ಅಯ್ಯಯ್ಯೋ..! ಶಿವಮೊಗ್ಗದಲ್ಲಿ ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವು.. ಆಗಿದ್ದೇನು..?
ಶಿವಮೊಗ್ಗ, ಆಗಸ್ಟ್ 09: ಮನೆಯಲ್ಲಿ ಸಾಕುವ ಪ್ರಾಣಿಗಳು ಒಮ್ಮೊಮ್ಮೆ ಜೀವಕ್ಕೆ ಕಂಟಕ ತರುತ್ತವೆ ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ. ಈಗ ಇದೇ ರೀತಿಯ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದ್ದು, ಸಾಕಿದ ಬೆಕ್ಕೊಂದು ಮನೆಯ ಮಹಿಳೆಯನ್ನು ಬಲಿ ಪಡೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ನಡೆದಿದೆ.
ಗಂಗೀಬಾಯಿ (50) ಮನೆಯ ಸಾಕು ಬೆಕ್ಕು ಕಚ್ಚಿ ಸಾವನ್ನಪ್ಪಿದ ಮಹಿಳೆ ಎಂದು ಗುರುತಿಸಲಾಗಿದೆ. ತರಲಘಟ್ಟದ ಗಂಗೀಬಾಯಿ ಎನ್ನುವವರಿಗೆ ಎರಡು ತಿಂಗಳ ಹಿಂದೆ ಮನೆಯಲ್ಲೇ ಮುದ್ದಾಗಿ ಸಾಕಿದ್ದ ಬೆಕ್ಕು ಕಚ್ಚಿತ್ತು ಎನ್ನಲಾಗಿದೆ. ಈ ಬೆಕ್ಕು ಮೊದಲು ತರಲಘಟ್ಟದ ಕ್ಯಾಂಪ್ನಲ್ಲಿರುವ ಯುವಕನ ಮೇಲೆ ದಾಳಿ ಮಾಡಿತ್ತು. ಬಳಿಕ ಮಹಿಳೆಯ ಮೇಲೂ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿತ್ತು ಎಂದು ತಿಳಿದು ಬಂದಿದೆ.

ಬೆಕ್ಕು ಕಚ್ಚಿದ ಪರಿಣಾಮ ಗಂಗೀಬಾಯಿ ರೇಬಿಸ್ ಕಾಯಿಲೆಗೆ ತುತ್ತಾಗಿದ್ದಳು. ಬೆಕ್ಕು ಕಚ್ಚಿದ ಬಳಿಕ ಮಹಿಳೆ ಐದು ಇಂಜೆಕ್ಷನ್ ತೆಗೆದುಕೊಳ್ಳಬೇಕಿತ್ತು. ಆದರೆ ಒಂದು ಇಂಜೆಕ್ಷನ್ ಪಡೆದು ಆರೋಗ್ಯವಾಗಿದ್ದೇನೆ ಎಂದುಕೊಂಡ ಗಂಗೀಬಾಯಿ ಉಳಿದ ನಾಲ್ಕು ಇಂಜೆಕ್ಷನ್ ತೆಗೆದುಕೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.
ಮೊದಲ ಇಂಜೆಕ್ಷನ್ ಪಡೆದ ಬಳಿಕ ಗಂಗೀಬಾಯಿ ಆರೋಗ್ಯ ಚೇತರಿಸಿಕೊಂಡಿದ್ದು, ಹುಷಾರಾದ ಬಳಿಕ ಗದ್ದೆಗೆ ನಾಟಿ ಮಾಡಲು ಹೋಗಿದ್ದಾರೆ. ನೀರು ಹಾಗೂ ಕೆಸರಿಗೆ ಇಳಿದ ಕಾರಣ ಬೆಕ್ಕು ಕಚ್ಚಿದ ಗಾಯ ಇನ್ನಷ್ಟು ಉಲ್ಬಣಗೊಂಡಿದೆ. ಜೊತೆಗೆ ರೇಬಿಸ್ ಕಾಯಿಲೆಯ ಲಕ್ಷಣಗಳು ಕೂಡ ಹೆಚ್ಚಾಗಿದ್ದು, ತೀವ್ರ ಅನಾರೋಗ್ಯ ಕಾಡಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಬಳಿಕ ಎಚ್ಚೆತ್ತುಕೊಂಡ ಜಿಲ್ಲಾ ಆರೋಗ್ಯ ಅಧಿಕಾರಿಗಳು ನಾಯಿ ಮಾತ್ರವಲ್ಲ ಬೆಕ್ಕು ಕಚ್ಚಿದರೂ ಸಹ ರೇಬಿಸ್ ರೋಗ ಬರುತ್ತದೆ ಎಂದು ತರಲಘಟ್ಟ ಜನರಿಗೆ ತಿಳಿ ಹೇಳಿದ್ದಾರೆ. ಅಲ್ಲದೇ ಒಂದು ವೇಳೆ ಮನೆಯ ಸಾಕು ಪ್ರಾಣಿಗಳು ಕಚ್ಚಿದರೆ ತಕ್ಷಣವೇ ಚಿಕಿತ್ಸೆ ಪಡೆಯುವಂತೆ ತಿಳಿಸಿದ್ದಾರೆ.












Click it and Unblock the Notifications