ಶಿವಮೊಗ್ಗ ಕಲ್ಲು ತೂರಾಟ: ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಧಕ್ಕೆ ತಂದರೆ ಸರ್ಕಾರ ಸಹಿಸಲ್ಲ ಎಂದ ಸಿಎಂ ಸಿದ್ದರಾಮಯ್ಯ
ಶಿವಮೊಗ್ಗ, ಅಕ್ಟೋಬರ್ 02: ಮಲೆನಾಡು ಶಿವಮೊಗ್ಗದಲ್ಲಿ ಧರ್ಮಕ್ಕೆ ಸಂಬಂಧಿಸಿದ ಹಬ್ಬಗಳು ಬಂತೆಂದರೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಲೇಬೇಕಾಗುತ್ತದೆ. ಆದರೆ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆಯೇ ಕೆಲವು ಕಿಡಿಗೇಡಿಗಳಿಂದ ಅಹಿತಕರ ಘಟನೆ ನಡೆದು ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತದೆ. ಈಗ ಅಂತಹದ್ದೇ ಪರಿಸ್ಥಿತಿ ಶಿವಮೊಗ್ಗದಲ್ಲಿದೆ.
ಈದ್ ಮಿಲಾದ್ ಮೆರವಣಿಗೆ ವೇಳೆ ನಿನ್ನೆ(ಅಕ್ಟೋಬರ್ 01)ರ ಸಂಜೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಶಿವಮೊಗ್ಗದ ಶಾಂತಿನಗರದ ರಾಗಿಗುಡ್ಡ ಪ್ರದೇಶದಲ್ಲಿ ಗಲಾಟೆ ನಡೆದಿದೆ. ಕೂಡಲೇ ಪೊಲೀಸರು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಯಿಸಿದ್ದಾರೆ. 'ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಧಕ್ಕೆ ತರುವುದು, ಕಲ್ಲು ತೂರುವುದು ಕಾನೂನು ಬಾಹಿರ. ಇಂಥ ಚಟುವಟಿಕೆಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ, ಇಂತಹ ಕೃತ್ಯಗಳನ್ನು ಖಂಡಿತಾ ಹತ್ತಿಕ್ಕುತ್ತೇವೆ.
ಶಿವಮೊಗ್ಗ ನಗರ ಸಂಪೂರ್ಣ ನಿಯಂತ್ರಣದಲ್ಲಿದೆ. ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡಿದ್ದರಿಂದ ನಗರದಲ್ಲಿ ಶಾಂತಿ ನೆಲೆಸಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರ ಮೇಲೂ ಕಲ್ಲು ಎಸೆದಿದ್ದು, ಅನಿವಾರ್ಯವಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಗಲಾಟೆಗೆ ಕಾರಣಕರ್ತರಾಗಿರುವ 43 ದುಷ್ಕರ್ಮಿಗಳನ್ನು ಬಂದಿಸಿದ್ದು ಅವರ ಮೇಲೆ ಮೊಕದ್ದಮೆಗಳನ್ನು ಹೂಡಲಾಗುತ್ತಿದೆ' ಎಂದು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ ಏನು..?
ಈದ್ ಮಿಲಾದ್ ಅಂಗವಾಗಿ ಶಿವಮೊಗ್ಗದಲ್ಲಿ ಬೃಹತ್ ಮಟ್ಟದಲ್ಲಿ ಮೆರವಣಿಗೆಯನ್ನು ಆಯೋಜನೆ ಮಾಡಲಾಗಿತ್ತು. ಮೆರವಣಿಗೆ ರಾಗಿಗುಡ್ಡ ತಲುಪಿದ ವೇಳೆ ಕಟೌಟ್ ವಿಚಾರವಾಗಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಘರ್ಷಣೆಯಾಗಿದೆ ಎಂದು ವರದಿಯಾಗಿದೆ.
ಈ ವೇಳೆ ಕೆಲ ಕಿಡಿಗೇಡಿಗಗಳು ಕಲ್ಲು ತೂರಾಟ ನಡೆಸಿದ್ದಾರೆ. ಎರಡು ಕೋಮಿನ ಯುವಕರ ಗುಂಪಿನಿಂದ ಕಲ್ಲು ತೂರಾಟ ನಡೆದ ಪರಿಣಾಮ 7ಕ್ಕೂ ಹೆಚ್ಚು ಕಾರುಗಳು ಹಾಗೂ ಮನೆಯ ಕಿಟಕಿ ಗಾಜುಗಳು ಜಖಂಗೊಂಡಿವೆ. ಕಲ್ಲು ತೂರಾಟದಿಂದ ಕೆಲವರಿಗೆ ಗಂಭೀರ ಗಾಯಗಳು ಸಹ ಆಗಿದ್ದು, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.












Click it and Unblock the Notifications