ಶಿವಮೊಗ್ಗ: "ಸಿಂಗದೂರು ದೇವಾಲಯ ಮುಜರಾಯಿಗೆ ಸೇರಿಸಿದರೆ ಉಗ್ರ ಹೋರಾಟ"
ಶಿವಮೊಗ್ಗ, ಸೆಪ್ಟೆಂಬರ್ 9: ಮಲೆನಾಡಿನ ಸುಪ್ರಸಿದ್ಧ ದೇವಾಲಯವಾದ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಮುಜರಾಯಿಗೆ ಸೇರಿಸಬೇಕು ಎಂದು ಕೆಲವರು ಆಗ್ರಹಿಸಿದ್ದು, ಇದನ್ನು ಸಾಗರ ತಾಲ್ಲೂಕಿನ ನಾಗರಿಕ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
"ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಶತಮಾನಗಳ ಐತಿಹಾಸಿಕ ಹಿನ್ನೆಲೆ ಇದ್ದು, ಸಾವಿರಾರು ಸಂಖ್ಯೆಯಲ್ಲಿ ಪ್ರತಿನಿತ್ಯ ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಅವರು ಕಳೆದ 30 ವರ್ಷಗಳಿಂದ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ'' ಎಂದು ನಾಗರಿಕ ವೇದಿಕೆ ಸದಸ್ಯರು ತಿಳಿಸಿದರು.
"ಸಿಗಂದೂರು ಚೌಡೇಶ್ವರಿ ಟ್ರಸ್ಟ್ ಮೂಲಕ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದಾರೆ. ದೇವಸ್ಥಾನಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಆಗಮಿಸುವ ಭಕ್ತರ ವಾಜ್ಯಗಳನ್ನು ನ್ಯಾಯಸಮ್ಮತವಾಗಿ ಬಗೆಹರಿಸಲಾಗುತ್ತಿದೆ'' ಎಂದು ವೇದಿಕೆಯ ಪ್ರಮುಖರು ಹೇಳಿದರು.

"ಪ್ರತಿವರ್ಷ 1500 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ದೇವಸ್ಥಾನದ ಅಭಿವೃದ್ಧಿಯನ್ನು ಸಹಿಸದ ಕೆಲವರು ಸಿಗಂದೂರು ಚೌಡೇಶ್ವರಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ವಹಿಸಬೇಕು ಎಂದಿದ್ದು, ಒಂದು ವೇಳೆ ಮುಜರಾಯಿ ಇಲಾಖೆಗೆ ದೇವಸ್ಥಾನವನ್ನು ಸೇರಿಸಲು ಮುಂದಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ'' ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಾಗರಿಕ ವೇದಿಕೆ ಅಧ್ಯಕ್ಷ ರಾಜಶೇಖರ್, ಷಣ್ಮುಖ ಲಕ್ಷ್ಮಣ್, ಬಂಗಾರಪ್ಪ, ಸತೀಶ್, ಕುಮಾರ್, ವಿನಾಯಕ ಇದ್ದರು.












Click it and Unblock the Notifications