ಕನಕಪುರದ ದೇಗುಲ ಮಠದಿಂದ ಮೂವರು ಬಾಲಕರು ನಾಪತ್ತೆ, ಮುಂದುವರಿದ ಶೋಧ ಕಾರ್ಯ
ರಾಮನಗರ, ನವೆಂಬರ್, 13; ರಾಮನಗರ ಜಿಲ್ಲೆಯ ಕನಕಪುರ ನಗರದಲ್ಲಿರುವ ದೇಗುಲ ಮಠದಿಂದ ಮೂವರು ಬಾಲಕರು ನಾಪತ್ತೆ ಆಗಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ. ನವೆಂಬರ್ 9ರ ರಾತ್ರಿ ಮಠದಿಂದ ಮೂವರು ವಿದ್ಯಾರ್ಥಿಗಳು ನಾಪತ್ತೆ ಆಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಿವಕುಮಾರ್(15), ಪ್ರತಾಪ್(16), ಕಾರ್ತಿಕ್(15) ನಾಪತ್ತೆ ಆದವರಾಗಿದ್ದಾರೆ.
ದೇಗುಲದ ಮಠದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕರು ಹಾಸ್ಟೆಲ್ನಲ್ಲಿ ಊಟ ಮುಗಿಸಿದ ನಂತರ ನಾಪತ್ತೆ ಆಗಿದ್ದಾರೆ. ಈ ಸಂಬಂಧ ಮಠದ ಸಿಬ್ಬಂದಿ ಮಹದೇವಸ್ವಾಮಿ ನವೆಂಬರ್ 11ರಂದು ಕನಕಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೂವರು ಬಾಲಕರಿಗಾಗಿ ಕನಕಪುರ ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಬಾಲ ಮಂದಿರಗಳಿಂದ ನಾಪತ್ತೆ ಆದ ಮಕ್ಕಳು
ರಾಜ್ಯದ ಸರ್ಕಾರಿ ಮಕ್ಕಳ ಬಾಲ ಮಂದಿರಗಳಿಂದ ಈವರೆಗೆ 484 ಮಕ್ಕಳು ಕಾಣೆಯಾಗಿದ್ದಾರೆ ಎನ್ನುವ ಮಾಹಿತಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಆ ಪೈಕಿ ಇನ್ನೂ 119 ಮಕ್ಕಳು ಪತ್ತೆಯಾಗಿಲ್ಲ ಎಂದು ಹೈಕೋರ್ಟ್‌ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಸರ್ಕಾರವೇ ತಿಳಿಸಿತ್ತು.

ಕೋಲಾರದ ಕೆ.ಸಿ.ರಾಜಣ್ಣ ಸಲ್ಲಿಸಿದ್ದ ಪಿಐಎಲ್ ಹಂಗಾಮಿ ಸಿಜೆ ಅಲೋಕ್ ಅರಾಧೆ ಹಾಗೂ ನ್ಯಾ.ಎಸ್. ವಿಶ್ವಜಿತ್‌ಶೆಟ್ಟಿ ಅವರಿದ್ದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ನ್ಯಾಯಾಲಯದ ಹಿಂದಿನ ಆದೇಶದಂತೆ ನಾಪತ್ತೆ ಆಗಿರುವ ಮಕ್ಕಳ ಪತ್ತೆಗೆ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸಿದ ಸರ್ಕಾರಿ ಪರ ವಕೀಲರು ಈ ವಿಷಯ ತಿಳಿಸಿದ್ದರು.
ಪಾಂಡಿಚೇರಿಯ ಕ್ರೀಡಾಪಟು ಸಾವು
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಅಕ್ಕಿ ಹೆಬ್ಬಾಳು ಬಳಿ ಪಾಂಡಿಚೇರಿಯ ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಅಲ್ಹರ್ಷ್ ಎಂಬುವರು ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಬಹಿರ್ದೆಸೆಗೆ ಹೊರಗೆ ಹೋಗಿದ್ದಾಗ ಕೆರೆಗೆ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಕ್ರೀಡಾಪಟುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದೇ ಘಟನೆಗೆ ಪ್ರಮುಖ ಕಾರಣ ಎಂದು ಕ್ರೀಡಾ ಆಯೋಜಕರ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆ.ಆರ್ ಪೇಟೆಯ ಅಕ್ಕಿ ಹೆಬ್ಬಾಳಿನಲ್ಲಿ ಸೈಕಲ್ ಪೋಲೊ ಕ್ರೀಡಾ ಕೂಟದ ನಡೆಯುತ್ತಿತ್ತು.

ಕ್ರೀಡಾಕೂಟದಲ್ಲಿ ಭಾಗಿಯಾಗಲು ಅಲ್ಹರ್ಷ್ ಪಾಂಡಿಚೇರಿಯಿಂದ ಕೆ.ಆರ್ ಪೇಟೆಗೆ ಆಗಮಿಸಿದ್ದರು. ತಡರಾತ್ರಿ ಬಹಿರ್ದೆಸೆಗೆಂದು ಆಚೆ ಹೋದಾಗ ದುರ್ಘಟನೆ ಸಂಭವಿಸಿದೆ. ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಇನ್ನು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications