ಸಚಿನ್ ಜೀವಕ್ಕೆ ಅಪಾಯ ತರಲು ಯತ್ನಿಸಿದ್ದ ಪಾಕಿಸ್ತಾನದ ಈ ಆಟಗಾರ?
ಭಾರತ ಮತ್ತು ಪಾಕಿಸ್ತಾನ ಮಧ್ಯೆ ರಾಜಕೀಯ ಜಿದ್ದು ಇದೆ ನಿಜ, ಅದೇ ರೀತಿ ಕ್ರಿಕೆಟ್‌ನಲ್ಲಿ ಕೂಡ ಎರಡೂ ತಂಡಗಳ ನಡುವೆ ಕಿರಿಕ್ ಗ್ಯಾರಂಟಿ. ಆದರೆ ಈ ಕಿತ್ತಾಟ ಒಬ್ಬ ಆಟಗಾರ ಮತ್ತೊಬ್ಬ ಆಟಗಾರನ್ನು ಕೊಲೆ ಮಾಡಲು ಯೋಜಿಸುವಷ್ಟು ಕೆಟ್ಟದಾಗಿ ಇದೆಯಾ? ಅರೆರೆ ಈಗ ಯಾಕೆ ಈ ಮಾತು ಅಂದ್ರಾ? ಪಾಕಿಸ್ತಾನದ ಮಾಜಿ ಆಟಗಾರನೇ ನೀಡಿರುವ ಹೇಳಿಕೆ ಕ್ರಿಕೆಟ್ ಲೋಕದಲ್ಲಿ ಈಗ ಸಂಚಲನ ಸೃಷ್ಟಿಸಿದೆ.
ಹೌದು, ಪ್ರತಿ ಪಂದ್ಯದಲ್ಲೂ ಪಾಕಿಸ್ತಾನ ಮತ್ತು ಭಾರತದ ಆಟಗಾರರ ನಡುವೆ ಜಿದ್ದಾಜಿದ್ದಿ ಕಾಣಬಹುದು. ಆದರೆ ಇಷ್ಟು ದಿನ ಈ ಜಿದ್ದು ಕೇವಲ ಸ್ಪರ್ಧಾತ್ಮಕ ಅಂತಾ ಇಡೀ ಜಗತ್ತು ನಂಬಿತ್ತು. ಆದರೆ ಸ್ವತಃ ಪಾಕಿಸ್ತಾನದ ಮಾಜಿ ಆಟಗಾರನೇ ಬಾಯಿಬಿಟ್ಟಿರುವ ಸತ್ಯ ಇದೀಗ ಸಂಚಲನ ಸೃಷ್ಟಿಸಿದೆ. ಅದರಲ್ಲೂ ಕ್ರಿಕೆಟ್ ದೇವರು ಅಂತಾ ಕರೆಸಿಕೊಳ್ಳುವ, ಅಭಿಮಾನಿ ದೇವರ ಪಾಲಿನ ದೇವರು ಸಚಿನ್ ತೆಂಡೂಲ್ಕರ್ ಮೇಲೆ ಬೇಕು ಬೇಕು ಅಂತ ಮಾರಣಾಂತಿಕ ಬೌಲಿಂಗ್ ಮಾಡಿದ್ದಾಗಿ ಪಾಕಿಸ್ತಾನದ ಈ ಆಟಗಾರ ಹೇಳಿದ್ದಾನೆ.

ಸಚಿನ್ ಟಾರ್ಗೆಟ್ ಮಾಡಿ ಬೌಲಿಂಗ್!
ಪಾಕಿಸ್ತಾನದ ಆಟಗಾರರ ವರ್ತನೆ ಸದಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗುತ್ತದೆ. ಅದರಲ್ಲೂ ಶೋಯೆಬ್ ಅಖ್ತರ್ ಹಾಗೂ ಭಾರತದ ಆಟಗಾರರ ನಡುವೆ ಸಾಕಷ್ಟು ಬಾರಿ ಕಿರಿಕ್ ನಡೆದಿದೆ. ತನ್ನ ಮಾರಕ ಬೌಲಿಂಗ್ ಮೂಲಕ ಖ್ಯಾತಿ ಪಡೆದ ಈ ಆಟಗಾರ, ಈಗ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ ಅವರನ್ನು ಈ ಅಖ್ತರ್ ಟಾರ್ಗೆಟ್ ಮಾಡಿ ಬೌಲ್ ಹಾಕುತ್ತಿದ್ದರು ಎಂಬ ಕಟು ಸತ್ಯ ಇದೀಗ ಬಯಲಾಗಿದೆ. ಸ್ವತಃ ಶೋಯೆಬ್ ಅಖ್ತರ್ ಈ ಮಾತನ್ನ ಹೇಳಿದ್ದಾರೆ.
ಬೇಕು ಬೇಕು ಅಂತಾ ಮಾರಕ ಬೌಲಿಂಗ್?
ಪಾಕ್ ತಂಡದ ವೇಗದ ಬೌಲರ್ ಶೋಯೆಬ್ ಅಖ್ತರ್ ತಮ್ಮ ವೃತ್ತಿ ಜೀವನದಲ್ಲಿ ಪ್ರತಿಬಾರಿಯೂ ಭಾರತದ ವಿರುದ್ಧ ಆಕ್ರಮಣಕಾರಿ ಆಟವನ್ನ ಪ್ರದರ್ಶಿಸಿದ್ರು. ಆದ್ರೆ ಟೀಮ್ ಇಂಡಿಯಾ ಬಲಿಷ್ಠ ಬ್ಯಾಟಿಂಗ್ ವಿಭಾಗ ಶೋಯೆಬ್ ಅಖ್ತರ್ ಬೌಲಿಂಗ್ ಅನ್ನ ನಿರ್ದಯವಾಗಿ ದಂಡಿಸಿತ್ತು. ಟೀಮ್ ಇಂಡಿಯಾದ ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್ & ವೀರೇಂದ್ರ ಸೆಹ್ವಾಗ್ ಸೇರಿ ಇತರ ದಾಂಡಿಗರು ಅಖ್ತರ್ ಎಸೆತವನ್ನು ಹಿಗ್ಗಾಮುಗ್ಗ ಹೊಡೆಯುತ್ತಿದ್ದರು. ಆದರೂ ಇದೇ ಜಿದ್ದನ್ನು ಕಾಪಾಡಿಕೊಂಡು ಬಂದಿದ್ದ ಅಖ್ತರ್ ಒಮ್ಮೆ ಸಚಿನ್ ಅವರನ್ನು ಟಾರ್ಗೆಟ್ ಮಾಡಿ, ಬೇಕು ಬೇಕು ಅಂತಲೇ ಮಾರಣಾಂತಿಕ ದಾಳಿ ನಡೆಸಿದ್ದರಂತೆ.

ಕ್ರೀಡಾಸ್ಫೂರ್ತಿ ಮರೆತಿದ್ದರಾ ಅಖ್ತರ್?
ಸಾಮಾಜಿಕ ಜಾಲತಾಣದ ಸಂವಾದದಲ್ಲಿ ಭಾಗಿಯಾಗಿದ್ದ ಶೋಯೆಬ್ ಅಖ್ತರ್ ಸ್ವತಃ ಈ ಮಾತು ಹೇಳಿದ್ದಾರೆ. "ಇಂದು ನಾನು ಆ ಒಂದು ವಿಚಾರ ಬಹಿರಂಗಪಡಿಸುತ್ತೇನೆ.. ಅದೇನಂದರೆ ಆ ಪಂದ್ಯದಲ್ಲಿ ಸಚಿನ್ ಅವರನ್ನು ನಾನು ಗಾಯಗೊಳಿಸಬೇಕು ಎಂದು ನಿರ್ಧರಿಸಿದ್ದೆ.. ಅದನ್ನೇ ನಾನು ಮಾಡಿದ್ದೆ. ಆದರೆ ಆಗ ಇನ್ಜಮಾಮ್ ಉಲ್ ಹಕ್ ಚೆಂಡನ್ನು ಮುಂದಕ್ಕೆ ಎಸೆಯುಂತೆ ಹೇಳುತ್ತಿದ್ದರು" ಎಂದು ತಾನು ಕ್ರೀಡಾಸ್ಫೂರ್ತಿಯನ್ನೇ ಮರೆತು ಆಟವಾಡಿದ್ದ ಸತ್ಯವನ್ನು ಶೋಯೆಬ್ ಅಖ್ತರ್ ಹೇಳಿಕೊಂಡಿದ್ದಾರೆ.
ಯಾವಾಗ ನಡೆದಿತ್ತು ಈ ಮ್ಯಾಚ್?
ಹಾಗೇ ತಮ್ಮ ಮಾತು ಮುಂದುವರಿಸಿದ ಶೋಯೆಬ್ ಅಖ್ತರ್ "ನಾನು ಉದ್ದೇಶಪೂರ್ವಕವಾಗಿ ಸಚಿನ್‌ಗೆ ಪ್ರಾಣಕ್ಕೆ ಅಪಾಯವಾಗಬಹುದು ಎಂದು ಯೋಚಿಸಿ ಹೆಲ್ಮೆಟ್‌ಗೆ ಹೊಡೆದಿದ್ದೆ.. ರಿಪ್ಲೇ ನೊಡಿದಾಗ ಅದು ತಲೆಗೆ ಬಡಿದಿತ್ತು. ಬಳಿಕ ಮತ್ತೆ ಅದೇ ರೀತಿ ಚೆಂಡೆಸೆದು ಗಾಯಗೊಳಿಸಲು ಪ್ರಯತ್ನಿನಿಸಿದ್ದೆ" ಎಂದು ಶೋಯೆಬ್ ಅಖ್ತರ್ ಹೇಳಿಕೆ ನೀಡಿದ್ದಾರೆ. ಅಖ್ತರ್ ಈಗ ಹೇಳಿದ ಪಂದ್ಯ 2006ರಲ್ಲಿ ನಡೆದಿತ್ತು. 2006ರಲ್ಲಿ ಭಾರತ ಪಾಕಿಸ್ತಾನ ಪ್ರವಾಸ ಕೈಗೊಂಡ ಸಂದರ್ಭ ನಡೆದಿದ್ದ 3ನೇ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡಿದ್ದಾರೆ ಅಖ್ತರ್.
ಒಟ್ನಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ತಾನು ಈ ರೀತಿಯಾಗಿ ವರ್ತಿಸಿದ್ದೆ ಎಂದು ಸ್ವತಃ ಶೋಯೆಬ್ ಅಖ್ತರ್ ಹೇಳಿಕೊಂಡಿದ್ದಾರೆ. ಹೀಗೆ ಅಖ್ತರ್ ನೀಡಿದ ಹೇಳಿಕೆ ಈಗ ಸಂಚಲನ ಸೃಷ್ಟಿಸಿದೆ. ಹಾಗೇ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಹೇಳಿಕೆಯ ಬಗ್ಗೆ ಬಿಸಿ ಬಿಸಿ ಚರ್ಚೆ ಕೂಡ ಶುರುವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಇದೀಗ ಟ್ರೆಂಡ್ ಕ್ರಿಯೇಟ್ ಮಾಡಿದೆ.












Click it and Unblock the Notifications