Shivamogga: ಶಿವಮೊಗ್ಗದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಕ್ಷುಲ್ಲಕ ಕಾರಣಕ್ಕೆ ವಿಕೃತಿ ಮೆರೆದ ಪಾಪಿಗಳು
ಶಿವಮೊಗ್ಗ ಫೆಬ್ರವರಿ 28: ಶಿವಮೊಗ್ಗದಲ್ಲಿ ಮನುಕುಲವೇ ತಲೆ ತಗ್ಗಿಸುವಂತಹ ಘಟನೆ ನಡೆಸಿದೆ. ಕ್ಷುಲ್ಲಕ ಕಾರಣಕ್ಕೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ತೋಟವೊಂದರಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ತೋಟದ ಮಾಲೀಕ ಅರುಣ್ ಎಂಬಾತ ಚಿಕ್ಕಜೋಗಿಹಳ್ಳಿಯ ಸರೋಜಮ್ಮ ಎಂಬುವವರ ಮೇಲೆ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾನೆ. ಹಲ್ಲೆಗೊಳಗಾದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಹಿಳೆ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಚಿಕ್ಕಜೋಗಿಹಳ್ಳಿ ಗ್ರಾಮದ ಮಹಿಳೆ ತನ್ನ ತೋಟದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದಾಳೆ ಎಂದು ಕೋಪಗೊಂಡ ತೋಟದ ಮಾಲೀಕ ಹಾಗೂ ಆತನ ಪುತ್ರ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ಸಂಬಂಧ ತೋಟದ ಮಾಲೀಕ ರಾಮನಹಳ್ಳಿ ಶಿವಕುಮಾರ್ ಮತ್ತು ಪುತ್ರ ಅರುಣ್ ವಿರುದ್ಧ ಸ್ಥಳೀಯ ಪೊಲೀಸರ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ತೋಟದಲ್ಲಿ ಆಡು ಮೇಯಿಸುತ್ತಿದ್ದ ಕಾರಣಕ್ಕೆ ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ಮಾಡಲಾಗಿದೆ. ಜಾತಿ ನಿಂಧನೆ ಮಾಡಿ, ಫೋನ್ ಕಿತ್ತುಕೊಂಡು ತೋಟದ ಮಾಲೀಕ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಫೆಬ್ರವರಿ 23ರಂದು ಈ ಘಟನೆ ನಡೆದಿದ್ದು ಸಂತ್ರಸ್ತ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಹಲ್ಲೆ ಮಾಡಿದ ಬಳಿಕ ತೋಟದ ಮಾಲೀಕ ಅರುಣ್ ತಲೆಮರಿಸಿಕೊಂಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
50 ವರ್ಷದ ದಲಿತ ಮಹಿಳೆ ಸರೋಜಮ್ಮ ತನ್ನ ಹತ್ತಕ್ಕೂ ಹೆಚ್ಚು ಮೇಕೆಗಳನ್ನು ಈಸೂರು ಗ್ರಾಮದ ತೋಟಕ್ಕೆ ಬಿಟ್ಟಿದ್ದರು. ಮೇಕೆಗಳು ತೋಟದ ಗಿಡದ ಎಲೆಗಳನ್ನು ಮೇಯ್ದಿದ್ದವು. ಅದರಿಂದ ಕೋಪಗೊಂಡ ತೋಟದ ಮಾಲೀಕ, ರಾಮವಳ್ಳಿ ಶಿವಕುಮಾರ್ ಎಂಬವರ ಮಗ ಅರುಣ್ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಆಕೆಯನ್ನು ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿಹಾಕಲು ಯತ್ನಿಸಿದ್ದಾನೆ. ಆಗ ಸರೋಜಮ್ಮ ತಪ್ಪಿಸಿಕೊಂಡು ಓಡಿ ಬಂದಿದ್ದಾರೆ. ನಂತರ ಅವರನ್ನು ಮನೆ ಹತ್ತಿರವಿರುವ ಆಸ್ಪತ್ರೆಗೆ ಕರೆದೊಯ್ದು ಪ್ರಕರಣ ದಾಖಲಿಸಲಾಗಿದೆ.
ಆರೋಪಿ ವಿರುದ್ಧ ಪ್ರಕರಣ ದೂರು ದಾಖಲಿಸಿಕೊಂಡಿದ್ದರು ವಿಚಾರಣೆ ನಡೆಸಲಾಗಿರಲಿಲ್ಲ. ದಲಿತಪರ ಸಂಘಟನೆಗಳು ಮಧ್ಯಪ್ರವೇಶದ ನಂತರ ಫೆ.25ರಂದು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. 'ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ' ಎಂದು ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications