Ganesha Chaturthi 2024: ಶಿವಮೊಗ್ಗದಲ್ಲಿ ಪೊಲೀಸರ ಕಟ್ಟೆಚ್ಚರ, ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ

ಶಿವಮೊಗ್ಗ, ಸೆಪ್ಟೆಂಬರ್ 07: ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಶಿವಮೊಗ್ಗ ನಗರ, ಭದ್ರಾವತಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ನಗರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ್ತು ಆರ್‌ಎಎಫ್‌ನ ಅಧಿಕಾರಿ ಮತ್ತು ಸಿಬ್ಬಂದಿಗಳು ಪಥ ಸಂಚಲನವನ್ನು ನಡೆಸಿದರು. ಕಳೆದ ವರ್ಷ ಗಣೇಶ ಚತುರ್ಥಿ ಮುಗಿಯುತ್ತಿದ್ದಂತೆಯೇ ನಗರದಲ್ಲಿ ಘರ್ಷಣೆ ನಡೆದಿತ್ತು. ಆದ್ದರಿಂದ ಈ ಬಾರಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಸೋಮವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಮಹಾನಗರ ಪಾಲಿಕೆ ವತಿಯಿಂದ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಪ್ರಯುಕ್ತ ಸರ್ವಧರ್ಮದ ಮುಖಂಡರ ಶಾಂತಿಸಭೆಯನ್ನು ನಡೆಸಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲಾಧಿಕಾರಿ ಗುರದತ್ತ ಹೆಗೆಡೆ, "ಹಬ್ಬಗಳನ್ನು ಎಲ್ಲರೂ ಸಡಗರ ಸಂಭ್ರಮದಿಂದ ಆತಂಕ ರಹಿತವಾಗಿ ಆಚರಿಸಬೇಕು" ಎಂದು ಕರೆ ನೀಡಿದ್ದಾರೆ.

Ganesh Chaturthi And Eid Milad Shivamogga Police Route March

ಶಿವಮೊಗ್ಗ ನಗರಕ್ಕೆ ಹೆಚ್ಚಿನ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಗೌರಿ, ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಪೊಲೀಸ್ ಪಥ ಸಂಚಲನವನ್ನು ನಡೆಸಲಾಗಿದೆ. ಶಿವಮೊಗ್ಗ ನಗರದ ಪೊಲೀಸರು, ಮತ್ತು ಆರ್‌ಎಎಫ್ ತುಕಡಿಯ ಅಧಿಕಾರಿ, ಸಿಬ್ಬಂದಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ನಿರೀಕ್ಷಕರು, ಮಹಿಳಾ ಪೊಲೀಸ್ ಠಾಣೆ ಶಿವಮೊಗ್ಗ ಅವರ ನೇತೃತ್ವದಲ್ಲಿ ಉಪ ನಿರೀಕ್ಷಕರು, ತುಂಗಾನಗರ ಪೊಲೀಸ್ ಠಾಣೆ ಹಾಗೂ ಜಯನಗರ ಪೊಲೀಸ್ ಠಾಣೆ & ಸಿಬ್ಬಂದಿಗಳನ್ನೊಳಗೊಂಡ ವಿಶೇಷ ಚೀತಾ ಗಸ್ತನ್ನು ನಿಯೋಜಿಸಲಾಗಿದೆ. ಗಸ್ತಿನ ಅಧಿಕಾರಿಗಳು ಸಂಜೆ ಮತ್ತು ಬೆಳಗಿನ ಜಾವ ಶಿವಮೊಗ್ಗ ನಗರದಲ್ಲಿ ಗಸ್ತು ಕರ್ತವ್ಯ ನಿರ್ವಹಿಸಲಿದ್ದಾರೆ.

ಗೌರಿ, ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಭದ್ರಾವತಿ ನಗರದಲ್ಲಿಯೂ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಪೊಲೀಸರು ಪಥ ಸಂಚಲನವನ್ನು ನಡೆಸಿದರು. ಭದ್ರಾವತಿ ನಗರದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಮತ್ತು ಆರ್‌ಎಎಫ್‌ ಪಡೆಯ ಅಧಿಕಾರಿ, ಸಿಬ್ಬಂದಿಗಳು ಈ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

ಶಿವಮೊಗ್ಗ ಎಸ್ಪಿ ಮಾಹಿತಿ: ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಜಿ. ಕೆ. ಮಿಥುನ್ ಕುಮಾರ್ ಮಾತನಾಡಿ, "ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳು ಒಟ್ಟಿಗೆ ಬಂದಿರುವುದರಿಂದ ಜಿಲ್ಲಾ ಪೋಲಿಸ್ ಇಲಾಖೆಯ ವತಿಯಿಂದ ಈಗಾಗಲೇ ಜಿಲ್ಲೆಯಲ್ಲಿ 1 ಸಾವಿರಕ್ಕೂ ಹೆಚ್ಚು ಶಾಂತಿಸಭೆಗಳನ್ನು ನಡೆಸಲಾಗಿದೆ. ಇಡೀ ಜಿಲ್ಲಾದ್ಯಂತ 3,500ಕ್ಕೂ ಹೆಚ್ಚು ಕಡೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ" ಎಂದು ಹೇಳಿದ್ದಾರೆ.

"ಈದ್ ಮಿಲಾದ್ ಹಬ್ಬ ಆಚರಣೆಯೂ ಎಲ್ಲಾ ಕಡೆ ನಡೆಯುತ್ತಿರುವುರಿಂದ ಎರಡು ಸಮುದಾಯದ ಮುಖಂಡರು ಹಾಗೂ ಯುವಕರಿಗೆ ಹಬ್ಬವನ್ನು ಉತ್ತಮವಾಗಿ ಶಾಂತಿಯುತವಾಗಿ ಆಚರಿಸುವಂತೆ ಸೂಚನೆ ನೀಡಲಾಗಿದೆ. ಮೆರವಣಿಗೆಯ ವೇಳೆಯಲ್ಲಿ ಆಕ್ರೋಶಭರಿತವಾಗಿ ಇನ್ನೊಂದು ಧರ್ಮವನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಕೂಗುವ, ಪ್ರಚೋದಿಸುವ 560ಕ್ಕೂ ಹೆಚ್ಚು ಜನರನ್ನು ಈಗಾಗಲೇ ಗುರುತಿಸಲಾಗಿದೆ" ಎಂದು ತಿಳಿಸಿದ್ದಾರೆ.

"ಸಮಾಜದಲ್ಲಿ ಕೆಟ್ಟ ಪರಿಣಾಮವನ್ನು ಬೀರುವ 1000ಕ್ಕೂ ಹೆಚ್ಚು ಜನರಿಗೆ ಸಂಬಂಧಿಸಿದ ಪೋಲಿಸ್ ಠಾಣೆಯಲ್ಲಿ ಎಚ್ಚರಿಕೆಯನ್ನು ನೀಡಲಾಗಿದ್ದು, ಕೆಲವು ವ್ಯಕ್ತಿಗಳನ್ನು ಗಡಿಪಾರು ಸಹ ಮಾಡಲಾಗುವುದು. ಹಬ್ಬಗಳು ತೋರಿಕೆಗಾಗಿ ಮಾಡದೆ ಶ್ರದ್ಧಾಭಕ್ತಿಯಿಂದ ಆಚರಿಸಬೇಕು. ಎಲ್ಲಾ ಧರ್ಮದವರಿಗೂ ಹಬ್ಬಗಳನ್ನು ಆಚರಣೆ ಮಾಡಲು ಜಿಲ್ಲಾಡಳಿತ ಅವಕಾಶವನ್ನು ನೀಡುತ್ತದೆ. ಕಾನೂನಿನ ಕೆಲವು ನಿಯಮವನ್ನು ಸರಿಯಾಗಿ ಪಾಲಿಸಿ ಆಚರಿಸುವಂತೆ ಸೂಚಿಸಲಾಗುತ್ತದೆ" ಎಂದು ಹೇಳಿದ್ದಾರೆ.

"ಯಾರು ಕೂಡ ನಿರ್ಬಂಧ ಎಂದುಕೊಳ್ಳಬೇಡಿ. ಹಬ್ಬಗಳ ಆಚರಣೆ ವೇಳೆ ಲಕ್ಷಾಂತರ ಜನರು ಸೇರುತ್ತಾರೆ. ಯಾರೋ ಹತ್ತು ಜನ ಕಿಡಿಗೇಡಿಗಳು ಮಾಡುವ ಕೃತ್ಯದಿಂದ ಲಕ್ಷಾಂತರ ಜನರ ನೆಮ್ಮದಿಯನ್ನು ಹಾಳು ಮಾಡುತ್ತಾರೆ. ಆದ್ದರಿಂದ ಎರಡು ಧರ್ಮದ ಮುಖಂಡರು, ಯುವಕರು ಸಮಾಜದಲ್ಲಿ ಶಾಂತಿಯನ್ನು ಕಾಪಾಡುವಲ್ಲಿ ಸಹಕಾರ ನೀಡಬೇಕು" ಎಂದು ಮನವಿ ಮಾಡಿದ್ದಾರೆ.

ಶಿವಮೊಗ್ಗ ನಗರ ಶಾಸಕ ಎಸ್. ಎನ್. ಚನ್ನಬಸಪ್ಪ ಮಾತನಾಡಿ, "ಎರಡು ಸಮುದಾಯದ ಹಬ್ಬಗಳು ಕಳೆದ ಎರಡು ವರ್ಷಗಳಿಂದ ಒಟ್ಟಿಗೆ ಆಗಮಿಸುತ್ತಿದ್ದು, ಶಾಂತಿ ಸಹಬಾಳ್ವೆಯಿಂದ ಎಲ್ಲರು ಒಟ್ಟಾಗಿ ಹೋಗಬೇಕು. ಜಿಲ್ಲೆಯನ್ನು ಶಾಂತಿಯುತವಾಗಿ ಇಟ್ಟುಕೊಳ್ಳಬೇಕು. ಆತಂಕವಾದಿಗಳನ್ನು ನಿಯಂತ್ರಿಸಬೇಕು. ಕಾನೂನು ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು" ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

"ಈ ಹಿಂದೆ ಶಿವಮೊಗ್ಗದಲ್ಲಿ ನಡೆದಿರುವ ಅಹಿತಕರ ಘಟನೆಗಳು ಹೊರ ಜಿಲ್ಲೆ, ರಾಜ್ಯಗಳಿಂದ ಬಂದು ಮಾಡಿದ್ದಾರೆ ಎಂದು ತನಿಖೆಗಳು ಹೇಳುತ್ತಿದೆ. ಆದ್ದರಿಂದ ಜಿಲ್ಲಾ ಪೊಲೀಸರು ಗಡಿಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ಪರಿಶೀಲನೆ ಮಾಡಬೇಕಾಗಿದೆ. ನಿಬಂಧನೆಗಳಿಂದ ಹಬ್ಬಗಳನ್ನು ಆಚರಿಸುವಂತೆ ಆಗಬಾರದು. ಸಂಭ್ರಮದಿಂದ ಆಚರಣೆ ನಡೆಸಲು ಅವಕಾಶವನ್ನು ಜಿಲ್ಲಾಡಳಿತ ನೀಡಬೇಕು" ಎಂದು ಶಾಸಕರು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+