ಸಹಜ ಸ್ಥಿತಿಗೆ ಶಿವಮೊಗ್ಗ ನಗರ; ಶಾಲೆ-ಕಾಲೇಜುಗಳು ಓಪನ್
ಶಿವಮೊಗ್ಗ, ಫೆಬ್ರವರಿ 28; ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ, ಗಲಭೆ ಬಳಿಕ ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಬಂದಿದೆ. ಸೋಮವಾರ ಶಾಲಾ-ಕಾಲೇಜುಗಳು ಆರಂಭವಾಗಿವೆ. ಮಾರ್ಚ್ 4ರ ತನಕ ನಗರದಲ್ಲಿ ಸೆಕ್ಷನ್ 144 ಜಾರಿಯಲ್ಲಿರುತ್ತದೆ.
ಫೆಬ್ರವರಿ 28ರಿಂದಲೇ ನಗರದಲ್ಲಿ ಶಾಲಾ-ಕಾಲೇಜು ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹೇಳಿದ್ದರು. ಸೋಮವಾರ ವಿದ್ಯಾರ್ಥಿಗಳು ಆಗಮಿಸಿದ್ದು, ಶಾಲಾ-ಕಾಲೇಜು ಬಾಗಿಲು ತರೆದಿವೆ.
ಮಾರ್ಚ್ 4ರ ತನಕ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಮುಂದುವರೆಯಲಿದೆ. ಆದರೆ ವ್ಯಾಪಾರ ವಹಿವಾಟಿಗೆ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ಬೆಳಗ್ಗೆ 6 ರಿಂದ ಸಂಜೆ 7ರ ತನಕ ನಿಷೇಧಾಜ್ಞೆ ಸಡಿಲಿಸಲಾಗಿದೆ.

ರಾತ್ರಿ 7 ಗಂಟೆ ಬಳಿಕ ನಿಷೇಧಾಜ್ಞೆ ಜಾರಿಗೆ ಬರಲಿದೆ. ಆದ್ದರಿಂದ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನಿಷೇಧಾಜ್ಞೆ ಅವಧಿಯಲ್ಲಿ ಯಾವುದೇ ಸಭೆ, ಮೆರವಣಿಗೆ, ಪ್ರತಿಭಟನೆಗಳನ್ನು ಮಾಡುವಂತಿಲ್ಲ, ಜನರು ಗುಂಪು ಸೇರುವಂತಿಲ್ಲ.
ಫೆಬ್ರವರಿ 21ರ ಸೋಮವಾರ ಹರ್ಷ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಗಲಭೆ ನಡೆದಿತ್ತು, ಅಂಗಡಿಗಳಿಗೆ ಕಲ್ಲು ತೂರಲಾಗಿತ್ತು. ಆದ್ದರಿಂದ ನಗರದಲ್ಲಿ ಶಾಂತಿ ಕಾಪಾಡಲು ಕರ್ಫ್ಯೂ ಹೇರಲಾಗಿತ್ತು.
ಫೆಬ್ರವರಿ 26ರ ಶನಿವಾರ ಬೆಳಗ್ಗೆ ಕರ್ಫ್ಯೂ ತೆರವು ಮಾಡಲಾಗಿತ್ತು. ಆದರೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಬೆಳಗ್ಗೆ 6 ರಿಂದ ಸಂಜೆ 4 ಗಂಟೆ ತನಕ ಅವಕಾಶ ನೀಡಲಾಗಿತ್ತು. ಈಗ ವ್ಯಾಪಾರ ವಹಿವಾಟಿಗೆ ಸಂಜೆ 7 ಗಂಟೆಯ ತನಕ ಅವಕಾಶ ನೀಡಲಾಗಿದೆ.
ನಗರದಲ್ಲಿ ಕರ್ಫ್ಯೂ ತೆರವುಗೊಳಿಸಿದರೂ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಾರ್ಚ್ 4ರ ತನಕ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಮತ್ತು ಸಂಜೆ 7 ಗಂಟೆ ಮೇಲೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿಲ್ಲ.
ವ್ಯಾಪಾರ ವಹಿವಾಟಿ ಜೋರು; ಶನಿವಾರ ಕರ್ಫ್ಯೂ ತೆರವುಗೊಳಿಸಿದ ಬಳಿಕ ಶಿವಮೊಗ್ಗ ನಗರದಲ್ಲಿ ವ್ಯಾಪಾರ, ವಹಿವಾಟು ಆರಂಭವಾಗಿದೆ. ತರಕಾರಿ, ಹಣ್ಣು, ಹೂವು, ದಿನಸಿ ವ್ಯಾಪಾರ ಬಿರುಸಿನಿಂದ ನಡೆಯುತ್ತಿದೆ. ಸಂಪೂರ್ಣವಾಗಿ ಸ್ತಬ್ಧವಾಗಿದ್ದ ಗಾಂಧಿ ಬಜಾರ್‌ಗೆ ಜೀವ ಕಳೆ ಬಂದಿದೆ. ಅಗತ್ಯ ವಸ್ತುಗಳ ಖರೀದಿಗೆ ಜನರು ಗಾಂಧಿ ಬಜಾರ್ ಕಡೆಗೆ ಬರುತ್ತಿದ್ದಾರೆ.
ನಗರ ಸಹಜ ಸ್ಥಿತಿಗೆ ಬಂದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕೊಲೆಯಾದ ಹರ್ಷ ಮನೆ ಬಳಿ ಮತ್ತು ಸುತ್ತಮುತ್ತಲೂ ಪೊಲೀಸರು ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ.
ಶಿವಮೊಗ್ಗ ನಗರದ ನೆಹರೂ ರಸ್ತೆ, ಬಿ. ಹೆಚ್. ರಸ್ತೆ, ದುರ್ಗಿಗುಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವ್ಯಾಪಾರ ಜೋರಾಗಿದೆ. ಸಿಟಿ ಬಸ್‌ಗಳ ಸಂಚಾರವೂ ಆರಂಭವಾಗಿದೆ. ಸಿಟಿ ಸೆಂಟರ್ ಮಾಲ್‌ಗೂ ಹೆಚ್ಚು ಜನರು ಆಗಮಿಸುತ್ತಿದ್ದಾರೆ.
ನಗರದಲ್ಲಿ ಕರ್ಫ್ಯೂ ಸಡಿಲಗೊಳಿಸಿದ ಹಿನ್ನಲೆಯಲ್ಲಿ ಸಾರಿಗೆ ವ್ಯವಸ್ಥೆ ಮತ್ತೆ ಆರಂಭವಾಗಿದೆ. ನಗರ ಸಾರಿಗೆ, ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಲ್ಲಿ ಹೆಚ್ಚು ಪ್ರಯಾಣಿಕರು ಆಗಮಿಸುತ್ತಿದ್ದಾರೆ. ನಗರದಿಂದ ವಿವಿಧ ಜಿಲ್ಲೆಗಳಿಗೆ ಹೆಚ್ಚಿನ ಜನರು ಸಂಚಾರ ನಡೆಸಿದರು.
ಕಾಲೇಜುಗಳು ಆರಂಭ; ಹಿಜಾಬ್ ವಿವಾದದ ಹಿನ್ನಲೆಯಲ್ಲಿ 4 ದಿನ ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು. ಬಳಿಕ ಗಲಭೆ ಹಿನ್ನಲೆಯ ಮತ್ತೆ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಈಗ ಮತ್ತೆ ಕಾಲೇಜುಗಳು ಆರಂಭವಾಗಿವೆ. ವಿದ್ಯಾರ್ಥಿಗಳು ಸಹ ಉತ್ಸಾಹದಿಂದ ಆಗಮಿಸುತ್ತಿದ್ದಾರೆ.
ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಹಲವಾರು ಬಿಜೆಪಿ ನಾಯಕರು, ವಿವಿಧ ಸಂಘಟನೆಗಳ ಸದಸ್ಯರು ಹರ್ಷ ಮನೆಗೆ ಭೇಟಿ ನೀಡಿದ್ದರು.











Click it and Unblock the Notifications