Shivamogga Rural Elections: ಶಿವಮೊಗ್ಗ ಗ್ರಾಮಾಂತರದ ಮೇಲೆ ಕಾಂಗ್ರೆಸ್, ಜೆಡಿಎಸ್ ಕಣ್ಣು!
ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರ ಶಿವಮೊಗ್ಗ ಗ್ರಾಮಾಂತರ. ಶಿವಮೊಗ್ಗ ನಗರ ಬೆಳೆಯುತ್ತಾ ಹೋದಂತೆ ಹೊಸ ವಿಧಾನಸಭಾ ಕ್ಷೇತ್ರ ರಚನೆಗೊಂಡಿತು. ಕೃಷಿಕರು ಹೆಚ್ಚಾಗಿ ಇರುವ, ಗ್ರಾಮಾಂತರ ಪ್ರದೇಶಗಳನ್ನು ಹೆಚ್ಚಾಗಿ ತನ್ನ ಒಡಲಲ್ಲಿ ಹೊಂದಿರುವ ಕ್ಷೇತ್ರವಿದು. ಹೊಳೆಹೊನ್ನೂರು ಮೀಸಲು ಕ್ಷೇತ್ರಕ್ಕೆ ಸೇರಿದ ಗ್ರಾಮಗಳು, ಭದ್ರಾವತಿ ತಾಲೂಕಿನ ಕೆಲವು ಗ್ರಾಮಗಳನ್ನು ಸೇರಿಸಿಕೊಂಡು 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಮಾಡುವಾಗ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ರಚನೆ ಮಾಡಲಾಯಿತು.
1978ರಲ್ಲಿ ರಚನೆಯಾದ ಹೊಳೆಹೊನ್ನೂರು ಕ್ಷೇತ್ರವನ್ನು ಒಳಗೊಂಡು, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಎರಡು ವಾರ್ಡ್‌ಗಳು, ಭದ್ರಾವತಿ ತಾಲೂಕಿನ ಕೆಲವು ಗ್ರಾಮಗಳು, ಹೊಳೆಹೊನ್ನೂರು, ತಿಮ್ಲಾಪುರ, ಬೊಮ್ಮನಕಟ್ಟೆ, ಮಾರಶೆಟ್ಟಿಹಳ್ಳಿ, ಯಡೇಹಳ್ಳಿ, ಭದ್ರಾಪುರ, ಬಸವಾಪುರ, ಅರೆಬಿಳಚಿ, ಅರಕೆರೆ ಮುಂತಾದ ಗ್ರಾಮಗಳು ಶಿವಮೊಗ್ಗ ಗ್ರಾಮಾಂತರ (ಎಸ್‌ಸಿ ಮೀಸಲು) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಶಿವಮೊಗ್ಗ ತಾಲೂಕಿನ ಕಸಬಾ, ನಿದಿಗೆ, ಹೊಳಲೂರು, ಹಾರನಹಳ್ಳಿ, ಕುಂಸಿ ಸೇರಿದಂತೆ ವಿವಿಧ ಹೋಬಳಿ ವ್ಯಾಪ್ತಿಯ ಗ್ರಾಮಗಳು ಕ್ಷೇತ್ರದ ವ್ಯಾಪ್ತಿಯಲ್ಲಿವೆ.

ತುಂಗಭದ್ರಾ ನದಿಯ ತಟದಲ್ಲಿರುವ ಕ್ಷೇತ್ರವಿದು ಕಣ್ಣು ಹಾಯಿಸಿದಷ್ಟು ಹಚ್ಚ ಹಸಿರಿನ ಭತ್ತದ ಗದ್ದೆಗಳು, ಅಡಿಕೆ ತೋಟಗಳನ್ನು ಕಾಣಬಹುದಾಗಿದೆ. ಭತ್ತ, ಅಡಿಕೆ, ಶುಂಠಿ ಇಲ್ಲಿನ ಪ್ರಮುಖ ಜೀವನಾಧಾರ ಬೆಳೆಗಳು. ಅಡಿಕೆ ಹಾಳೆಯ ಲೋಟ, ಪ್ಲೇಟು ತಯಾರಿಕೆಯ ಕೆಲವು ಘಟಕಗಳನ್ನು ಇಲ್ಲಿ ಕಾಣಬಹುದಾಗಿದೆ. ಲಂಬಾಣಿ ಸಮುದಾಯದವರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ವಿಶಿಷ್ಟ ಸಾಂಸ್ಕೃತಿಕ ಸೊಬಗನ್ನು ಇಲ್ಲಿ ಕಾಣಬಹುದಾಗಿದೆ. ಪ್ರವಾಸೋದ್ಯಮ ದೃಷ್ಟಿಯಿಂದ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮ, ತುಂಗ-ಭದ್ರಾ ನದಿಗಳ ಸಂಗಮ ಸ್ಥಳ ಕೂಡಲಿ ಸಹ ಗ್ರಾಮಾಂತರದ ವ್ಯಾಪ್ತಿಯಲ್ಲಿದೆ. ಮುಂಜಾನೆ ರೈತರು ಟ್ರಾಕ್ಟರ್ ಏರಿ ಹೊಲಕ್ಕೆ ಹೋದರೆ, ಯುವಕ/ ಯುವತಿಯರು ಬ್ಯಾಗು ಹಿಡಿದು ಶಿವಮೊಗ್ಗ ನಗರಕ್ಕೆ ಕೆಲಸಕ್ಕೆ ತೆರಳುತ್ತಾರೆ.
ಇದುವರೆಗೂ ಮೂರು ಚುನಾವಣೆಗಳನ್ನು ಮಾತ್ರ ಕಂಡಿರುವ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವವೂ ಇದೆ. 2008 ಮತ್ತು 2018ರಲ್ಲಿ ಬಿಜೆಪಿ ಮತ್ತು 2013ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದು ಬಂದ ಕ್ಷೇತ್ರವಿದು. ಬಿಜೆಪಿ, ಕೆಜೆಪಿ ಮತ ವಿಭಜನೆ ಕಾರಣದಿಂದಾಗಿ 2013ರಲ್ಲಿ ಜೆಡಿಎಸ್‌ನ ಶಾರದಾ ಪೂರ್ಯಾ ನಾಯ್ಕ್ ಗೆಲುವು ಪಡೆದರು. 2008 ಮತ್ತು 2018ರಲ್ಲಿ ಬಿಜೆಪಿ ಅಭ್ಯರ್ಥಿಗಳು ಬದಲಾದರು. ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ಕೆ. ಬಿ. ಅಶೋಕ ಕುಮಾರ್ ನಾಯ್ಕ್.

ರಾಜಕೀಯ ಇತಿಹಾಸ; ಶಿವಮೊಗ್ಗ ಗ್ರಾಮಾಂತರ ಕಂಡಿರುವುದು ಮೂರು ಚುನಾವಣೆ. ಆದರೆ ಕ್ಷೇತ್ರದಲ್ಲಿ ಪಕ್ಷದ ಬಾವುಟ ಹಾರಿಸಲಾಗಲಿಲ್ಲ ಎಂಬ ನೋವು ಕಾಂಗ್ರೆಸ್ ನಾಯಕರಲ್ಲಿದೆ. 2008ರಲ್ಲಿ ಕಾಂಗ್ರೆಸ್‌ನ ಕರಿಯಣ್ಣ 32,714 ಮತಗಳನ್ನು ಪಡೆದು 24,265 ಮತಗಳ ಅಂತದಲ್ಲಿ ಸೋತರು. 2 013ರ ಚುನಾವಣೆಯಲ್ಲಿ ಮತ್ತೆ ಕರಿಯಣ್ಣ 35,640 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು. 2018ರ ಚುನಾವಣೆಯಲ್ಲಿಯೂ ಕರಿಯಣ್ಣ 33,493 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು.
ಹಾಗೆ ನೋಡಿದರೆ ಶಿವಮೊಗ್ಗ ಗ್ರಾಮಾಂತರದಲ್ಲಿ ಜೆಡಿಎಸ್‌ನ ಪ್ರಭಾವ ಇದೆ. 2013ರಲ್ಲಿ ಜೆಡಿಎಸ್‌ನ ಶಾರದಾ ಪೂರ್ಯಾ ನಾಯ್ಕ್ 48,639 ಮತಗಳನ್ನು ಪಡೆದು ಕೆಜೆಪಿಯ ಜಿ. ಬಸವಣ್ಯಪ್ಪ ವಿರುದ್ಧ 1010 ಮತಗಳ ಅಂತದಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾದರು. 2018ರ ಚುನಾವಣೆಯಲ್ಲಿ ಶಾರದಾ ಪೂರ್ಯಾ ನಾಯ್ಕ್ 2ನೇ ಸ್ಥಾನಗಳಿಸಿದರು, ಪಡೆದ ಮತಗಳು 65,549 ಆಗಿತ್ತು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬೆಂಬಲಿಗರು ಹೆಚ್ಚಿದ್ದಾರೆ. ಆದ್ದರಿಂದ ಕ್ಷೇತ್ರದಲ್ಲಿ ಎರಡು ಬಾರಿ ಬಿಜೆಪಿ ಗೆದ್ದಿದೆ. 2013ರಲ್ಲಿ ಜೆಡಿಎಸ್ ಗೆದ್ದಿದ್ದು ಬಿಜೆಪಿ, ಕೆಜೆಪಿ ಗೊಂದಲದಿಂದ ಎಂಬುದು ಎಲ್ಲರಿಗೂ ಗೊತ್ತು. ಚುನಾವಣೆಯಲ್ಲಿ ಕೆಜೆಪಿಯ ಜಿ. ಬಸವಣ್ಯಪ್ಪ 38,530 ಮತಗಳನ್ನು ಪಡೆದು 2ನೇ ಸ್ಥಾನ ಪಡೆದರು. ಬಿಜೆಪಿಯ ಕೆ. ಜಿ. ಕುಮಾರಸ್ವಾಮಿ 12,435 ಮತಗಳನ್ನು ಪಡೆದರು. ಮತಗಳ ವಿಭಜನೆ ಕಾರಣದಿಂದ ಶಾರದಾ ಪೂರ್ಯಾ ನಾಯ್ಕ್ ಗೆಲುವು ಸಾಧಿಸಿದ್ದರು.
2018ರಲ್ಲಿ ಬಿಜೆಪಿ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿ ಕಣಕ್ಕಿಳಿಸಿತು. ಬಂಜಾರ ಸಮುದಾಯದ ಕೆ. ಬಿ. ಅಶೋಕ ಕುಮಾರ್ ನಾಯ್ಕ್ 69,326 ಮತಗಳನ್ನು ಪಡೆದು ಹಾಲಿ ಶಾಸಕಿಯನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾದರು. 2008ರಲ್ಲಿ ಬಿಜೆಪಿ 56,979 ಮತಗಳನ್ನು ಪಡೆದಿತ್ತು. ಅಂಕಿ ಅಂಶಗಳನ್ನು ನೋಡಿದರೆ ಬಿಜೆಪಿ ಕ್ಷೇತ್ರದಲ್ಲಿ ಭದ್ರ ನೆಲಗಟ್ಟು ಹೊಂದಿದೆ ಎಂಬುದು ತಿಳಿಯುತ್ತದೆ.
ಈ ಬಾರಿಯ ಚುನಾವಣೆ; ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. 2008ರಲ್ಲಿ 2ನೇ ಸ್ಥಾನ, 2013, 2018ರಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ ಪಕ್ಷ ಈ ಬಾರಿ ಕ್ಷೇತ್ರವನ್ನು ವಶಕ್ಕೆ ಪಡೆಯಲು ತಂತ್ರ ರೂಪಿಸಿದೆ. ಎನ್. ರವಿ ಕುಮಾರ್, ಡಾ. ಶ್ರೀನಿವಾಸ್ ಕರಿಯಣ್ಣ ಪಕ್ಷದ ಟಿಕೆಟ್ ಬಯಸಿದ್ದಾರೆ, ಟಿಕೆಟ್ ಖಚಿತ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಎನ್. ರವಿ ಕುಮಾರ್ ಚುರುಕಿನಿಂದ ಪಕ್ಷ ಸಂಘಟನೆ ಮಾಡಿದ್ದಾರೆ. ಬೋವಿ ಸಮಾವೇಶ ಆಯೋಜನೆ ಮಾಡಿದಾಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕರೆಸಿದ್ದರು. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವಕ್ತಾರೆ ಪಲ್ಲವಿ ಸಹ ಟಿಕೆಟ್ ಬಯಸಿದ್ದಾರೆ. ಬಲದೇವ ಕೃಷ್ಣ, ಭೀಮಪ್ಪ, ಮಧುಸೂದನ್ ಸಹ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.
Shivamogga Rural Karnataka
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಕೆ. ಬಿ. ಅಶೋಕ ಕುಮಾರ ನಾಯ್ಕ್ (ಬಿಜೆಪಿ) | 69,326 | ಶಾರದಾ ಪೂರ್ಯಾ ನಾಯ್ಕ್ (ಜೆಡಿಎಸ್) | 65,549 |
| 2013 | ಶಾರದಾ ಪೂರ್ಯಾ ನಾಯ್ಕ್ (ಜೆಡಿಎಸ್) | 48,639 | ಜಿ. ಬಸವಣ್ಯಪ್ಪ (ಕೆಜೆಪಿ) | 38,530 |
| 2008 | ಕೆ. ಜಿ. ಕುಮಾರಸ್ವಾಮಿ (ಬಿಜೆಪಿ) | 56,979 | ಕರಿಯಣ್ಣ (ಕಾಂಗ್ರೆಸ್) | 32,714 |
ಜೆಡಿಎಸ್‌ನಿಂದ ಶಾರದಾ ಪೂರ್ಯಾ ನಾಯ್ಕ್ ಅವರೇ ಅಭ್ಯರ್ಥಿ. ಜೆಡಿಎಸ್ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿಯೇ ಅವರ ಹೆಸರು ಘೋಷಣೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆಯನ್ನು ಕ್ಷೇತ್ರದಲ್ಲಿ ಯಶಸ್ವಿಯಾಗಿ ಸಂಘಟನೆ ಮಾಡಲಾಗಿದೆ. ಆದರೆ ಜಿಲ್ಲೆಯಲ್ಲಿ ಜೆಡಿಎಸ್ ಪ್ರಭಾವ ಕುಗ್ಗಿದೆ. ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಿದ್ದಾರೆ. ಭದ್ರಾವತಿಯ ಅಪ್ಪಾಜಿ ಗೌಡ ವಿಧಿವಶರಾಗಿದ್ದಾರೆ. ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಆರ್. ಎಂ. ಮಂಜುನಾಥ ಗೌಡರು ಕಾಂಗ್ರೆಸ್ ಸೇರಿದ್ದಾರೆ. ಇವೆಲ್ಲವೂ ಪ್ರಭಾವ ಬೀರಲಿವೆಯೇ? ಎಂದು ಕಾದು ನೋಡಬೇಕಿದೆ.
ಬಿಜೆಪಿಯಿಂದ ಈ ಬಾರಿಯು ಪದವೀಧರರು ಆಗಿರುವ ಹಾಲಿ ಶಾಸಕ ಬಂಜಾರ ಸಮುದಾಯದ ಕೆ. ಬಿ. ಅಶೋಕ ಕುಮಾರ್ ನಾಯ್ಕ್ ಕಣಕ್ಕಿಳಿಯಲಿದ್ದಾರೆ ಎಂಬ ಮಾಹಿತಿ ಇದೆ. ಮಾಜಿ ಶಾಸಕರಾದ ಕೆ. ಜಿ. ಕುಮಾರಸ್ವಾಮಿ ಸಹ ಟಿಕೆಟ್ ಬಯಸಿದ್ದಾರೆ. ಕೆಲವು ದಿನಗಳ ಹಿಂದೆ 'ಮತ್ತೊಮ್ಮೆ ಶಿವಮೊಗ್ಗ ಗ್ರಾಮಾಂತರಕ್ಕೆ ಕೆ. ಜಿ. ಕುಮಾರಸ್ವಾಮಿ' ಎಂಬ ಫೆಕ್ಸ್ ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಿತ್ತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಪ್ಪ ಪೂಜಾರ್, ಧೀರಜ್ ಹೊನ್ನವಿಲೆ ಸಹ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿ. ಎಸ್. ಯಡಿಯೂರಪ್ಪ ಕಣಕ್ಕಿಳಿಯುತ್ತಿಲ್ಲ. ಈ ಅಂಶ ಶಿವಮೊಗ್ಗದ ಯಾವ ಕ್ಷೇತ್ರಗಳ ಮೇಲೆ ಪ್ರಭಾವ ಬೀರಲಿದೆ? ಎಂಬುದು ಇನ್ನೂ ಖಾತ್ರಿಯಾಗಿಲ್ಲ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಒಟ್ಟು ಮತದಾರರು 216046. ಪುರುಷರು 107331, ಮಹಿಳೆಯರು 108715
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications