ಗಣೇಶ ಹಬ್ಬ ಹಾಗೂ ಈದ್ ಮಿಲಾದ್: ಶಿವಮೊಗ್ಗದಲ್ಲಿ ಜಿಲ್ಲಾಡಳಿತದ ಮಹತ್ವದ ಸಭೆ
ಶಿವಮೊಗ್ಗ, ಸೆಪ್ಟೆಂಬರ್ 04: ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಆಚರಣೆ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಮಹತ್ವದ ಸಭೆಯನ್ನು ನಡೆಸಿದೆ. ಕಳೆದ ವರ್ಷ ಶಿವಮೊಗ್ಗ ನಗರದ ಹೊರವಲಯದ ರಾಗಿಗುಡ್ಡದಲ್ಲಿ ಘರ್ಷಣೆ ನಡೆದಿತ್ತು. ಈ ಹಿನ್ನಲೆಯಲ್ಲಿ ಈ ಬಾರಿ ಪೊಲೀಸರು ಹೆಚ್ಚಿನ ನಿಗಾವಹಿಸಿದ್ದಾರೆ. ಹಬ್ಬಗಳನ್ನು ಎಲ್ಲರೂ ಸಡಗರ ಸಂಭ್ರಮದಿಂದ ಆತಂಕ ರಹಿತವಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಗುರದತ್ತ ಹೆಗೆಡೆ ಕರೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಮಹಾನಗರ ಪಾಲಿಕೆ ವತಿಯಿಂದ ಗಣೇಶ ಹಬ್ಬ ಹಾಗೂ ಹಿದ್ ಮಿಲಾದ್ ಹಬ್ಬಗಳ ಪ್ರಯುಕ್ತ ಸರ್ವಧರ್ಮದ ಮುಖಂಡರ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು.
"ಶಿವಮೊಗ್ಗ ಜಿಲ್ಲೆ ಅತ್ಯಂತ ಶಾಂತಿಪ್ರಿಯ. ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಜನ್ಮತಾಳಿದ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ಸಜ್ಜನರು ಜೀವಿಸುತ್ತಿದ್ದಾರೆ. ಆದರೆ ಈಗ ಕೋಮು ಸೂಕ್ಷ್ಮ ಪ್ರದೇಶ ಎನ್ನುವ ಹೆಸರು ಬಂದಿದ್ದು, ಕೆಲವು ಕಿಡಿಗೇಡಿಗಳು ಶಾಂತಿಗೆ ಭಂಗ ತರುವ ಕೆಲಸ ಮಾಡುವುದರಿಂದ ಇಡೀ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತದೆ. ಜಿಲ್ಲಾಡಳಿತ ಈ ರೀತಿಯ ವ್ಯಕ್ತಿಗಳನ್ನು ಗುರುತಿಸಿ ಗಡಿಪಾರು ಮಾಡುವುದು ಹಾಗೂ ಕಾನೂನುಕ್ರಮ ತೆಗೆದುಕೊಳ್ಳುತ್ತದೆ" ಎಂದು ತಿಳಿಸಿದರು.

"ಹಬ್ಬಗಳನ್ನು ಎರಡು ಧರ್ಮವರು ತಮ್ಮ ಕುಟುಂಬದ ಜೊತೆಯಲ್ಲಿ ಪ್ರೀತಿ, ವಿಶ್ವಾಸದಿಂದ ಸಡಗರ ಸಂಭ್ರದಿಂದ ಆಚರಿಸುವ ವಾತಾವರಣವನ್ನು ನಿರ್ಮಾಣ ಮಾಡಬೇಕೆ ಹೊರತು ಆತಂಕದಿಂದ ಭಯಬೀತರಾಗಿ ಆಚರಿಸುವಂತೆ ಅಲ್ಲ. ಈ ನಿಟ್ಟಿನಲ್ಲಿ ಯೋಚಿಸಿ ಯುವಜನರಿಗೆ ಕಾನೂನು ಉಲ್ಲಂಘನೆ ಮಾಡದಂತೆ ಹಿರಿಯರು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಿ ಎರಡು ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸೊಣ" ಎಂದು ಕರೆ ನೀಡಿದರು.
"ಎರಡು ಹಬ್ಬಗಳಲ್ಲೂ ಪರಿಸರ ಸ್ನೇಹಿಯಾಗಿ ಪಟಾಕಿ ಹಾಗೂ ಧ್ವನಿ ವರ್ಧಕ ಇನ್ನಿತರ ವಸ್ತುಗಳನ್ನು ಬಳಸಬೇಕು ಮತ್ತು ಯಾವುದೇ ಸುದ್ಧಿಗಳನ್ನು ಪ್ರಸಾರ ಮಾಡುವಾಗ ಮಾಧ್ಯಮದವರು ಅಧಿಕೃತ ಮಾಹಿತಿ ಇಲ್ಲದೇ ಸಮಾಜದಲ್ಲಿ ಸಮಸ್ಯೆಗಳ ವೈಭವಿಕರಿಸುವ ಸುದ್ಧಿಯನ್ನು ಪ್ರಸಾರ ಮಾಡುವುದು ಬೇಡ" ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಶಿವಮೊಗ್ಗ ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಆಚರಣೆ ಪ್ರಯುಕ್ತ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಸೆಪ್ಟೆಂಬರ್ 7 ರಿಂದ ಗಣೇಶೋತ್ಸವ ಪೂರ್ಣಗೊಳ್ಳುವವರೆಗೆ ಹಾಗೂ ಸೆಪ್ಟೆಂಬರ್ 16 ರಿಂದ ಈದ್ ಮಿಲಾದ್ ಹಬ್ಬ ಪೂರ್ಣಗೊಳ್ಳುವವರೆಗೂ ಶಿವಮೊಗ್ಗ ಜಿಲ್ಲೆಯಾದ್ಯಂತ ಡಿಜೆ ಸಿಸ್ಟಂ ಬಳಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
ಎಸ್‌ಪಿ ಹೇಳಿದ್ದೇನು?; ಜಿಲ್ಲಾ ರಕ್ಷಣಾಧಿಕಾರಿ ಜಿ. ಕೆ. ಮಿಥುನ್ ಕುಮಾರ್ ಮಾತನಾಡಿ, "ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳು ಒಟ್ಟಿಗೆ ಬಂದಿರುವುದರಿಂದ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಈಗಾಗಲೇ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಶಾಂತಿಸಭೆಗಳನ್ನು ನಡೆಸಲಾಗಿದೆ. ಇಡೀ ಜಿಲ್ಲಾದ್ಯಂತ 3500ಕ್ಕೂ ಹೆಚ್ಚು ಕಡೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆಯೂ ಎಲ್ಲಾ ಕಡೆ ನಡೆಯುತ್ತಿರುವುರಿಂದ ಎರಡು ಸಮುದಾಯದ ಮುಖಂಡರು ಹಾಗೂ ಯುವಕರಿಗೆ ಹಬ್ಬವನ್ನು ಉತ್ತಮವಾಗಿ ಶಾಂತಿಯುತವಾಗಿ ಆಚರಿಸುವಂತೆ ಸೂಚನೆ ನೀಡಲಾಗಿದೆ" ಎಂದರು.
"ಮೆರವಣಿಗೆಯ ವೇಳೆಯಲ್ಲಿ ಆಕ್ರೋಶಭರಿತವಾಗಿ ಇನ್ನೊಂದು ಧರ್ಮವನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಕೂಗುವ, ಪ್ರಚೋಧಿಸುವ 560ಕ್ಕೂ ಹೆಚ್ಚು ಜನರನ್ನು ಈಗಾಗಲೇ ಗುರುತಿಸಲಾಗಿದೆ ಮತ್ತು ಸಮಾಜದಲ್ಲಿ ಕೆಟ್ಟ ಪರಿಣಾಮವನ್ನು ಬಿರುವ 1000ಕ್ಕೂ ಹೆಚ್ಚು ಜನರಿಗೆ ಸಂಬಂಧಿಸಿದ ಪೋಲಿಸ್ ಠಾಣೆಯಲ್ಲಿ ಎಚ್ಚರಿಕೆಯನ್ನು ನೀಡಲಾಗಿದ್ದು ಕೆಲವು ವ್ಯಕ್ತಿಗಳನ್ನು ಗಡಿಪಾರು ಸಹ ಮಾಡಲಾಗುವುದು" ಎಂದು ಹೇಳಿದರು.
"ಹಬ್ಬಗಳು ತೋರಿಕೆಗಾಗಿ ಮಾಡದೆ ಶ್ರದ್ಧಾಭಕ್ತಿಯಿಂದ ಆಚರಿಸಬೇಕು. ಎಲ್ಲಾ ಧರ್ಮದವರಿಗೂ ಹಬ್ಬಗಳನ್ನು ಆಚರಣೆ ಮಾಡಲು ಜಿಲ್ಲಾಡಳಿತ ಅವಕಾಶವನ್ನು ನೀಡುತ್ತದೆ. ಕಾನೂನಿನ ಕೆಲವು ನಿಯಮವನ್ನು ಸರಿಯಾಗಿ ಪಾಲಿಸಿ ಆಚರಿಸುವಂತೆ ಸೂಚಿಸಲಾಗುತ್ತದೆ. ಯಾರು ಕೂಡ ನಿರ್ಭಂದ ಎಂದುಕೊಳ್ಳಬೇಡಿ. ಹಬ್ಬಗಳ ಆಚರಣೆ ವೇಳೆ ಲಕ್ಷಾಂತರ ಜನರು ಸೇರುತ್ತಾರೆ. ಯಾರೋ ಹತ್ತು ಜನ ಕಿಡಿಗೇಡಿಗಳು ಮಾಡುವ ಕೃತ್ಯದಿಂದ ಲಕ್ಷಾಂತರ ಜನರ ನೆಮ್ಮದಿಯನ್ನು ಹಾಳು ಮಾಡುತ್ತಾರೆ. ಅದ್ದರಿಂದ ಎರಡು ಧರ್ಮದ ಮುಖಂಡರು, ಯುವಕರು ಸಮಾಜದಲ್ಲಿ ಶಾಂತಿಯನ್ನು ಕಾಪಾಡುವಲ್ಲಿ ಸಹಕಾರ ನೀಡಬೇಕು" ಎಂದು ಮನವಿ ಮಾಡಿದರು.
ಶಿವಮೊಗ್ಗ ನಗರ ಶಾಸಕ ಎಸ್. ಎನ್. ಚನ್ನಬಸಪ್ಪ ಮಾತನಾಡಿ, "ಎರಡು ಸಮುದಾಯದ ಹಬ್ಬಗಳು ಕಳೆದ ಎರಡು ವರ್ಷಗಳಿಂದ ಒಟ್ಟಿಗೆ ಆಗಮಿಸುತ್ತಿದ್ದು, ಶಾಂತಿ ಸಹಬಾಳ್ವೆಯಿಂದ ಎಲ್ಲರು ಒಟ್ಟಾಗಿ ಹೋಗಬೇಕು. ಜಿಲ್ಲೆಯನ್ನು ಶಾಂತಿಯುತವಾಗಿ ಇಟ್ಟುಕೊಳ್ಳಬೇಕು. ಆತಂಕವಾದಿಗಳನ್ನು ನಿಯಂತ್ರಿಸಬೇಕು. ಕಾನೂನು ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಈ ಹಿಂದೆ ಶಿವಮೊಗ್ಗದಲ್ಲಿ ನಡೆದಿರುವ ಅಹಿತಕರ ಘಟನೆಗಳು ಹೊರ ಜಿಲ್ಲೆ ರಾಜ್ಯಗಳಿಂದ ಬಂದು ಮಾಡಿದ್ದಾರೆ ಎಂದು ತನಿಖೆಗಳು ಹೇಳುತ್ತಿದೆ. ಅದ್ದರಿಂದ ಜಿಲ್ಲಾ ಪೋಲಿಸ್ ಗಡಿಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ಪರಿಶೀಲನೆ ಮಾಡಬೇಕಾಗಿದೆ. ನಿಬಂಧನೆಗಳಿಂದ ಹಬ್ಬಗಳನ್ನು ಆಚರಿಸುವಂತೆ ಆಗಬಾರದು. ಸಂಭ್ರಮದಿಂದ ಆಚರಣೆ ನಡೆಸಲು ಅವಕಾಶವನ್ನು ಜಿಲ್ಲಾಡಳಿತ ನೀಡಬೇಕು" ಎಂದರು.
ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಮಾತನಾಡಿ, "ಯಾವ ಧರ್ಮಗಳು ಗಲಭೆಯನ್ನು ಪ್ರಚೋದಿಸುವುದಿಲ್ಲ. ಎಲ್ಲಾ ಧರ್ಮಗಳು ಶಾಂತಿಯನ್ನು ಸಾರುತ್ತವೆ. ಮನುಷ್ಯರಾದ ನಾವು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಬಸವಣ್ಣನವರು ತತ್ವದಂತೆ ಮಾನವೀಯತೆ ಶ್ರೇಷ್ಠ ಎನ್ನುವುದನ್ನು ಅರಿಯಬೇಕಾಗಿದೆ. ಈ ಹಿಂದೆ ನಡೆದಿರುವ ಘಟನೆಗಳನ್ನು ಇಟ್ಟುಕೊಂಡು ಯಾರು ಕೂಡ ಗಲಭೆಗಳನ್ನು ಸೃಷ್ಟಿಸುವ ಮತ್ತು ಸಮಾಜದಲ್ಲಿ ಶಾಂತಿಗೆ ಭಂಗ ತರುವ ಕೆಲಸ ಮಾಡಬಾರದು. ಮುಖಂಡರು, ನಾಯಕರಾದ ನಾವುಗಳು ನಮ್ಮ ಸಮಾಜದಲ್ಲಿನ ಯುವಕರನ್ನು ನಿಯಂತ್ರಿಸುವ ಮತ್ತು ಸರಿ ತಪ್ಪುಗಳನ್ನು ತಿದ್ದುವ ಕೆಲಸವನ್ನು ಮಾಡಬೇಕು" ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ ಮುಖಂಡ ರಮೇಶ್ ಬಾಬು ಮಾತನಾಡಿ, "ಪ್ರತಿಬಾರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳು ಬಂದಾಗ ಗೊಂದಲಗಳು ಸೃಷ್ಠಿಯಾಗುತ್ತದೆ. ಯಾವುದೋ ದೇಶ ರಾಜ್ಯದಲ್ಲಿ ನಡೆದ ಘಟನೆಗಳಿಗೆ ಇಲ್ಲಿ ಪ್ರತಿಕಾರದ ಮಾತುಗಳು ಬರಬಾರದು. ಎಲ್ಲರು ಸಮಾನರು ಎನ್ನುವ ತತ್ವ ಪಾಲಿಸಿದರೆ ಯಾವುದೇ ಅಹಿತರ ಘಟನೆ ನಡೆಯುವುದಿಲ್ಲ. ನಾವೆಲ್ಲ ಮೊದಲು ಮಾನವರಾಗೋಣ. ಯಾವುದೆ ದುರ್ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸೋಣ" ಎಂದರು.












Click it and Unblock the Notifications