜಿಲ್ಲೆಯ ಖಾನಾಪುರ, ಲೋಂಡಾ, ಚಿತ್ತೂರು, ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಅಪ್ಪೆಮಿಡಿ ಮಾವು ಬೆಳೆಯಲಾಗುತ್ತದೆ. ಉತ್ತರ ಕನ್ನಡದ ಶಿರಸಿ, ಸಿದ್ಧಾಪುರ, ಶಿವಮೊಗ್ಗದ ಸಾಗರ, ರಿಪ್ಪನ್‌ಪೇಟೆಯ ಅಪ್ಪೆಮಿಡಿ ಹೆಚ್ಚು ಜನಪ್ರಿಯ.

90ಕ್ಕೂ ಹೆಚ್ಚು ತಳಿಗಳಿವೆ
ಅಪ್ಪೆಮಿಡಿ ಮಾವಿನಲ್ಲಿ ಮಿಡಿ ಉದ್ದವಿರುತ್ತದೆ. ಇದರ ತೊಟ್ಟಿನಿಂದ ಬರುವ ಸೊನೆಗೆ ಬೆಂಕಿ ತಾಗಿಸಿದರೆ ಧಗಧಗ ಹೊತ್ತಿ ಉರಿಯುತ್ತದೆ. ಸುವಾಸನೆ ಭರಿತ ಈ ಅಪ್ಪೆಮಿಡಿಯಲ್ಲಿ ಸುಮಾರು 90 ತಳಿಗಳಿವೆ ಅನ್ನುತ್ತಾರೆ ಕಾಕಲ್ ಇಂಡಸ್ಟ್ರಿಯ ಗಣೇಶ್ ಕಾಕಲ್. ಪಶ್ಚಿಮ ಘಟ್ಟ ವಲಯದಲ್ಲಿ ಮಾತ್ರ ಬೆಳೆಯುವುದರಿಂದ ಕೇಂದ್ರ ಸರ್ಕಾರ ಇದನ್ನು ಭೌಗೋಳಿಕ ಗುರುತಿಸುವಿಕೆ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ.

ಭೌಗೋಳಿಕ ಗುರುತಿಸುವಿಕೆ ಪಡೆದ ಉತ್ಪನ್ನಕ್ಕೆ ಆದ್ಯತೆ
ಭೌಗೋಳಿಕ ಗುರುತಿಸುವಿಕೆ ಪಡೆದ ಉತ್ಪನ್ನಗಳನ್ನು ಗುರುತಿಸಿ, ಅಂಚೆ ಲಕೋಟೆ ಮೇಲೆ ಅವುಗಳ ಭಾವಚಿತ್ರ ಮತ್ತು ಮಾಹಿತಿಯನ್ನು ಅಂಚೆ ಲಕೋಟೆ ಮೇಲೆ ಪ್ರಕಟಿಸಲಾಗುತ್ತಿದೆ. ಇಂತಹ ಬೆಳೆ ಮತ್ತು ಉತ್ಪನ್ನಗಳನ್ನು ದೇಶಾದ್ಯಂತ ಜನರಿಗೆ ಪರಿಚಯಿಸಲು ಅಂಚೆ ಇಲಾಖೆ ವ್ಯವಸ್ಥೆ ಮಾಡಿದೆ. ಇಂತಹ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸಲು ಅಂಚೆ ಇಲಾಖೆ ವತಿಯಿಂದ ವಿಶೇಷ ನೆರವು ಕೂಡ ಕೊಡಲಾಗುತ್ತದೆ ಎಂದು ದಕ್ಷಿಣ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್.ವಿ.ಆರ್. ಮೂರ್ತಿ ತಿಳಿಸಿದ್ದಾರೆ.
ಅಪ್ಪೆಮಿಡಿಗೆ ಅಂಚೆ ಇಲಾಖೆ ನೀಡಿರುವ ಗೌರವ ಮಲೆನಾಡಿಗರು, ಅದರಲ್ಲೂ ಅಪ್ಪೆ ಮಿಡಿ ಉಪ್ಪಿನಕಾಯಿ ಪ್ರಿಯರ ಮೆಚ್ಚುಗೆ ಗಳಿಸಿದೆ. ಅಲ್ಲದೆ ಅಪ್ಪೆಮಿಡಿ ಉಪ್ಪಿನಕಾಯಿ ಘಮ ಮತ್ತು ರುಚಿ ದೇಶಾದ್ಯಂತ ಪಸರಿಸಲಿದೆ.












Click it and Unblock the Notifications