ಶಿವಮೊಗ್ಗದಲ್ಲಿ ಸ್ಫೋಟ; ಮೃತಪಟ್ಟ 5 ಜನರ ಗುರುತು ಪತ್ತೆ
ಶಿವಮೊಗ್ಗ, ಜನವರಿ 25 : ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿರುವ ಶಿವಮೊಗ್ಗದಲ್ಲಿ ನಡೆದ ಸ್ಫೋಟದಲ್ಲಿ ಮೃತಪಟ್ಟವರ ಗುರುತು ಪತ್ತೆಯಾಗಿದೆ. ಸ್ಫೋಟದಲ್ಲಿ ಒಟ್ಟು 6 ಕಾರ್ಮಿಕರು ಮೃತಪಟ್ಟಿದ್ದಾರೆ. 5 ಜನರ ಗುರುತು ಪತ್ತೆಯಾಗಿದ್ದು, ಇನ್ನೊಂದು ಮೃತದೇಹದ ಗುರುತು ಇನ್ನು ಪತ್ತೆ ಹಚ್ಚಬೇಕಿದೆ.
ಜನವರಿ 21ರ ಗುರುವಾರ ರಾತ್ರಿ 10.30ರ ಸುಮಾರಿಗೆ ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಬಳಿಯ ಕ್ರಷರ್‌ನಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಕಾರ್ಮಿಕರ ದೇಹಗಳು ಛಿದ್ರಗೊಂಡಿದ್ದವು.
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಎಂ. ಶಾಂತರಾಜು ಅವರು ಮೃತಪಟ್ಟವರ ಬಗ್ಗೆ ಮಾಹಿತಿ ನೀಡಿದ್ದಾರೆ. "ಶವಗಳ ಮರಣೋತ್ತರ ಪರೀಕ್ಷೆಗಳನ್ನು ಪೂರ್ಣಗೊಳಿಸಿ, ಕುಟುಂಬಗಳಿಗೆ ಹಸ್ತಾಂತರ ಮಾಡಲಾಗಿದೆ" ಎಂದು ಹೇಳಿದ್ದಾರೆ.

ಮೃತಪಟ್ಟವರ ವಿವರ; ಸ್ಫೋಟದಲ್ಲಿ ಮೃತಪಟ್ಟವರನ್ನು ರಾಯದುರ್ಗದ ಪವನ್ ಕುಮಾರ್ (29), ಜಾವೀದ್ (28), ಚೆಲಿಮಾನು ರಾಜು (24), ಪ್ರವೀಣ (36) ಅಂತರಗಂಗೆ (ಭದ್ರಾವತಿ), ಮಂಜುನಾಥ್ (35) ಅಂತರಗಂಗೆ ಕ್ಯಾಂಪ್ (ಭದ್ರಾವತಿ) ಎಂದು ಗುರುತಿಸಲಾಗಿದೆ.
ಸ್ಫೋಟದಲ್ಲಿ ಮೃತಪಟ್ಟ ಇನ್ನೊಬ್ಬ ಕಾರ್ಮಿಕರ ಮೃತದೇಹದ ಗುರುತು ಪತ್ತೆಯಾಗುವುದು ಬಾಕಿ ಇದೆ. ಈ ಕುರಿತು ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಶನಿವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಗುರುವಾರ ರಾತ್ರಿ ಸ್ಫೋಟ ಸಂಭವಿಸಿದ ಹುಣಸೋಡು ಕಲ್ಲು ಕ್ವಾರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶಿವಮೊಗ್ಗ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.












Click it and Unblock the Notifications