ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ವಿರುದ್ಧ ದೂರು ದಾಖಲು
ಶಿವಮೊಗ್ಗ, ಡಿಸೆಂಬರ್ 3: ಇದೇ ಡಿಸೆಂಬರ್ 5 ರಂದು ಕನ್ನಡಪರ ಸಂಘಟನೆಗಳು "ಕರ್ನಾಟಕ ಬಂದ್' ಮಾಡಲು ಕರೆ ನೀಡಿವೆ. ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಬಂದ್ ಯಶಸ್ವಿಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಲು ಮನವಿ ಮಾಡಿವೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೊಲೆಗೆ ಪ್ರಚೋದನೆ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ವಿರುದ್ಧ ದೂರು ದಾಖಲಿಸಲಾಗಿದೆ.
ಕಾಳಿ ಸ್ವಾಮೀಜಿ ಮೇಲೆ ಬಿತ್ತು ವಂಚನೆ ಪ್ರಕರಣ
ಕೊಲೆಗೆ ಪ್ರಚೋದನಾ ಹೇಳಿಕೆ ನೀಡಿರುವ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಆಗ್ರಹಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಋಷಿಕುಮಾರ ಸ್ವಾಮೀಜಿ, ""ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿ ನೀಡಿರುವ ಮರಾಠ ಪ್ರಾಧಿಕಾರಕ್ಕೆ 50 ಕೋಟಿ ರೂ., ಕನ್ನಡ ಪ್ರಾಧಿಕಾರಕ್ಕೆ 5 ಕೋಟಿ ರೂ. ಅನುದಾನದ ನೀಡಿದ್ದು, ಇದರ ವಿರುದ್ಧ ಡಿ.5 ರಂದು ಎಲ್ಲಾ ಕನ್ನಡಪರ ಸಂಘಟನೆ ವತಿಯಿಂದ ಕರ್ನಾಟಕ ಬಂದ್ ಗೆ ಕರೆ ನೀಡಿವೆ.''
""ಕನ್ನಡಪರ ಸಂಘಟನೆಗಳು ಬಂದ್ ಮಾಡಿಸಲು ಬಂದರೆ ಇವರನ್ನು ಕಲ್ಲಿನಿಂದ ಹೊಡೆದು ಓಡಿಸಿ, ಇಂತವರನ್ನು ಶೂಟೌಟ್ ಮಾಡಿ'' ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಆರೋಪಿಸಿದೆ.
ಸಮಾಜದಲ್ಲಿ ಅಶಾಂತಿ, ದೊಂಬಿ, ಗಲಭೆಗೆ ಪ್ರಚೋದನೆ ನೀಡಿರುವ ಇಂತಹ ಸ್ವಾಮೀಜಿ ಮಾತಿಗೆ, ಕರ್ನಾಟಕದ ಜನತೆ ಕಿವಿ ಕೊಡಬೇಡಿ. ಇಂತಹ ಪ್ರಚೋದನಕಾರಿ ಹೇಳಿಕೆ ನೀಡಿರುವ ಸ್ವಾಮೀಜಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ವತಿಯಿಂದ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.