ಶಿವಮೊಗ್ಗ, ಚಿಕ್ಕಮಗಳೂರಲ್ಲಿ ಮಳೆ ಅಬ್ಬರ, ಜನರ ಪರದಾಟ
ಶಿವಮೊಗ್ಗ, ಮೇ 20: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಾಯುಭಾರ ಕುಸಿತ ಮತ್ತು ಪೂರ್ವ ಮುಂಗಾರು ಮಳೆಯ ಅಬ್ಬರ ಮುಂದುವರೆದಿದೆ. ಬಿರು ಬೇಸಿಗೆಯಿಂದ ಕಂಗೆಟ್ಟಿದ್ದ ಜನರು ಮಳೆ ಸುರಿಯಿತು ಎಂದು ಸಂತಗೊಂಡಿದ್ದರೆ ಮತ್ತೊಂದು ಕಡೆ ಗಾಳಿ, ಮಳೆಯ ಅಬ್ಬರದಿಂದ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಸೋಮವಾರ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಿದೆ. ರಸ್ತೆಯಲ್ಲಿ ನೀರು ನಿಂತು, ತಗ್ಗು ಪ್ರದೇಶ ಜಲಾವೃತವಾಗಿ, ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿ, ವಿದ್ಯುತ್ ಸಂಪರ್ಕ ಕಡಿತಗೊಂಡು ಜನರು ಪರದಾಡಿದರು. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು.

ಶಿವಮೊಗ್ಗದಲ್ಲಿ ಮಳೆ: ಸೋಮವಾರ ಶಿವಮೊಗ್ಗ ನಗರದಲ್ಲಿ ಭಾರೀ ಮಳೆ ಸುರಿಯಿತು. ಸ್ಮಾರ್ಟ್ ಸಿಟಿ ಕಾಮಗಾರಿ ಅವಾಂತರದಿಂದ ಮನೆ, ಅಂಗಡಿಗೆ ಮಳೆ ನೀರು ನುಗ್ಗಿತು. ಅಂಗಡಿಯಿಂದ ನೀರು ಹೊರಹಾಕಿದ ಮಾಲೀಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.
ಜನ ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಯಿಂದ ಹೊಸಮನೆ, ಅಣ್ಣಾ ನಗರ, ಬಾಪೂಜಿ ನಗರ ಸೇರಿ ನಗರದ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿತು. ರಸ್ತೆಗಳು ಕೆರೆಯಂತಾದವು. ತಗ್ಗು ಪ್ರದೇಶದಲ್ಲಿ ಮಳೆಯ ನೀರು ನುಗ್ಗಿದ ಸ್ಥಳಗಳಿಗೆ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಭೇಟಿ ನೀಡಿದರು. ಶೀಘ್ರವಾಗಿ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನು ಮಳೆಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು 112 ಸಿಬ್ಬಂದಿ ರಕ್ಷಣೆ ಮಾಡಿದರು. ನ್ಯಾಮತಿ ಮೂಲದ ಪ್ರದೀಪ್ ಎಂಬ ಯುವಕ ಶಿವಮೊಗ್ಗ ಹೊರ ವಲಯದ ಕೊಮ್ಮನಾಳ್ ಬಳಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ. ಧಾರಾಕಾರ ಮಳೆಯಿಂದಾಗಿ ರಸ್ತೆ ಮೇಲೆ ಭಾರೀ ನೀರು ಹರಿಯುತ್ತಿತ್ತು. ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಪ್ರದೀಪ್ ಕಂಡು ಜನರು 112ಕ್ಕೆ ಕರೆ ಮಾಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ಷಣೆ ಮಾಡಿದರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ, ಸೊರಬ, ಭದ್ರಾವತಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಸೋಮವಾರು ಸುಮಾರು ಒಂದು ಗಂಟೆಗಳ ಕಾಲ ಬಿಡುವು ನೀಡದೆ ಗುಡುಗು, ಸಿಡಿಲು ಸಹಿತ ಸುರಿದ ಮಳೆಯಿಂದ ಸಂಜೆ ಜನ ಜೀವನ ಅಸ್ತವ್ಯಸ್ತವಾಯಿತು.
ಚಿಕ್ಕಮಗಳೂರು ವರದಿ: ಸೋಮವಾರ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಭಾರೀ ಮಳೆಯಾಗಿದೆ. ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ ಸುತ್ತಮುತ್ತ ಭಾರೀ ಮಳೆ ಆಯಿತು. ಬಣಕಲ್, ಬಾಳೂರು, ಜಾವಳಿ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್‌ನಲ್ಲಿ ಮಳೆ ಅಬ್ಬರಿಸಿತು. ಕೊಟ್ಟಿಗೆಹಾರದಲ್ಲಿ ಮಳೆಯಿಂದ ವಾಹನಗಳು ಸಂಚರಿಸದಂತಾಯಿತು. ಕಳೆದ 8-10 ದಿನಗಳಿಂದ ಕೊಟ್ಟಿಗೆಹಾರದಲ್ಲಿ ಸಾಧಾರಣ ಮಳೆಯಾಗಿತ್ತು. ಇಂದು ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದು, ರಸ್ತೆಯಲ್ಲಿ ಮಳೆ ನೀರು ನಿಂತಿತು.
ತರೀಕೆರೆ ಪಟ್ಟಣದಲ್ಲಿಯೂ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿತು. ರಸ್ತೆಯಲ್ಲಿ ಸುಮಾರು ಒಂದೂವರೆ ಅಡಿ ನೀರು ನಿಂತು, ಆಟೋ, ಕಾರಿನ ಚಕ್ರಗಳು ಮುಳುಗಿದವು. ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೀರೂರು, ಅಜ್ಜಂಪುರ, ತರೀಕೆರೆಯಲ್ಲಿ ಮಳೆಯಿಂದಾಗಿ ಜನರು ಸಂತಸಗೊಂಡರು.
ಮಳೆಯ ಜೊತೆ ಗಾಳಿಯೂ ಅಬ್ಬರಿಸಿತು. ಬಿರುಗಾಳಿಗೆ ತರೀಕೆರೆ ತಾಲೂಕಿನ ಕೆರೆ ಹೊಸಹಳ್ಳಿ ಗ್ರಾಮದ ಊರ ಮುಂಭಾಗಲಿನ ಅರಳಿ ಮರ ಧರೆಗುರುಳಿತು. ಗ್ರಾಮಸ್ಥರು ನೋಡನೋಡುತ್ತಿದ್ದಂತೆ ಬೃಹತ್ ಮರ ಬಿದ್ದುಹೋಯಿತು.
ಬಾಳೆಹೊನ್ನೂರು, ಜಯಪುರ, ಖಾಂಡ್ಯಾ, ಕಡಬಗೆರೆ ಭಾಗದಲ್ಲಿ ಭಾರಿ ಮಳೆ ಆರ್ಭಟಕ್ಕೆ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತು. ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರ ಅಸ್ತವ್ಯಸ್ತಗೊಂಡು, ಸುಮಾರು 2 ಗಂಟೆ ವಾಹನಗಳು ನಿಂತಲ್ಲೇ ನಿಂತವು.
ತರೀಕೆರೆ ಪಟ್ಟಣದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಬಿಟ್ಟು ಬಿಡದೆ ಸುರಿದ ಮಳೆಗೆ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿತು. ನೀರಿನಲ್ಲಿಯೇ ವಾಹನಗಳು ನಿಧಾನವಾಗಿ ಚಲಿಸಿದವು.












Click it and Unblock the Notifications