ಕೈ ಕೊಟ್ಟ ಮುಂಗಾರು; ವಿದ್ಯುತ್, ಬೇಡಿಕೆ ಪೂರೈಕೆ ಬಗ್ಗೆ ಸಚಿವರ ಮಾಹಿತಿ
ಶಿವಮೊಗ್ಗ, ಫೆಬ್ರವರಿ 04: ಕರ್ನಾಟಕದಲ್ಲಿ 2023ನೇ ಸಾಲಿನಲ್ಲಿ ನೈಋತ್ಯ ಮುಂಗಾರು ಕೈ ಕೊಟ್ಟ ಪರಿಣಾಮ ರಾಜ್ಯದ ಜಲಾಶಯಗಳು ಭರ್ತಿಯಾಗಿಲ್ಲ. ಇದರಿಂದಾಗಿ ಜಲವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಬೇಸಿಗೆ ಆರಂಭವಾಗುತ್ತಿದ್ದು, ವಿದ್ಯುತ್‌ಗಾಗಿ ಬೇಡಿಕೆಯೂ ಹೆಚ್ಚುತ್ತಿದೆ.
ಶಿವಮೊಗ್ಗ ಪ್ರವಾಸ ಕೈಗೊಂಡಿದ್ದ ರಾಜ್ಯದ ಇಂಧನ ಸಚಿವ ಕೆ. ಜೆ. ಜಾರ್ಜ್ ವಿದ್ಯುತ್ ಬೇಡಿಕೆ, ಉತ್ಪಾದನೆ, ಪೂರೈಕೆ ಕುರಿತು ಮಾತನಾಡಿದ್ದಾರೆ. "ದೇಶದ ಬೇರೆ-ಬೇರೆ ರಾಜ್ಯಗಳಿಂದ ವಿದ್ಯುತ್ ಅನ್ನು ಖರೀದಿಸಿ ರಾಜ್ಯದ ಜನರ ಅನುಕೂಲಕ್ಕೆ ತಕ್ಕಂತೆ ಸರಬರಾಜು ಮಾಡಲಾಗುತ್ತಿದೆ" ಎಂದು ಹೇಳಿದ್ದಾರೆ.

"ಪ್ರಸಕ್ತ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ. ಇರುವ ವಿದ್ಯುತ್ ಅನ್ನು ಹಂಚಿಕೆ ಮಾಡುವ ನಿಟ್ಟಿನಲ್ಲಿ ಕೃಷಿ ಚಟುವಟಿಕೆಗಳಿಗೆ ನೀಡಲಾಗುತ್ತಿದ್ದ ವಿದ್ಯುತ್ ಅನ್ನು 7 ಗಂಟೆಗಳಿಂದ 5 ಗಂಟೆಗೆ ಮಿತಿಗೊಳಿಸಲಾಗಿದೆ" ಎಂದು ಸಚಿವರು ವಿವರಿಸಿದರು.
"ಅಂತೆಯೇ ಬೇಸಿಗೆ ಕಾಲವಾದ್ದರಿಂದ 9000 ಮೆಗಾ ವ್ಯಾಟ್‌ನಿಂದ 16,000 ಮೆಗಾವ್ಯಾಟ್ ವಿದ್ಯುತ್‍ಗೆ ಬೇಡಿಕೆ ಹೆಚ್ಚಾಗಿದೆ. ಪ್ರಸ್ತುತ ಮಧ್ಯ ಪ್ರದೇಶ, ಪಂಜಾಬ್ ರಾಜ್ಯಗಳಿಂದ ವಿದ್ಯುತ್ ಆಮದು ಮಾಡಿಕೊಳ್ಳಲಾಗುತ್ತಿದೆ. ಹಿಮಾಚಲ ಪ್ರದೇಶದಿಂದ ವಿದ್ಯುತ್ ಖರೀದಿಸಲಾಗುತ್ತಿದೆ. ಕೇಂದ್ರ ಸರ್ಕಾರವೂ ಕೂಡ ವಿದ್ಯುತ್ ಸರಬರಾಜು ಮಾಡಲು ಸಹಕಾರ ನೀಡಲಿದೆ" ಎಂದರು.
"ಪ್ರಸ್ತುತ ರಾಜ್ಯದಲ್ಲಿ ವಿದ್ಯುತ್ ಅಭಾವ ನೀಗಿದೆ. ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿನ ಕೃಷಿ ಚಟುವಟಿಕೆಗಳಿಗೂ ವ್ಯವಸ್ಥಿತವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಭಾವ್ಯ ವಿದ್ಯುತ್ ಅಭಾವವನ್ನು ನೀಗಿಸಲು ತೆರೆದ ಮಾರುಕಟ್ಟೆಯಲ್ಲಿ ವಿದ್ಯುತ್ ಅನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಕೆ. ಜೆ. ಜಾರ್ಜ್ ಹೇಳಿದರು.
ಸೋಲಾರ್ ವಿದ್ಯುತ್; ಇಂಧನ ಸಚಿವ ಕೆ. ಜೆ. ಜಾರ್ಜ್, "ರೈತರು ತಮ್ಮ ಹೊಲಗಳಲ್ಲಿನ ಬೆಳೆಗಳಿಗೆ ಕೊಳವೆಬಾವಿಗಳಿಂದ ನೀರನ್ನು ಪಡೆದುಕೊಳ್ಳಲು ಅವಶ್ಯವಿರುವ ವಿದ್ಯುತ್‍ಗಾಗಿ ಸೋಲಾರ್ ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳುವವರಿಗಾಗಿ ಶೇ.80ರಷ್ಟು ಸಹಾಯಧನವನ್ನು ಸರ್ಕಾರದಿಂದ ನೀಡಲಾಗುವುದು. ಈ ವಿದ್ಯುತ್‍ನಿಂದ ಸುಮಾರು 10 ಹೆಚ್.ಪಿ.ವರೆಗಿನ ಮೋಟಾರ್ ಯಂತ್ರಗಳನ್ನು ನಡೆಸಬಹುದಾಗಿದೆ" ಎಂದರು.
"ರೈತರ ಪಂಪ್‍ಸೆಟ್‍ಗಳಿಗೆ ನಿರಂತರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ಸದುದ್ದೇಶದಿಂದ ಅಕ್ರಮ ವಿದ್ಯುತ್ ಬಳಕೆಯನ್ನು ಸಕ್ರಮಗೊಳಿಸುವ ಹಾಗೂ ಅಕ್ರಮವನ್ನು ನಿಯಂತ್ರಿಸುವ ಸಲುವಾಗಿ ವಿಶೇಷವಾಗಿ ಗಮನಹರಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಟ್ರಾನ್ಸ್ ಫಾರ್ಮರ್ ಬದಲಾವಣೆ, ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ" ಎಂದು ಸಚಿವರು ವಿವರಿಸಿದರು.
"ಸೋಲಾರ್ ಮತ್ತು ವಿಂಡ್‍ಪವರ್ ವಿದ್ಯುತ್ ಘಟಕಗಳ ಆರಂಭಿಸುವವರಿಗೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ. ಪರಿಸರ ಸ್ನೇಹಿ ಗ್ರೀನ್ ಹೈಡ್ರೋಜನ್ ಪವರ್ ಉತ್ಪಾದಿಸುತ್ತಿರುವ ಉತ್ತರ ಕರ್ನಾಟಕದ ಆಯ್ದ ಜಿಲ್ಲೆಗಳ ವಿದ್ಯುತ್ ಅನ್ನು ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಪಾವಗಡದಲ್ಲಿ ಅಲ್ಲಿನ ರೈತರ ಸಹಕಾರದೊಂದಿಗೆ ಸುಮಾರು 10,000 ಎಕರೆ ಭೂ ಪ್ರದೇಶದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಅಲ್ಲದೇ ಅಲ್ಲಿನ ರೈತರು ಇನ್ನೂ 10,000 ಎಕರೆ ಭೂಮಿ ಒದಗಿಸಲು ಉತ್ಸಾಹ ತೋರುತ್ತಿದ್ದಾರೆ" ಎಂದರು.
"ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಪ್ರಸ್ತುತ ಬಳಸುತ್ತಿರುವ ವಿದ್ಯುತ್‌ನ ಬಿಲ್ ಕೋಟ್ಯಾಂತರ ರೂ.ಗಳ ಬಾಕಿ ಇದ್ದು, ಪಂಚಾಯಿತಿಗಳಿಂದ ಬಾಕಿ ಪಾವತಿಸುವುದು ಸಾಧ್ಯವಾಗುತ್ತಿಲ್ಲ. ಈ ವಿಷಯದ ಕುರಿತು ಸಂಬಂಧಿಸಿದ ಇಲಾಖಾ ಸಚಿವರೊಂದಿಗೆ ಮಾತನಾಡಿ, ಶೀಘ್ರದಲ್ಲಿ ಸಮಸ್ಯೆಯ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ತಿಳಿಸಿದರು.
"ಸ್ಥಳೀಯವಾಗಿರುವ ವಿದ್ಯುತ್ ಸಂಬಂಧಿ ಸಮಸ್ಯೆಗಳ ಇತ್ಯರ್ಥಕ್ಕೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೊಣೆಗಾರಿಕೆ ನೀಡಲಾಗಿದೆ. ಖಾಸಗಿ ಬೋರ್ ವೆಲ್‌ಗಳಿಂದ ಗ್ರಾಮೀಣ ಕುಡಿಯುವ ನೀರನ್ನು ಸರಬರಾಜು ಮಾಡುವಲ್ಲಿ ಬಳಸುವ ವಿದ್ಯುತ್‍ಗೆ ಯಾವುದೇ ನಿರ್ಬಂಧ ವಿಧಿಸದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದರು.












Click it and Unblock the Notifications