ಶಿವಮೊಗ್ಗ; ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟ ರೈತರಿಗೆ ಸನ್ಮಾನ

ಶಿವಮೊಗ್ಗ, ಆಗಸ್ಟ್ 31; ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸಂಚಾರ ಗುರುವಾರ ಅಧಿಕೃತವಾಗಿ ಆರಂಭಗೊಂಡಿತು. ಸೋಗಾನೆಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಆಗಮಿಸಿದ ಮೊದಲ ವಿಮಾನ 11 ಗಂಟೆಗೆ ಬಂದಿಳಿಯಿತು. ವಾಟರ್ ಸೆಲ್ಯೂಟ್ ಮೂಲಕ ವಿಮಾನಕ್ಕೆ ಸ್ವಾಗತ ಕೋರಲಾಯಿತು. ಮಲೆನಾಡಿನ ಜನರ ಬಹುವರ್ಷಗಳ ಕನಸು ನನಸಾಯಿತು.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 9.50ಕ್ಕೆ ಹೊರಟ ಮೊದಲ ವಿಮಾನ 11.05ಕ್ಕೆ ಶಿವಮೊಗ್ಗಕ್ಕೆ ಬಂದಿಳಿಯಿತು. ಈ ಮೂಲಕ ಮಲೆನಾಡ ಭಾಗದಲ್ಲಿ ವಿಮಾನಯಾನ ಸೇವೆಯ ಹೊಸ ಅಧ್ಯಾಯ ಆರಂಭವಾಯಿತು. ಎಲ್ಲಾ ಪ್ರಯಾಣಿಕರಿಗೂ ವಿಮಾನ ನಿಲ್ದಾಣದ ಸಿಬ್ಬಂದಿ ಗುಲಾಬಿ ಹೂ, ಸಿಹಿ ನೀಡಿ ಬರಮಾಡಿಕೊಂಡರು.

First Flight Landed In Shivamogga Airport Local Farmers Honored

ಮೊದಲ ವಿಮಾನದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ದಿ ಸಚಿವ ಎಂ. ಬಿ. ಪಾಟೀಲ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ, ಶಾಸಕ ಆರಗ ಜ್ಞಾನೇಂದ್ರ ಮುಂತಾದವರು ಶಿವಮೊಗ್ಗಕ್ಕೆ ಆಗಮಿಸಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಸೋಗಾನೆಯ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಯಾನ ಕಾರ್ಯಾಚರಣೆ ಮತ್ತು ಅಧಿಕೃತ ಜಾಲತಾಣವನ್ನು ಸಚಿವ ಎಂ. ಬಿ. ಪಾಟೀಲ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ನೀಡಿದ ರೈತರ ಪರವಾಗಿ ಇಬ್ಬರು ರೈತರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಸಚಿವರ ಮಾತು; ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಂ. ಬಿ. ಪಾಟೀಲ್, "ವಿಮಾನಯಾನ ಆರಂಭದಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ದಿಯ ವಿನೂತನ ಅಧ್ಯಾಯ ಆರಂಭವಾಗಿದೆ. ರಾಜ್ಯದ ಮಲೆನಾಡು ಭಾಗದಲ್ಲಿ ನಿರ್ಮಾಣವಾಗಿರುವ ಪ್ರಪ್ರಥಮ ವಿಮಾನ ನಿಲ್ದಾಣ ಇದಾಗಿದೆ. 450 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ವಿಮಾನ ನಿಲ್ದಾಣದಿಂದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ" ಎಂದರು.

"ಮುಂದಿನ ಒಂದು ವರ್ಷ ಕಾಲ ಶಿವಮೊಗ್ಗ-ಬೆಂಗಳೂರು ನಡುವೆ ಪ್ರಯಾಣಿಸುವ ಪ್ರತಿಯೊಬ್ಬರ ಟಿಕೆಟ್ ಮೇಲೆ 500 ರೂ. ಸಬ್ಸಿಡಿಯನ್ನು ರಾಜ್ಯ ಸರ್ಕಾರ ಸಬ್ಸಿಡಿ ನೀಡಲಿದೆ. 779 ಎಕರೆ ವಿಸ್ತಾರದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣದಲ್ಲಿ ಮೂಲಯೋಜನೆಯ ವಿನ್ಯಾಸವನ್ನು ಪರಿಷ್ಕರಿಸಿ, ಏರ್‌ಬಸ್ 320 ಮಾದರಿಯ ವಿಮಾನಗಳು ಕೂಡ ಬಂದಿಳಿಯುವ ಮತ್ತು ರಾತ್ರಿ ವೇಳೆ ಇಳಿಯುವ ಸೌಲಭ್ಯಗಳನ್ನು ಕೂಡ ಕಲ್ಪಿಸಲಾಗುತ್ತಿದೆ" ಎಂದು ಹೇಳಿದರು.

"ಸದ್ಯ ಬೆಂಗಳೂರಿಗೆ ಕನೆಕ್ಟಿಂಗ್ ವಿಮಾನಯಾನ ಸೇವೆ ಲಭ್ಯವಾಗಲಿದೆ. ಬೆಂಗಳೂರಿನಿಂದ ಚೆನ್ನೈ, ಮುಂಬೈ ಮತ್ತು ದೆಹಲಿಗೆ ತೆರಳಲಿರುವ ಇಂಡಿಗೋ ಸಂಸ್ಥೆಯ ವಿಮಾನಗಳ ಮೂಲಕ ಪ್ರಯಾಣವನ್ನು ಮುಂದುವರಿಸಬಹುದು. ಉಡಾನ್ ಯೋಜನೆಯಡಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಸದ್ಯದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ದೆಹಲಿ, ಹೈದರಾಬಾದ್ ಸೇರಿದಂತೆ ದೇಶದ ನಾನಾ ನಗರಗಳಿಗೆ ಶಿವಮೊಗ್ಗದಿಂದ ನೇರ ವಿಮಾನ ಆರಂಭಿಸಲಾಗುವುದು" ಎಂದು ಸಚಿವರು ಭರವಸೆ ನೀಡಿದರು.

ಪ್ರಯಾಣಿಕರನ್ನು ಸ್ವಾಗತಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, "ವಿಮಾನ ನಿಲ್ದಾಣಕ್ಕಾಗಿ ಶ್ರಮಿಸಿದ ಎಲ್ಲ ಜನಪ್ರತಿನಿಧಿಗಳು ಮತ್ತು ಭೂಮಿ ನೀಡಿದ ರೈತರಿಗೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ, ಕೈಗಾರಿಕೆಗಳಿಗೆ ನೆರವು ಸೇರಿದಂತೆ ಜಿಲ್ಲೆಯ ಅಭಿವೃದ್ದಿಗೆ ಸಹಕರಿಸಲಾಗುವುದು. ಜನಸಾಮಾನ್ಯರು, ಬಡವರು ವಿಮಾನ ನಿಲ್ದಾಣದಲ್ಲಿ ಹಾರಾಡುವ ವ್ಯವಸ್ಥೆ ಮಾಡುತ್ತೇವೆಂಬ ವಿಶ್ವಾಸ ಇದೆ" ಎಂದರು.

ಸಂಸದ ಬಿ. ವೈ. ರಾಘವೇಂದ್ರ ಮಾತನಾಡಿ, "ಸಹ್ಯಾದ್ರಿ ನಗರಕ್ಕೆ ಲೋಹದ ಹಕ್ಕಿಯ ಆಗಮನ ಆಗಿದೆ. ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಹಾಗೂ ಭೂಮಿ ನೀಡಿದ ರೈತರಿಗೆ ಧನ್ಯವಾದಗಳು" ಎಂದರು.

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಮಾತನಾಡಿ, "ಶಿವಮೊಗ್ಗ ಜಿಲ್ಲೆಯ ಬಹು ವರ್ಷಗಳ ವಿಮಾನ ನಿಲ್ದಾಣದ ಕನಸು ನಿಮ್ಮೆಲ್ಲರ ಬೆಂಬಲದಿಂದ ನನಸಾಗಿದೆ. ಕೈಗಾರಿಕೆ ಬೆಳವಣಿಗೆ, ಉದ್ಯೋಗ ಸೃಷ್ಟಿಗೆ ಉತ್ತಮ ಅವಕಾಶಗಳು ತೆರೆದುಕೊಳ್ಳಲಿವೆ. ನಿಲ್ದಾಣದಲ್ಲಿ ರಾತ್ರಿ ವಿಮಾನ ಇಳಿಯುವ ವ್ಯವಸ್ಥೆ ಆಗುತ್ತಿದ್ದು ಕೆಲವೇ ವರ್ಷಗಳಲ್ಲಿ ಈ ನಿಲ್ದಾಣ ಅಂತರಾಷ್ಟ್ರೀಯ ನಿಲ್ದಾಣ ಆಗುವುದರಲ್ಲಿ ಅನುಮಾನವಿಲ್ಲ" ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+