Ramdurg Election: ಕ್ಷೇತ್ರದಲ್ಲಿ 2023ರಲ್ಲಿ ಅಧಿಕಾರ ಹಿಡಿಯಲಿರುವ ಪಕ್ಷ ಯಾವುದು?, ವರದಿ-ವಿಶ್ಲೇಷಣೆ
ಬೆಂಗಳೂರು, ಮಾರ್ಚ್ 24: ಬೆಳಗಾವಿ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರವಾಗಿರುವ ರಾಮದುರ್ಗ ಅತೀ ಹೆಚ್ಚು ಗ್ರಾಮಗಳನ್ನು ಒಳಗೊಂಡಿದೆ. ಗೊಡಚಿ ವೀರಭದ್ರೇಶ್ವರ ದೇವಸ್ಥಾನ ಸೇರಿದಂತೆ ಇನ್ನಿತರ ಧಾರ್ಮಿಕ ಕ್ಷೇತ್ರಗಳಿಂದ ಈ ಪ್ರದೇಶ ಹೆಚ್ಚು ಪ್ರಸಿದ್ಧಿ ಪಡೆದಿದೆ. ರಾಜಕೀಯವಾಗಿ ನೋಡುವುದಾದರೆ ಇಲ್ಲಿ ಬಿಜೆಪಿಯ ಆಡಳಿತವಿದೆ. ಈ ರಾಮದುರ್ಗ ಕ್ಷೇತ್ರದ ಬಗೆಗಿನ ಇನ್ನಷ್ಟು ಇತಿಹಾಸ, ಚುನಾವಣೆ ಸಿದ್ಧತೆ, ಪಕ್ಷದ ಆಕಾಂಕ್ಷಿಗಳ ಕುರಿತು ಇಲ್ಲಿ ತಿಳಿಯಬಹುದು.
ಸಾಂಸ್ಕೃತಿಕವಾಗಿ ರಾಮದುರ್ಗ ಹೆಚ್ಚು ಶ್ರೀಮಂತವಾಗಿದೆ. ಇಲ್ಲಿ ಗೊಡಚಿ ವೀರಭದ್ರೇಶ್ವರ ದೇವಾಲಯ ಜಾತ್ರೆಯು (ಡಿಸೆ೦ಬರ್) ತಿಂಗಳಲ್ಲಿ ಜರುಗುತ್ತದೆ. ಶಭರಿಕೊಳ್ಳ ಮತ್ತು ಸಿದ್ದೇಶ್ವರ ಕೊಳ್ಳ, ಇಡಗಲ್ಲ ಪಡಿಯಪ್ಪಾ ದೇವಾಲಯ,

ಮಧುಕೇಶ್ವರ ದೇವಾಲಯ, ಸುನ್ನಾಳ ಶ್ರೀ ಧೀರ ಮಾರುತಿ ದೇವಸ್ಥಾನ, ಅವರಾದಿ ಶ್ರೀ ಫಲಹಾರೇಶ್ವರ ಮಠ
ಮುದೇನೂರು ಶ್ರೀ ಲಕ್ಷ್ಮೀ ನಾರಾಯಣ ದೇವಾಲಯ ಸೇರಿದಂತೆ ಅನೇಕ ಪುರಾತನ ದೇವಾಲಯಗಳು ಈ ಗಡಿಭಾಗ ತಾಲೂಕು ರಾಮದುರ್ಗದಲ್ಲಿವೆ.
ಕ್ಷೇತ್ರದ ರಾಜಕೀಯ ಇತಿಹಾಸ
ರಾಮದುರ್ಗ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್‌ನ ಹಿಡಿತದಲ್ಲಿ ಮೊದಲಿನಿಂದಲೂ ಇತ್ತು. ಈ ಪಕ್ಷಕ್ಕೆ ಜೆಡಿಯು ಮತ್ತು ಇತ್ತೀಚೆಗೆ ಬಿಜೆಪಿ ನುಂಗಲಾರದ ತುತ್ತಾಗಿದೆ. ಬಹುತೇಕ ಸಲ ಕಾಂಗ್ರೆಸ್ ಬೆಳಗಾವಿ ಭಾಗದಲ್ಲಿ ಹೆಚ್ಚು ಸ್ಥಾನ ವಿಸ್ತರಿಸುವಲ್ಲಿ ಯಶಸ್ವಿಯಾಗಿತ್ತು. ಅದರಂತೆ ರಾಮದುರ್ಗದಲ್ಲಿ ಸಹ ಗೆಲುವು ಸಾಧಿಸುತ್ತಲೇ ಬಂದಿತ್ತು.
ಲಭ್ಯ ಮಾಹಿತಿ ಪ್ರಕಾರ, ಕಾಂಗ್ರೆಸ್‌ನ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದು ಬಿಜೆಪಿ. 2004ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ವಿರುದ್ಧ ವಿಜಯ ಸಾಧಿಸಿತು. ಅದಾದ ಬಳಿಕ ಇನ್ನೇನು ಕ್ಷೇತ್ರ ಕೈ ಮುಖಂಡರಿಂದ ತಪ್ಪೇಹೊಯಿತು ಎನ್ನುವಷ್ಟರಲ್ಲಿ ಮತ್ತೆ ಎರಡು ಭಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿತು.
ಕಳೆದ ವರ್ಷ 2018ರಲ್ಲಿ ಕಾಂಗ್ರೆಸ್‌ನ ನಿರ್ಲಕ್ಷ್ಯದಿಂದಾಗಿ ರಾಮದುರ್ಗ ಬಿಜೆಪಿ ಪಾಲಾಯಿತು. ಬಿಜೆಪಿಯ ಮಹದಾದೇವಪ್ಪ ಯಾದವಾಡ ಅವರು ಕಾಂಗ್ರೆಸ್‌ನ ಪಿ.ಎಂ.ಅಶೋಕ್ ಅವರ ವಿರುದ್ಧ 68,000 ಮತಗಳಿಂದ ವಿಜಯ ಪತಾಕೆ ಹಾರಿಸಿದರು. ಆದರೆ ಈ ಭಾರಿ ಈ ಎರಡು ಪ್ರಮುಖ ಮುಖಂಡರ ಮೇಲೆ ಅಷ್ಟಾಗಿ ಜನರಿಗೆ ಒಲವಿಲ್ಲ. ಹೊಸ ಮುಖಗಳು ಸ್ಪರ್ಧಿಸಿದರೆ ಅವರಿಗೇ ಗೆಲುವ ಖಚಿತ ಎಂಬ ಮಾತುಗಳು ಕೇಳಿ ಬಂದಿವೆ.

ಕಾಂಗ್ರೆಸ್‌ಗೆ ಕ್ಷೇತ್ರ ತಪ್ಪಲು ಕಾರಣವೇನು?
ನಿರಂತರವಾಗಿ ಹಿಡಿತ ಸಾಧಿಸಿದ್ದ ಕಾಂಗ್ರೆಸ್ ಗೆ ಕಳೆದ ಬಾರಿ ಗೆಲವು ಕೈತಪ್ಪಿತು. ಕಾರಣ ಮಾಜಿ ಶಾಸಕ ಅಶೋಕ ಪಟ್ಟಣ ಅವರು ಕ್ಷೇತ್ರದಲ್ಲಿ ಸಿಗದೇ ಬರೀ ಬೆಂಗಳೂರಿನಲ್ಲಿ ತಂಗುತ್ತಿದ್ದರು. ಬೃಹತ್ ಕಾರ್ಯಕ್ರಮಗಳು ಆದಾಗ ಮಾತ್ರವೇ ಕ್ಷೇತ್ರದಲ್ಲಿರುತ್ತಿದ್ದ ಅವರು ಹೆಚ್ಚಾಗಿ ರಾಜಧಾನಿಯಲ್ಲೇ ಇರುತ್ತಿದ್ದರು ಎನ್ನಲಾಗಿದೆ. ಅಭಿವೃದ್ಧಿ ಜೊತೆಗೆ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಕ್ಷೇತ್ರ ಜನರಿಗೆ ಸುಲಭವಾಗಿ ಸಿಗದ ಪರಿಣಾಮ ಕ್ಷೇತ್ರವನ್ನು ಕಾಂಗ್ರೆಸ್ ಕಳೆದುಕೊಳ್ಳಬೇಕಾಯಿತು.
ಇತ್ತ ಹಾಲಿ ಶಾಸಕ ಬಿಜೆಪಿಯ ಮಹಾದೇವಪ್ಪ ಯಾದವಾಡ ಅವರ ಮೇಲೆ ನೆರೆ, ಪ್ರವಾಹದಂತಹ ಸಂದರ್ಭಗಳಲ್ಲಿ ಜನಸಾಮಾನ್ಯರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ಧ ಆರೋಪಗಳಿವೆ. ಪ್ರವಾಹ ಬಂದಾಗ ತಮ್ಮ ಪಕ್ಷ ಕಾರ್ಯಕರ್ತರ ಮೇಲಷ್ಟೇ ಹೆಚ್ಚು ಕಾಳಜಿ ತೋರುತ್ತಿದ್ದರು. ಜನಸಾಮಾನ್ಯರಿಗೆ ಕೇವಲ ಭರವಸೆ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಇದಲ್ಲದೇ ಇನ್ನೊ ಕೆಲವು ರಾಜಕೀಯ ಕಾರಣದಿಂದ ಇವರ ಪ್ರಭಾವ ಕ್ಷೇತ್ರದಲ್ಲಿ ಕುಂದಿದೆ ಎನ್ನಲಾಗಿದೆ.
ಹಾಲಿ-ಮಾಜಿಗಳೇ ಸ್ಪರ್ಧಿಗಳು: ಜಾತಿ ಲೆಕ್ಕಾಚಾರ
ಈ ಹಿಂದಿನ ಸೋಲಿನಿಂದ ಎಚ್ಚೆತ್ತಿರುವ ಮಾಜಿ ಶಾಸಕ ಅಶೋಕ ಪಟ್ಟಣ ಅವರು ಕ್ಷೇತ್ರದ ತುಂಬೆಲ್ಲ ಭರ್ಜರಿ ಪ್ರಚಾರ ನಡೆಸಿದ್ದಾರೆ. ಆಗಾಗ ಕಾರ್ಯಕ್ರಮ ಅಯೋಜಿಸಿ ಜನರಿಗೆ ಸಾಕಷ್ಟು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಬಿಜೆಪಿ ಕಾಂಗ್ರೆಸ್ ಈ ಬಾರಿ ಸೆಡ್ಡು ಹೊಡೆಯುವ ನಿರೀಕ್ಷೆ ಇದೆ ಎನ್ನಲಾಗಿದೆ. ಇವೆರಡು ಪಕ್ಷದಿಂದ ಇವರೇ ಚುನಾವಣಾ ಅಭ್ಯರ್ಥಿಗಳು ಎಂಬುದು ಬಹತೇಕ ಖಚಿತವಾಗಿದೆ. ಇತ್ತ ಜೆಡಿಎಸ್ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಸುದ್ದಿಯೇಲ್ಲೇ ಇಲ್ಲವಾಗಿದ್ದಾರೆ.
ಕ್ಷೇತ್ರದಲ್ಲಿ ಪಂಚಮಸಾಲಿ ಲಿಂಗಾಯತರು ಹೆಚ್ಚಿದ್ದಾರೆ. ಅವರೇ ನಿರ್ಣಾಯಕರು ಎನ್ನಲಾಗುತ್ತಿದೆ. ಇದೊಂದು ಮಾತ್ರ ಬಿಜೆಪಿ ವರದಾನವಾಗಬಹುದು ಬಿಟ್ಟರೆ ಬೇರಾವ ಗೆಲುವಿನ ಮಾರ್ಗ ಇಲ್ಲದಾಗಿದೆ. ಇಲ್ಲಿ ಜಾತಿ ಲೆಕ್ಕಾಚಾರದ ರಾಜಕಾರಣವನ್ನು ಅಲ್ಲಗಳೆಯುವಂತಿಲ್ಲ ಎನ್ನುತ್ತಾರೆ ರಾಜಕೀಯ ಪಂಡಿತರು.












Click it and Unblock the Notifications