ಮೊಬೈಲ್ ಕಿತ್ತುಕೊಂಡ ಪೋಷಕರು- ವಿಷ ಕುಡಿದ ಯುವತಿ
ಶಿವಮೊಗ್ಗ ಡಿಸೆಂಬರ್ 26: ಮೊಬೈಲ್ ಇಲ್ಲದ ಜೀವನವನ್ನು ಊಹಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಮೊಬೈಲ್ ಪ್ರತಿಯೊಬ್ಬರಿಗೂ ಬೇಕು. ಹೀಗೆ ಮೊಬೈಲ್ ಹೆಚ್ಚು ನೋಡ್ಬೇಡ ಎಂದಿದ್ದಕ್ಕೆ ಯುವತಿಯೊಬ್ಬಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ನಾಗರೀಕ ಸಮಾಜವನ್ನು ಬೆಚ್ಚಿಬೀಳಿಸಿದೆ.
ಹೌದು... ಶಿವಮೊಗ್ಗದ ಹಾರನಹಳ್ಳಿ ಗ್ರಾಮದಲ್ಲಿ 20 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ಯುವತಿ ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ರೀಲ್ಸ್, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುತ್ತಿದ್ದಳು. ಯುವತಿಯಿಂದ ಮೊಬೈಲ್ ಬಳಕೆ ಹೆಚ್ಚಾಗಿದ್ದರಿಂದ ಪೋಷಕರು ಮೊಬೈಲ್ ಹೆಚ್ಚು ಬಳಡಬೇಡ ಎಂದು ಬುದ್ಧಿ ಹೇಳಿದ್ದರು.

ಯುವತಿ ದ್ವತೀಯ ಪಿಯುಸಿ ಆಗಿದ್ದರಿಂದ ಓದಿನ ಕಡೆಗೆ ಹೆಚ್ಚು ಗಮನಕೊಡಲು ಪೋಷಕರು ಹೇಳಿದ್ದಾರೆ. ಯುವತಿ ಮೊಬೈಲ್ ಫೋನ್ ಕೈಯಲ್ಲಿ ಹಿಡಿದುಕೊಂಡಾಗಲೆಲ್ಲಾ ಪೋಷಕರು ಈ ಮಾತನ್ನು ಹೇಳಿದ್ದಕ್ಕೆ ಮನನೊಂದ ಯುವತಿ ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ. ಕೈಗೆ ಬಂದ ಮಗಳನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ಮೂರು ದಿನದ ಹಿಂದೆ ನಡೆದಿದೆ. ವಿಷ ಸೇವಿಸಿದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಆಕೆ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾಳೆ.
ರೀಲ್ಸ್ ಮಾಡಬೇಡ ಎಂದಿದ್ದಕ್ಕೆ ಗಂಡನನ್ನೆ ಮುಗಿಸಿದ ಪತ್ನಿ
ಈ ವರ್ಷದ ಆರಂಭದ ತಿಂಗಳಲ್ಲಿ ಬಿಹಾರ್‌ನಲ್ಲಿ ಇಂತಹ ಘಟನೆಯೊಂದು ನಡೆದಿತ್ತು. ಸೋಷಿಯಲ್ ಮೀಡಿಯಾ ಹುಚ್ಚು ಅದೆಷ್ಟು ಡೇಂಜರ್ಸ್ ಅನ್ನೋದಕ್ಕೆ ಈ ಸ್ಟೋರಿ ಸಾಕ್ಷಿಯಾಗಿದೆ. ಇನ್ಸ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಬೇಡ ಎಂದ ಗಂಡನನ್ನೇ ಹೆಂಡತಿಯೊಬ್ಬಳು ಬರ್ಬರವಾಗಿ ಹತ್ಯೆ ಮಾಡಿದ್ದಳು. ಈ ಘಟನೆ ಬಿಹಾರದ ಬೇಗುಸರೈನಲ್ಲಿ ನಡೆದಿತ್ತು.
ಕರಿಮಣಿ ಮಾಲೀಕ ನೀನಲ್ಲ ಎಂದ ಪತ್ನಿ ಪತಿ ಆತ್ಮಹತ್ಯೆ
ಇನ್ನೂ ಇದೇ ವರ್ಷ ಫೆಬ್ರವರಿಯಲ್ಲಿ ರೀಲ್ಸ್ ಮಾಡಿದ್ದಕ್ಕೆ ಬೇಸರಗೊಂಡ ಪತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದರು. 'ಕರಿಮಣಿ ಮಾಲೀಕ ನೀನಲ್ಲ' ಎಂದು ರೀಲ್ಸ್ ಮಾಡಿದ್ದಕ್ಕೆ ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಾಮರಾಜನಗರ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿತ್ತು. ಪಿ.ಜಿ.ಪಾಳ್ಯ ಗ್ರಾಮದ ಕುಮಾರು (33) ಎಂಬಾತ, ರಿಯಲ್ ಸ್ಟಾರ್ ಉಪೇಂದ್ರ ನಟನೆಯ ''ಓ ನಲ್ಲ... ನೀನಲ್ಲ.. ಕರಿಮಣಿ ಮಾಲೀಕ ನೀನಲ್ಲ..'' ಹಾಡಿಗೆ ಪತ್ನಿ ರೀಲ್ಸ್ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಶರಣಾಗಿದ್ದರು.
ಬಾಲಕಿ ಆತ್ಮಹತ್ಯೆಗೆ ಶರಣು
ಸಾಮಾಜಿಕ ಜಾಲತಾಣಗಳಲ್ಲಿ ರೀಲ್ ಮಾಡುವ ಮೂಲಕ ಖ್ಯಾತಿ ಗಳಿಸಿದ್ದ ಚೆನ್ನೈನ ತಿರುವಳ್ಳೂರು ಜಿಲ್ಲೆಯ ಒಂಬತ್ತು ವರ್ಷದ ಬಾಲಕಿಯೊಬ್ಬಳು ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಳು. ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದ ಪ್ರತೀಕ್ಷಾ ಆರು ತಿಂಗಳಲ್ಲಿ ಸುಮಾರು 70 ರೀಲ್‌ಗಳನ್ನು ಮಾಡಿ ಫೇಮಸ್ ಆಗಿದ್ದಳು. ಈ ಹಿನ್ನೆಲೆಯಲ್ಲಿ ಸ್ನೇಹಿತರು ಮತ್ತು ನೆರೆಹೊರೆಯವರು ಈಕೆಯನ್ನು 'ರೀಲ್ಸ್ ಕ್ವೀನ್' ಎಂದೇ ಕರೆಯುತ್ತಿದ್ದರು. ಪ್ರತೀಕ್ಷಾ ಚಿಕ್ಕಂದಿನಿಂದಲೂ ಸಿನಿಮಾದಲ್ಲಿ ಬರುವ ಹಾಸ್ಯ ದೃಶ್ಯಗಳಿಗೆ ಡೈಲಾಗ್‌ಗಳನ್ನು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕುತ್ತಿದ್ದಳು.
ಸಿನಿಮಾ ಹಾಡುಗಳಿಗೆ ಅದೇ ರೀತಿಯ ಮುಖಭಾವದೊಂದಿಗೆ ನೃತ್ಯ ಮಾಡಿ ವಿಡಿಯೋ ಶೇರ್ ಮಾಡುತ್ತಿದ್ದಳು. ಇನ್‌ಸ್ಟಾಗ್ರಾಮ್‌ನಲ್ಲಿ ತನ್ನದೇ ಆದ ಪುಟ ಪ್ರಾರಂಭಿಸಿದ್ದಳು. ಅದರಲ್ಲಿ ಸಾಕಷ್ಟು ಅನುಯಾಯಿಗಳನ್ನು ಪಡೆದಿದ್ದಳು. ಚಲನಚಿತ್ರ ಹಾಡುಗಳು, ಹಳ್ಳಿಗಾಡಿನ ಹಾಡುಗಳು ಮತ್ತು ಪ್ರೇಮಗೀತೆಗಳಿಗೆ ನೃತ್ಯ ಮಾಡುವಲ್ಲಿ ಈಕೆಯ ಸಕತ್ ಹೆಸರುವಾಸಿಯಾಗಿದ್ದಳು. ಇಷ್ಟೊಂದು ಖ್ಯಾತಿ ಪಡೆದ ಬಾಲಕಿಗೆ ಸ್ನೇಹಿತರ ಮುಂದೆ ಪೋಷಕರು ಬೈದರು ಎನ್ನುವ ಕಾರಣಕ್ಕೆ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು.












Click it and Unblock the Notifications