ಶಿವಮೊಗ್ಗದ ಪ್ರತಿ ಮನೆಗೂ ಆಯುಷ್ ಮಂತ್ರಾಲಯ ಹೇಳಿದ ಔಷಧ
ಶಿವಮೊಗ್ಗ, ಜುಲೈ 27 : " ಶಿವಮೊಗ್ಗ ನಗರದ ಪ್ರತಿ ಕುಟುಂಬದ ಪ್ರತಿ ವ್ಯಕ್ತಿಗೆ ಕೊರೊನಾ ಸೋಂಕು ನಿರೋಧಕ ಹಾಗೂ ಆರೋಗ್ಯ ಶಕ್ತಿ ವೃದ್ಧಿಸುವ ಆಯುಷ್ ಮಂತ್ರಾಲಯ ಶಿಫಾರಸು ಮಾಡಿರುವ ಆಯುರ್ವೇದೀಯ ಔಷಧಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ" ಎಂದು ಸಚಿವ ಮತ್ತು ಶಿವಮೊಗ್ಗ ನಗರ ಶಾಸಕ ಕೆ. ಎಸ್. ಈಶ್ವರಪ್ಪ ಹೇಳಿದರು.
Recommended Video
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ, "ಸುಮಾರು 4 ಲಕ್ಷ ವ್ಯಕ್ತಿಗಳಿಗೆ ಉಚಿತವಾಗಿ ಔಷಧ ವಿತರಿಸಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮವನ್ನು ಶಿವಮೊಗ್ಗದ ಕೋವಿಡ್ ಸುರಕ್ಷಾ ಪಡೆ ವತಿಯಿಂದ ಆಯೋಜಿಸಲಾಗಿದ್ದು, ದೇಶದಲ್ಲೇ ಅತೀ ಮಹತ್ವದ ಮೊದಲ ಕಾರ್ಯಕ್ರಮ ಇದಾಗಿದೆ" ಎಂದರು.
"ಮೊದಲ ಹಂತವಾಗಿ ನಗರದ ಸುಮಾರು 85,000 ಕುಟುಂಬಗಳ 4 ಲಕ್ಷ ಜನರಿಗೆ 4 ಕೋಟಿ ರೂ.ಗಳ ಮೌಲ್ಯದ ಆಯುರ್ವೇದೀಯ ಔಷಧಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಪ್ರತಿ ಕಿಟ್ ಸುಮಾರು 350 ರೂ. ಬೆಲೆಯದ್ದು. ಈ ಕಿಟ್‍ನಲ್ಲಿ 3 ರೀತಿಯ ಔಷಧಗಳಿದ್ದು, ಅವುಗಳ ಬಳಕೆಯ ಕುರಿತು ವಿವರವಾದ ಮಾಹಿತಿಯನ್ನು ಕಿಟ್‍ನಲ್ಲಿ ನಮೂದಿಸಲಾಗಿದೆ" ಎಂದು ಹೇಳಿದರು.

"ಔಷಧದ ಕಿಟ್ ಪಡೆಯಲು ಆಧಾರ್ ಕಾರ್ಡ್ ಹೊಂದಿರುವುದು ಅಗತ್ಯವಾಗಿದೆ. ಇದರಿಂದಾಗಿ ಅಗತ್ಯಕ್ಕಿಂತ ಹೆಚ್ಚಿನ ಔಷಧಗಳನ್ನು ಪಡೆಯುವುದು ಹಾಗೂ ಎರೆಡೆರೆಡು ಬಾರಿ ಔಷಧ ಪಡೆಯವುದು ಅಸಾಧ್ಯವಾಗಲಿದೆ. ಸುಮಾರು 4 ಕೋಟಿ ರೂ.ಗಳ ಮೌಲ್ಯದ ಔಷಧಗಳನ್ನು ನಗರದ ಎಲ್ಲರಿಗೂ ಉಚಿತವಾಗಿ ವಿತರಿಸಲಾಗುತ್ತಿದೆ" ಎಂದು ಈಶ್ವರಪ್ಪ ವಿವರಿಸಿದರು.

"ಈ ಕಿಟ್‍ನಲ್ಲಿ ಎರಡು ರೀತಿಯ ಗುಳಿಗೆಗಳು ಹಾಗೂ ಕಷಾಯ ಪುಡಿ ಇರಲಿದೆ. ಈ ಆಯುರ್ವೇದ ಔಷಧಗಳ ವಿತರಣಾ ಕಾರ್ಯಕ್ಕೆ ಜುಲೈ 29ರಂದು ಬೆಳಗ್ಗೆ 11ಕ್ಕೆ ಕುವೆಂಪು ರಂಗಮಂದಿರದಲ್ಲಿ ಖ್ಯಾತ ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಅವರು ಚಾಲನೆ ನೀಡಲಿದ್ದಾರೆ. ಔಷಧ ವಿತರಣೆಯ ಮೊದಲ ಕಾರ್ಯಕ್ರಮ ಸಂಜೆ 4ರಿಂದ ಡಾ. ಸಿ. ಎಲ್. ರಾಮಣ್ಣ ರಸ್ತೆಯಿಂದ ಆರಂಭಗೊಳ್ಳಲಿದೆ" ಎಂದು ಈಶ್ವರಪ್ಪ ತಿಳಿಸಿದರು.












Click it and Unblock the Notifications