ಶಿವಮೊಗ್ಗದಲ್ಲಿ ತಂದೆ-ಮಗ ಸಾವು, ನೋವಿನ ನಡುವೆಯೂ ಮಗನ ಅಂಗಾಂಗ ದಾನ
ಶಿವಮೊಗ್ಗ, ಸೆಪ್ಟೆಂಬರ್ .14 ಜೇಡಿಕಟ್ಟೆ ಗ್ರಾಮದ ಹರೀಶ್ (32) ಎಂಬಾತ ಗುರುವಾರ ಬೆಳಗ್ಗೆ ದಿಢೀರ್ ಮೂರ್ಚೆ ಹೋಗಿದ್ದ. ಕೂಡಲೇ ಆತನನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ಸ್ಪಷ್ಟಪಡಿಸಿದರು.
ಮಿದುಳು ನಿಷ್ಕ್ರಿಯಗೊಂಡು, ಚಿಕಿತ್ಸೆ ಫಲಕಾರಿಯಾಗದಿದ್ದರಿಂದ ವೈದ್ಯರು ಹರೀಶ್ ಕಣ್ಣುಗಳನ್ನು ದಾನ ಮಾಡಬಹುದು ಎಂದು ತಿಳಿಸಿದ್ದಾರೆ. ಆದರೆ ನೋವಿನ ನಡುವೆಯೂ ಕುಟುಂಬದವರೇ ಬಹು ಅಂಗಾಂಗಳ ದಾನಕ್ಕೆ ಸೂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಇದೀಗ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದೇಹವನ್ನು ರವಾನಿಸಲಾಗಿದ್ದು, ಈ ಕುರಿತು ಮಾತನಾಡಿರುವ ಹರೀಶ್ ಸಂಬಂಧಿ ಶಿವಮೊಗ್ಗ ನಂದನ್, ಹರೀಶ್ ದೇಹವನ್ನು ತುರ್ತಾಗಿ ಬೆಂಗಳೂರಿಗೆ ರವಾನಿಸುವ ಅನಿವಾರ್ಯವಿತ್ತು. ಇದಕ್ಕಾಗಿ ವಿಶೇಷ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿತ್ತು.

ಆದರೆ ಟ್ರಾಫಿಕ್ ಸಮಸ್ಯೆಯಿಂದಾಗಿ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಹರೀಶ್ ದೇಹ ತಲುಪುವುದು ತಡವಾಗುವ ಸಾಧ್ಯತೆ ಇತ್ತು. ಟ್ರಾಫಿಕ್ ಸಮಸ್ಯೆ ಆಗುವ ಸಂಭವವಿದ್ದರಿಂದ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಅವರನ್ನು ಮಧ್ಯರಾತ್ರಿ ಸಂಪರ್ಕಿಸಿ ವಿಚಾರ ತಿಳಿಸಿದೆವು. ಕೂಡಲೇ ಅವರು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು ಎಂದು ಹೇಳಿದರು.
ತಂದೆ ಸಾವು
ಹರೀಶ್ ಬದುಕುಳಿಯುವುದಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಆತನ ತಂದೆ ಬಾಲಕೃಷ್ಣ (59) ಅವರಿಗೆ ಅಘಾತವಾಗಿದೆ. ಕುಸಿದು ಬಿದ್ದ ಅವರನ್ನು ಕೂಡಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಮಿದುಳಿನಲ್ಲಿ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಬಾಲಕೃಷ್ಣ ಕೊನೆಯುಸಿರೆಳೆದರು.












Click it and Unblock the Notifications