ಶಿವಮೊಗ್ಗ; ರೂಪಾಂತರ ಕೋವಿಡ್ ವೈರಸ್ ಪತ್ತೆ, ಸೀಲ್ ಡೌನ್
ಶಿವಮೊಗ್ಗ, ಡಿಸೆಂಬರ್ 30: ಶಿವಮೊಗ್ಗದಲ್ಲಿ ರೂಪಾಂತರಗೊಂಡಿರುವ ಕೋವಿಡ್ ವೈರಸ್ ಪ್ರಕರಣ ದಾಖಲಾಗಿದೆ. ಸೋಂಕಿತರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕಿತರ ನಿವಾಸವನ್ನು ಸ್ಯಾನಿಟೈಸ್ ಮಾಡಿ, 100 ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.
ಬ್ರಿಟನ್‌ನಿಂದ ಶಿವಮೊಗ್ಗಕ್ಕೆ ವಾಪಸ್ ಆಗಿದ್ದ ನಾಲ್ವರಿಗೆ ಕೋವಿಡ್ ಸೋಂಕು ತಗುಲಿತ್ತು. ಇದು ರೂಪಾಂತರಗೊಂಡ ವೈರಸ್ ಎಂಬುದು ಖಚಿತವಾಗಿದೆ. ಆದ್ದರಿಂದ ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸ್ಯಾನಿಟೈಸ್ ಮಾಡಲಾಗಿದೆ.
ರೂಪಾಂತರ ವೈರಸ್ ವಿರುದ್ಧ ಕೋವ್ಯಾಕ್ಸಿನ್ ಪರಿಣಾಮಕಾರಿ
ಶಿವಮೊಗ್ಗ ನಗರದ ಸಾವರ್ಕರ್ ನಗರದಲ್ಲಿರುವ ಸೋಂಕಿತರ ನಿವಾಸವನ್ನು ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಸ್ಯಾನಿಟೈಸ್ ಮಾಡಲಾಗಿದೆ. ಅಲ್ಲದೇ, ಅವರ ನಿವಾಸದಿಂದ 100 ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ರೂಪಾಂತರ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸಹ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವೈರಸ್ ರೂಪಾಂತರ ಪರೀಕ್ಷೆ
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಸಚಿವರು, "ಐಸಿಎಂಆರ್ ಈ ವರದಿ/ಪಟ್ಟಿ ನೀಡಿದ್ದು, ಅದರಂತೆ ಬ್ರಿಟನ್‌ನಿಂದ ಡಿಸೆಂಬರ್ 22ರಂದು ನಗರಕ್ಕೆ ಆಗಮಿಸಿದ್ದ ಒಂದೇ ಕುಟುಂಬದ ನಾಲ್ವರಲ್ಲಿ ರೂಪಾಂತರಿ ಕೊರೋನಾ ದೃಢಪಟ್ಟಿದೆ" ಎಂದು ತಿಳಿಸಿದ್ದಾರೆ.
ಭಾರತದಲ್ಲೂ ವೈರಸ್ ರೂಪಾಂತರ ಸೃಷ್ಟಿ? ವಿಜ್ಞಾನಿಗಳ ಎಚ್ಚರಿಕೆಯಿದು
"ಎಲ್ಲರೂ ನಗರಕ್ಕೆ ಆಗಮಿಸಿದ ದಿನವೇ ಐಸೋಲೇಶನ್‌ನಲ್ಲಿ ಇರಿಸಿದ ಕಾರಣ ಹೆಚ್ಚಿನ ಜನರ ಸಂಪರ್ಕ ಆಗಿಲ್ಲ. ಆದರೂ ಏಳು ಮಂದಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದು, ಅವರನ್ನೂ ಸಹ ಪರೀಕ್ಷೆಗೆ ಒಳಪಡಿಸಲಾಗಿದೆ" ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದರು.
"ಏಳು ಮಂದಿ ಪ್ರಾಥಮಿಕ ಸಂಪರ್ಕಿತರಲ್ಲಿ ಮೂವರಿಗೆ ಪಾಸಿಟಿವ್ ಬಂದಿದೆ. ಆದರೆ, ಅವರಲ್ಲಿ ಪತ್ತೆಯಾಗಿರುವ ವೈರಸ್ ರೂಪಾಂತರಗೊಂಡಿರುವ ಸೋಂಕು ಅಥವ ಸಾಮಾನ್ಯ ಸೋಂಕು ಎಂಬುದು ಇನ್ನೂ ತಿಳಿದು ಬರಬೇಕಿದೆ" ಎಂದು ಆರೋಗ್ಯ ಸಚಿವರು ವಿವರಣೆ ನೀಡಿದ್ದಾರೆ.