Shivrajkumar: ಹಾವೇರಿ ಅಪಘಾತ ಸಂತ್ರಸ್ತರಿಗೆ 13 ಲಕ್ಷ ಹಣ ನೀಡಿ ಮಾನವೀಯತೆ ಮೆರೆದ ಶಿವರಾಜ್ ಕುಮಾರ್ ದಂಪತಿ
ಶಿವಮೊಗ್ಗ, ಜುಲೈ. 08: ಕಳೆದ ತಿಂಗಳು ಹಾವೇರಿ ಬಳಿ ನಡೆದಿದ್ದ ಭೀಕರ ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆಯ ಎಮ್ಮೆಹಟ್ಟಿ ಗ್ರಾಮದ 13 ಜನ ಮೃತಪಟ್ಟಿದ್ದರು. ಈ ದುರಂತ ಘಟನೆಗೆ ಇಡೀ ಕರುನಾಡು ಮರುಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಹಾರ ಘೋಷಿಸಿದ್ದರು. ಈಗ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮಾನವೀಯತೆ ಮೆರೆದಿದ್ದಾರೆ.
ಪತ್ನಿ, ಕಾಂಗ್ರೆಸ್ ನಾಯಕಿ ಗೀತಾ ಶಿವರಾಜ್ ಕುಮಾರ್ ಮತ್ತು ಭದ್ರಾವತಿ ಶಾಸಕ ಸಂಗಮೇಶ್ ಜೊತೆಗೆ ಶಿವಮೊಗ್ಗದ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನಾ ಹೇಳಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳ ಜೊತೆಗೆ ಮಾತನಾಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಹಣ ನೀಡಿದ್ದಾರೆ ಶಿವಣ್ಣ ದಂಪತಿ.

13 ಲಕ್ಷ ಹಣ ನೀಡಿದ ನಟ ಶಿವರಾಜ್ ಕುಮಾರ್ ದಂಪತಿ
ಹಾವೇರಿ ಅಪಘಾತ ಸಂತ್ರಸ್ತರನ್ನು ಮಾತನಾಡಿಸಿ ನಗದು ಮೂಲಕ 13 ಲಕ್ಷ ರೂಪಾಯಿ ಹಣ ನೀಡಿದ್ದಾರೆ ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್. ಹಣದ ಕಟ್ಟುಗಳನ್ನು ಇಟ್ಟಿದ್ದ ಕವರ್‌ಗಳನ್ನು ಕುಟುಂಬಸ್ಥರಿಗೆ ನೀಡಿದ್ದಾರೆ. ಜೊತೆಗೆ ಅಪಘಾತದಲ್ಲಿ ಗಾಯಗೊಂಡಿರುವ ಅರ್ಪಿತಾ ಅವರನ್ನು ಮಾತಾನಾಡಿಸಿ ಧೈರ್ಯ ತುಂಬಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, "ದುರ್ಘಟನೆ ನೋಡಿ ಬರೋಕೆ ಧೈರ್ಯ ಹೇಳೋಕೆ ಕಷ್ಟ ಆಯ್ತು. ಒಂದು ನಿಮಿಷದಲ್ಲಿ 13 ಜನ ಸಾವನಪ್ಪಿದ್ದಾರೆ. ಸಾವಿನ ದುಃಖ ತಡೆದುಕೊಳ್ಳಲು ದೇವರು ಅವರಿಗೆ ಶಕ್ತಿ ತುಂಬಲಿ. ಮಾನಸ ಕಳೆದುಕೊಂಡಿದ್ದು ತುಂಬಾ ದೊಡ್ಡ ನಷ್ಟ. ಊರಿನ ಗ್ರಾಮಸ್ಥರು ಆ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ" ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

"ಕುಟುಂಬಸ್ಥರ ನೆರವಿಗೆ ಬರೋಕೆ ಇಲ್ಲಿಗೆ ಬಂದಿದ್ದೇವೆ. ನಮ್ಮ ಕೈ ಯಲ್ಲಿ ಆದಷ್ಟು ಸಹಾಯ ಮಾಡಿದ್ದೇವೆ. ಇದು ಮಾತಾನಾಡುವ ಸಮಯವಲ್ಲ. ಕುಟುಂಬಸ್ಥರಿಗೆ ಸಮಾಧಾನ ಮಾಡೋದು ಕಷ್ಟ. ಊರಿನ ಗ್ರಾಮಸ್ಥರು ಆ ಕುಟುಂಬದ ಜೊತೆ ನಿಂತಿದ್ದಾರೆ. ಇಲ್ಲಿಗೆ ಬಂದಾಗ ತುಂಬಾ ಬೇಜಾರ್ ಆಯ್ತು. ತುಂಬಾ ದುಃಖ ಆಯ್ತು. ವಿಶೇಷ ಚೇತನ ಅರ್ಪಿತಾಗೆ ದೇವರು ಶಕ್ತಿ ಕೊಡಲಿ. ನಾವು ಕುಟುಂಬದ ಜೊತೆ ಇರುತ್ತೇವೆ" ಎಂದ ಶಿವಮೊಗ್ಗದ ಎಮ್ಮೆಹಟ್ಟಿ ಗ್ರಾಮದಲ್ಲಿ ಶಿವರಾಜ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಶಿವಣ್ಣ ದಂಪತಿ ಜೊತೆಗೆ ಎಮ್ಮೆಹಟ್ಟಿ ಗ್ರಾಮಕ್ಕೆ ಬಂದಿದ್ದ ಶಾಸಕ ಬಿ.ಕೆ.ಸಂಗಮೇಶ್, " ಶಿವಣ್ಣ ದಂಪತಿ ಹೃದಯ ಶ್ರೀಮಂತಿಕೆ ತೋರಿದ್ದಾರೆ. ಗ್ರಾಮಕ್ಕೆ ಬಂದು 13 ಲಕ್ಷ ಹಣ ನೀಡಿದ್ದಾರೆ. ಈ ಕಾಲದಲ್ಲಿ ಯಾರು ಕೂಡ ಸಹಾಯ ಮಾಡೋಲ್ಲ. ಅಂತಹದರಲ್ಲಿ ಗ್ರಾಮಕ್ಕೆ ಬಂದು ಮೃತರ ಕುಟುಂಬಸ್ಥರಿಗೆ ಸಹಾಯ ಮಾಡಿದ್ದಾರೆ. ಅವರ ಕಾರ್ಯಕ್ಕೆ ಧನ್ಯವಾದ ತಿಳಿಸುತ್ತೇನೆ" ಎಂದಿದ್ದಾರೆ.












Click it and Unblock the Notifications