Ranebennur Elections : ಕಾಂಗ್ರೆಸ್ ಬಿಜೆಪಿ ಮಧ್ಯೆ ಪೈಪೋಟಿ
ರಾಣೆಬೆನ್ನೂರು, ಮಾರ್ಚ್ 24: ಹಾವೇರಿ ಜಿಲ್ಲೆಯ ಮಹತ್ವದ ವಿಧಾನಸಭಾ ಕ್ಷೇತ್ರ ರಾಣೆಬೆನ್ನೂರು. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಇಲ್ಲಿ ಜೋರಾಗಿದೆ. ಈ ನಿಟ್ಟಿನಲ್ಲಿ ರಾಜಕೀಯ ಚಿತ್ರಣ ಇಲ್ಲಿದೆ.
ರಾಣೇಬೆನ್ನೂರು ತಾಲ್ಲೂಕನ್ನು ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಗುರಿತಿಸಲಾಗುತ್ತಿದೆ. ಇಲ್ಲಿನ ತುಂಗಭದ್ರ ನದಿಯು ತಾಲ್ಲೂಕಿನ ಸಂಪತ್ತಾಗಿದೆ. ಇಲ್ಲಿನ ಕೃಷ್ಣಮೃಗ ಅಭಯಾರಣ್ಯ ಏಷ್ಯಾ ಖಂಡದಲ್ಲೇ ಪ್ರಸಿದ್ದವಾಗಿದೆ. ರಾಣೇಬೆನ್ನೂರ ಇದು ವ್ಯಾಪಾರಕ್ಕೆ ಪ್ರಸಿದ್ದವಾದ ಊರು ಎಂದು ಹೇಳಬಹುದಾಗಿದೆ. ರಾಣೇಬೆನ್ನೂರಿನ ಕಪ್ಪುಜಿಂಕೆ (ಕರಿಚಿಗರೆ) ಅಥವಾ ಕೃಷ್ಣಮೃಗಗಳ ಅಭಯಾರಣ್ಯವು 1974ರಲ್ಲಿ ವನ್ಯಪ್ರಾಣಿ ಧಾಮವೆಂದು ಘೋಷಿಸಲ್ಪಟ್ಟಿತು.

ಮಹಾತ್ಮಾ ಗಾಂಧಿಯ ಶಿಷ್ಯಕೋಟಿಯಲ್ಲಿ ಒಬ್ಬರಾಗಿದ್ದ ಹಾವೇರಿ ಜಿಲ್ಲೆಯ ಸಂಗೂರಿನ ಕರಿಯಪ್ಪ ನೀಲಪ್ಪ ಯರೇಶೀಮಿ ಅವರ ನೇತೃತ್ವದಲ್ಲಿ ರಚನೆಯಾಗಿರುವ ರಾಣೆಬೆನ್ನೂರಿನ ಕುರುಬರ ಕುರಿ ಉಣ್ಣೆಯ ಔದ್ಯೋಗಿಕ ಬೆಳವಣಿಗೆಯ ಸಹಕಾರಿ ಸಂಘ 1942 ರಲ್ಲಿ ಸ್ಥಾಪಿತವಾಗಿದ್ದು 2012ಕ್ಕೆ ತನ್ನ ಸ್ಥಾಪನೆಯ 75ನೇ ವರ್ಷ ಆಚರಿಸಿಕೊಂಡಿದೆ.
ರಾಣೆಬೆನ್ನೂರು ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಹಾಗೂ ಮಾಜಿ ಸಚಿವ ಆರ್. ಶಂಕರ್ ಪ್ರತಿನಿಧಿಸಿದ್ದ ಕ್ಷೇತ್ರವಾಗಿದೆ. ಮೊದಲು ಕಾಂಗ್ರೆಸ್ ಭದ್ರಕೋಟೆಯಾಗಿದ್ದ ರಾಣೇಬೆನ್ನೂರು ಬಳಿಕ ಬಿಜೆಪಿ ತೆಕ್ಕೆಗೆ ಸೇರಿದೆ. ಕೆಪಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಆರ್. ಶಂಕರ್ ಗೆದ್ದು ಶಾಸಕರಾಗಿದ್ದರು. ಆದರೆ ಅವರು ಬಿಜೆಪಿ ಸೇರಿದ ಮೇಲೆ 2019ರಲ್ಲಿ ಕ್ಷೇತ್ರ ಮತ್ತೊಮ್ಮೆ ಉಪ ಚುನಾವಣೆ ಎದುರಿಸಬೇಕಾಯ್ತು. ಆಗ ಬಿಜೆಪಿ ಅರುಣ್ ಕುಮಾರ್ ಪೂಜಾರಾಗೆ ಟಿಕೆಟ್ ನೀಡಿತ್ತು.

ಸದ್ಯ ಇಲ್ಲಿ ಬಿಜೆಪಿಯ ಅರುಣ್ ಕುಮಾರ್ ಪೂಜಾರಿ ಶಾಸಕರಾಗಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಆರ್. ಶಂಕರ್ ಬೆಂಬಲ ನೀಡಿ ಸಚಿವರು ಆದರು. ಆದರೆ, ಆ ಬಳಿಕ ಅತೃಪ್ತ ಶಾಸಕರೊಂದಿಗೆ ಗುರುತಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಶಂಕರ್ ಅವರಿಗೆ ಬಿಜೆಪಿ ಭಾರೀ ಶಾಕ್ ನೀಡಿತ್ತು. ಇವರಿಗೆ ಟಿಕೆಟ್ ನೀಡದ ಕಮಲ ಪಕ್ಷ ಅರುಣ್ ಕುಮಾರ್ ಪೂಜಾರ ಅವರಿಗೆ ಟಿಕೆಟ್ ನೀಡಿತ್ತು. ಉಪ ಚುನಾವಣೆಯಲ್ಲಿ ಗೆದ್ದಿದ್ದ ಅರುಣ್ ಕುಮಾರ್ ಪೂಜಾರ ಶಾಸಕರಾದರು.
ಈ ಬಾರಿ ಕಾಂಗ್ರೆಸ್‌ನಿಂದ ಮಾಜಿ ಸ್ಪೀಕರ್ ಕೆಬಿ ಕೋಳಿವಾಡ ಅವರ ಮಗ ಪ್ರಕಾಶ್ ಕೋಳಿವಾಡಗೆ ಟಿಕೆಟ್ ನೀಡಲಾಗಿದೆ. ಈ ಬಾರಿ ಬಿಜೆ-ಪಿಯಲ್ಲಿ ಟಿಕೆಟ್‌ಗಾಗಿ ಹಲವು ಮಂದಿ ಆಕಾಂಕ್ಷಿಗಳು ಇದ್ದಾರೆ. ಕಳೆದ ಬಾರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಲಾಗದೇ ಬಳಿಕ ವಿಧಾನ ಪರಿಷತ್ ಸದಸ್ಯರಾಗಿದ್ದರು. ಇದೀಗ ಈ ಬಾರಿಯಾದರೂ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಆರ್. ಶಂಕರ್.
ಇನ್ನು ಹಾಲಿ ಶಾಸಕ ಅರುಣ್ ಕುಮಾರ್ ಪೂಜಾರ ಈ ಬಾರಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ಇವರ ನಡುವೆ ಬಿಜೆಪಿ ಮುಖಂಡ ಡಾ. ಬಸವರಾಜ ಕೇಲಗಾಲ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸಂತೋಷ್ ಪಾಟೀಲ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಸಂಚರಿಸುತ್ತಿರುವ ಪ್ರಕಾಶ್ ಕೋಳಿವಾಡ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಮರಳಿ ತರುವ ಸಂಕಲ್ಪ ಹೊಂದಿದ್ದಾರೆ. ರಾಣೆಬೆನ್ನೂರಿಗೆ ಇವರೊಂದಿಗೆ ಕೋಳಿವಾಡ ಆಪ್ತ ಜಟ್ಟೆಪ್ಪ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು.
Ranebennur Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2019 ಉಪಚುನಾವಣೆ | ಅರುಣ್ ಕುಮಾರ್ ಪೂಜಾರಿ(ಬಿಜೆಪಿ) | 95,438 | ಕೆ. ಬಿ ಕೋಳಿವಾಡ(ಕಾಂಗ್ರೆಸ್) | 72,216 |
| 2018 | ಆರ್. ಶಂಕರ್(ಕೆಪಿಜೆಪಿ) | 63,910 | ಕೆ ಬಿ ಕೋಳಿವಾಡ | 59,572 |
| 2013 | ಕೋಳಿವಾಡ್ ಕೃಷ್ಣಪ್ಪ ಭೀಮಪ್ಪ(ಕಾಂಗ್ರೆಸ್) | 53,780 | ಆರ್ ಶಂಕರ್(ಪಕ್ಷೇತರ) | 46,992 |
| 2008 | ಶಿವಣ್ಣ ಜಿ(ಬಿಜೆಪಿ) | 59,399 | ಕೋಳಿವಾಡ್ ಕೃಷ್ಣಪ್ಪ ಭೀಮಪ್ಪ(ಕಾಂಗ್ರೆಸ್) | 56,667 |
ರಾಣೆಬೆನ್ನೂರು ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ಬಹುತೇಕ ನಿರ್ಣಾಯಕವಾಗಲಿವೆ. ಇನ್ನುಳಿದಂತೆ ಕುರುಬ ಮತ್ತು ಮುಸ್ಲಿಂ ಮತಗಳು ಅಭ್ಯರ್ಥಿಗಳ ಗೆಲುವಿನ ತಕ್ಕಡಿಯಾಗಿವೆ. ಕ್ಷೇತ್ರದಲ್ಲಿ ಒಟ್ಟೂ 2,34,988 ಮತದಾರರಿದ್ದಾರೆ. ಈ ಪೈಕಿ ಲಿಂಗಾಯತರು 85,000, ಕುರುಬರು 36,000 ಹಾಗೂ ಮುಸ್ಲಿಂಮರು 37,000 ಮಂದಿ ಇದ್ದಾರೆ.












Click it and Unblock the Notifications