ಶಿವಮೊಗ್ಗ; ಚಂದ್ರಗುತ್ತಿ ದೇವಾಲಯ ಅಭಿವೃದ್ಧಿಗೆ ಪ್ರಾಧಿಕಾರ ರಚನೆ?
ಶಿವಮೊಗ್ಗ, ನವೆಂಬರ್ 30: ಕರ್ನಾಟಕ ಸರ್ಕಾರ ರಾಜ್ಯದ ವಿವಿಧ ದೇವಾಲಯಗಳ ಅಭಿವೃದ್ಧಿಗೆ ಪ್ರಾಧಿಕಾರವನ್ನು ರಚನೆ ಮಾಡಿದೆ. ಇದರಿಂದಾಗಿ ದೇವಾಲಯ ಅಭಿವೃದ್ಧಿಯಾಗುವ ಜೊತೆಗೆ ಗ್ರಾಮದ ಸುತ್ತಮುತ್ತಲಿನ ಪ್ರವಾಸೋದ್ಯಮ, ಆರ್ಥಿಕ ಚಟುವಟಿಕೆಗೆ ಸಹ ಅನುಕೂಲವಾಗಿದೆ. ಶಿವಮೊಗ್ಗ ಜಿಲ್ಲೆಯ ಪುರಾಣ ಪ್ರಸಿದ್ಧ ದೇವಾಲಯವೊಂದರ ಅಭಿವೃದ್ಧಿಗೆ ಈಗ ಪ್ರಾಧಿಕಾರ ರಚನೆ ಮಾಡುವ ಚಿಂತನೆ ಸರ್ಕಾರದ ಮುಂದಿದೆ.
ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ರಾಜ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು. ಸೊರಬ ಕ್ಷೇತ್ರದ ಶಾಸಕರು ಆಗಿರುವ ಅವರು ಚಂದ್ರಗುತ್ತಿ ದೇವಾಲಯ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡುವ ಕುರಿತು ಮಾತನಾಡಿದರು.

ಸಚಿವರು ಮಾತನಾಡಿ, "ಮಲೆನಾಡಿನ ಜನರ ಆರಾಧ್ಯದೈವ ಶ್ರೀ ರೇಣುಕಾದೇವಿ ಚಂದ್ರಗುತ್ತಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ, 12ನೇ ಶತಮಾನದ ಪ್ರಸಿದ್ಧ ಶರಣ ಹಾಗೂ ಮೊದಲ ಸಂಸತ್ತಿನ ಮೊದಲ ಪೀಠಾಧ್ಯಕ್ಷ ಅಲ್ಲಮಪ್ರಭುದೇವರ ಜನ್ಮಸ್ಥಳ ಬಳ್ಳಿಗಾವೆ ಹಾಗೂ ಶಿವಮೊಗ್ಗ ನಗರದಲ್ಲಿ ನೂತನವಾಗಿ ಹೆಸರಿಸಲಾದ ಅಲ್ಲಮಪ್ರಭು ಮೈದಾನವನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವುದಾಗಿ" ತಿಳಿಸಿದರು.
"ಚಂದ್ರಗುತ್ತಿ ಧರ್ಮಕ್ಷೇತ್ರದ ದೇವಾಲಯದ ಸರ್ವಾಂಗೀಣ ವಿಕಾಸ ಹಾಗೂ ಪ್ರವಾಸಿತಾಣವನ್ನಾಗಿ ಪರಿವರ್ತಿಸಲು ಉದ್ದೇಶಿಸಿದ್ದು, ಅರಣ್ಯ ಇಲಾಖೆಯ ಅನುಮೋದನೆಗಾಗಿ ಕಡತ ಮಂಡಿಸಲಾಗಿದೆ. ಈ ಸಂಬಂಧ ಅರಣ್ಯ ಇಲಾಖಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ" ಎಂದು ಹೇಳಿದರು.
ಐತಿಹಾಸಿಕ ಸ್ಥಳ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿರುವ ಚಂದ್ರಗುತ್ತಿ ದೇವಾಲಯ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಸೊರಬ ಪಟ್ಟಣದಿಂದ ಸುಮಾರು 17 ಕಿ. ಮೀ. ದೂರದಲ್ಲಿದೆ. ಸಹ್ಯಾದ್ರಿ ಪರ್ತತ ಶ್ರೇಣಿಯ ಕಲ್ಲಿನ ಮೇಲೆ ಈ ದೇವಾಲಯವಿದೆ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿರುವ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.
ಪರುಶರಾಮನ ತಾಯಿಯಾದ ರೇಣುಕಾಂಬೆಗೆ ಅರ್ಪಿತವಾದ ಸ್ಥಳ ಇದಾಗಿದ್ದು, ಇಲ್ಲಿ ರೇಣುಕಾಂಬೆ ದೇವಾಲಯವಿದೆ. ಗುಹೆಯೊಳಗೆ ದೇವಾಲಯವಿದ್ದು, ಇಲ್ಲಿ ಪೂಜಿಸ್ಪಡುವ ದೇವತೆಯನ್ನು ಗುತ್ತಿಯಮ್ಮ ಎಂದು ಸಹ ಭಕ್ತರು ಕರೆಯುತ್ತಾರೆ. ವರದಾ ನದಿಯ ಸಮೀಪದಲ್ಲಿ ದೇವಾಲಯವಿದ್ದು, ಇಲ್ಲಿಂದ ಚಂದ್ರಗುತ್ತಿ ಕೋಟೆ ಹತ್ತಿ ಚಾರಣವನ್ನು ಸಹ ಕೈಗೊಳ್ಳಬಹುದು.
ಪರುಶರಾಮ ತಮ್ಮ ತಾಯಿ ರೇಣುಕಾಬೆಂಯ ತಲೆ ಕಡಿದ ಜಾಗವೇ ಚಂದ್ರಗುತ್ತಿ ಎಂದು ಇತಿಹಾಸ ಹೇಳುತ್ತದೆ. ಆಮೆ ಆಕಾರದ ಬೃಹತ್ ಕಲ್ಲಿನ ಮೇಲೆ ಇಲ್ಲಿನ ದೇವಾಲಯವಿದೆ. ಮಾರ್ಚ್ ತಿಂಗಳಿನಲ್ಲಿ ಚಂದ್ರಗುತ್ತಿಯಲ್ಲಿ ಜಾತ್ರೆ ನಡೆಯುತ್ತಿದೆ. ಸಾವಿರಾರು ಭಕ್ತರು ದೇವಿಗೆ ಹಕರೆ ಹೊತ್ತು, ಇಲ್ಲಿಗೆ ಆಗಮಿಸಿ ದರ್ಶವನ್ನು ಪಡೆಯುತ್ತಾರೆ. ಉತ್ತರ ಕರ್ನಾಟಕ ಭಾಗದ ಜನರು ಪಾದಯಾತ್ರೆ ಮೂಲಕ ಇಲ್ಲಿಗೆ ಆಗಮಿಸಲಿದ್ದು, ಇದನ್ನು ಎರಡನೇ ಸವದತ್ತಿ ಎಂದು ಸಹ ಕರೆಯುತ್ತಾರೆ.
ಆಗಸ್ಟ್‌ನಲ್ಲಿ ಚಂದ್ರಗುತ್ತಿ ದೇವಾಲಯಕ್ಕೆ ಭೇಟಿ ನೀಡಿದ್ದ ಸಚಿವ ಮಧು ಬಂಗಾರಪ್ಪ, "ಐತಿಹಾಸಿಕ ಮಹತ್ವವಿರುವ ರೇಣುಕಾಂಬ ದೇವಾಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಆಗ ಸರ್ಕಾರಕ್ಕೆ ಇನ್ನೂ ಹೆಚ್ಚಿನ ಆದಾಯ ಬರುತ್ತದೆ. ಅನುದಾನ ತಂದು ದೇವಾಲಯ ಅಭಿವೃದ್ಧಿ ಮಾಡಲಾಗುತ್ತದೆ. ಇದಕ್ಕೆ ಎಲ್ಲಾ ಇಲಾಖೆಗಳು ಸ್ಪಂದಿಸಬೇಕು" ಎಂದು ಹೇಳಿದ್ದರು.
ದೇವಾಲಯದಲ್ಲಿ ಏರ್ಪಡಿಸಿದ್ದ ದೇವಾಲಯದ ಮೂಲ ಸೌಲಭ್ಯ ಅಭಿವೃದ್ಧಿ ಕಾಮಗಾರಿ ಸಭೆಯಲ್ಲಿ ಮಾತನಾಡಿದ್ದ ಸಚಿವರು, "ದೇವಾಲಯ ಸೋರುವುದು, ಆವರಣದಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ನೆರಳಿನ ವ್ಯವಸ್ಥೆ, ಕುಡಿಯುವ ನೀರು ಪೂರೈಕೆ, ಯಾಗ ಶಾಲೆ, ಸೇವಾ ಕೌಂಟರ್ ನಿರ್ಮಾಣ ಮುಂತಾದ ಸೌಲಭ್ಯಗಳನ್ನು ಇಲ್ಲಿನ ಸಂಸ್ಕೃತಿಗೆ ಧಕ್ಕೆ ಆಗಂದತೆ ನಿರ್ಮಾಣ ಮಾಡಬೇಕು" ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.
ಸದ್ಯ ಚಂದ್ರಗುತ್ತಿ ದೇವಾಲಯದ ಆಡಳಿತವನ್ನು ಆಡಳಿತ ಮಂಡಳಿ ನೋಡಿಕೊಳ್ಳುತ್ತಿದೆ. 2024ರಲ್ಲಿ ಜಾತ್ರೆ ಮತ್ತು ಹುಣ್ಣಿಮೆಯ ನಂತರದಲ್ಲಿ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಾಲಯದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಕಾಣಿಕೆ ಹುಂಡಿಯಲ್ಲಿ 43,61,080, ರೂ. ಸಂಗ್ರಹವಾಗಿಗಿತ್ತು. ಕಳೆದ ವರ್ಷಕ್ಕಿಂತ ಹೆಚ್ಚಿನ ಹಣ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಶಿವಮೊಗ್ಗದ ವಿವಿಧ ಯೋಜನೆಗಳು: ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ನಗರದ ವಿವಿಧ ಯೋಜನೆಗಳ ಕುರಿತು ಸಭೆಯಲ್ಲಿ ಮಾತನಾಡಿದರು. ಶಿವಮೊಗ್ಗ ನಗರದ ಅಲ್ಲಮಪ್ರಭು ಮೈದಾನದ ಅಭಿವೃದ್ಧಿ ಲೋಕೋಪಯೋಗಿ ಇಲಾಖೆಯು ಸುಮಾರು 5ಕೋಟಿ ರೂ. ಗಳನ್ನು ಕಾಯ್ದಿರಿಸಿದೆ. ಈ ಅನುದಾನಕ್ಕೆ ಸಹಕಾರಿಯಾಗುವಂತೆ ಸರ್ಕಾರದಿಂದ ಇನ್ನಷ್ಟು ಅನುದಾನವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುತ್ತದೆ. ಮೈದಾನವನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ, ಸಲ್ಲಿಸುವಂತೆ ಸಚಿವರು ಲೋಕೋಪಯೋಗಿ ಇಲಾಖೆಯ ಅಭಿಯಂತರರಿಗೆ ಸೂಚಿಸಿದರು.
ಶಿವಮೊಗ್ಗ ನಗರದಲ್ಲಿ ಫುಡ್‌ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ದೊರೆತಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಿಗೆ ಸಚಿವರು ಸೂಚಿಸಿದರು. ಅಲ್ಲದೇ 2025ರ ಮುಂದಿನ ಜನವರಿ ಅಂತ್ಯದೊಳಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನದ ನೈಟ್ ಲ್ಯಾಂಡಿಂಗ್ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಇದರಿಂದಾಗಿ ವಿಮಾನ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.
ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಕಟ್ಟಡ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಕಟ್ಟಡಗಳನ್ನು ಒಂದೇ ಕಟ್ಟಡ ಸಂಕೀರ್ಣದಲ್ಲಿ ನಿರ್ಮಿಸಲು ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಹಿಂದಿನ ನಿವೇಶನವನ್ನು ಕಾಯ್ದಿರಿಸಲಾಗಿದ್ದು, ಜಿಲ್ಲೆಯ ಜನರಿಗೆ ಎಲ್ಲಾ ರೀತಿಯ ಅನುಕೂಲವಾಗುವಂತೆ ಅತ್ಯಾಧುನಿಕ ಹಾಗೂ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲು ಮುಂದಿನ ಬಜೆಟ್‌ನಲ್ಲಿ ಅಗತ್ಯ ಅನುದಾನ ಕಾಯ್ದಿರಿಸಲು ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದು ಸಚಿವರು ಭರವಸೆ ನೀಡಿದರು.












Click it and Unblock the Notifications