channapatna: ಗೆದ್ದ ಯೋಗೇಶ್ವರ್‌ಗೆ ಬೆಂಬಲಿಗರಿಂದ ಹಾಲಿನ ಅಭಿಷೇಕ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರ ಬೆನ್ನಲ್ಲೇ ಅವರು ತೆರೆದ ವಾಹನದಲ್ಲಿ ಬರುತ್ತಿದ್ದಾಗ ಬೆಂಬಲಿಗರು ಹಾಲನ್ನು ಸುರಿದು ಸಂಭ್ರಮಿಸಿದ್ದಾರೆ.
ಚನ್ನಪಟ್ಟಣದಲ್ಲಿ ವಾಹನದ ಮೇಲಿದ್ದ ಸಿ.ಪಿ.ಯೋಗೇಶ್ವರ್ ಅವರಿಗೆ ಬೆಂಬಲಿಗರು ಹಾಲಿನ ಪ್ಯಾಕೆಟ್‌ಗಳಿಂದ ಅಭಿಷೇಕ ಮಾಡಿದ್ದಾರೆ. ಈ ವೇಳೆ ಯೋಗೇಶ್ವರ್ ಅವರು ಬೇಡ ಬೇಡ ಸುಮ್ನಿರ್ರೋ ಎಂದು ರೇಗಿದ್ದಾರೆ. ಆದರೂ ಸಂಭ್ರಮದಲ್ಲಿದ್ದ ಬೆಂಬಲಿಗರನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಲಿಲ್ಲ. ಕೊನೆಗೆ ಮೈಮೇಲೆಲ್ಲಾ ಹಾಲು ಚೆಲ್ಲಿದ್ದರಿಂದ ನೀರಿನಿಂದ ತೊಳೆದುಕೊಂಡು ಮುಂದೆ ಸಾಗಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಪಾರ ಜನಮನ್ನಣೆ ಗಳಿಸಿ, ಅಭೂತಪೂರ್ವ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರಿಗೆ ಅಭಿನಂದನೆಗಳು ಪಕ್ಷ ತಿಳಿಸಿದೆ. ರಾಜ್ಯದ ಜನತೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ತಿರಸ್ಕರಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿ ಕೆಲಸಗಳು ಹಾಗೂ ಜನಪರ ಆಡಳಿತವನ್ನು ಬೆಂಬಲಿಸಿದ್ದಾರೆ ಎಂದು ಹೇಳಿದೆ.
ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಿದ ಚನ್ನಪಟ್ಟಣ ಕ್ಷೇತ್ರದ ಸಮಸ್ತ ಜನತೆಗೆ ಧನ್ಯವಾದಗಳು ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಆಭೂತಪೂರ್ವ ಗೆಲುವು ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರು ಇಂದು ಚನ್ನಪಟ್ಟಣದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಕೇಂದ್ರದಲ್ಲಿ ವಿಜೇತರಾದ ಪ್ರಮಾಣ ಪತ್ರ ಸ್ವೀಕರಿಸಿದರು.
ಗೆಲುವಿನ ಬಳಿಕ ಮಾತನಾಡಿದ ಸಿ.ಪಿ.ಯೋಗೇಶ್ವರ್, ಮೈತ್ರಿ ಪಕ್ಷದಲ್ಲಿ ಸ್ವಾರ್ಥವಿತ್ತು. ಜನ ಅವರ ಕುಟುಂಬ ರಾಜಕಾರಣಕ್ಕೆ ತೆರೆ ಎಳೆದಿದ್ದಾರೆ, ಜೆಡಿಎಸ್ ಬಿಜೆಪಿ ಮೈತ್ರಿ ವರ್ಕೌಟ್ ಆಗಿಲ್ಲ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ತಮ್ಮ ಪುತ್ರರನ್ನು ಬೆಳೆಸಬೇಕು ಎಂದು ಹೋರಾಡಿದ್ದರು. ಇವರ ಷಡ್ಯಂತ್ರದಿಂದ ನಾನು ಎನ್‌ಡಿಎ ಪಕ್ಷದಿಂದ ಹೊರಬಂದೆ. ಆದರೆ ಕ್ಷೇತ್ರದ ಜನ ಹಾಗೂ ಕಾಂಗ್ರೆಸ್ ಪಕ್ಷ ನನ್ನನ್ನು ಕೈ ಬಿಡಲಿಲ್ಲ ಎಂದು ಸಿ.ಪಿ.ಯೋಗೇಶ್ವರ್ ಸಂತಸ ವ್ಯಕ್ತಪಡಿಸಿದ್ದಾರೆ.

ಉಪಚುನಾವಣೆ ಕಾಂಗ್ರೆಸ್ ಗೆಲುವಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಕರ್ನಾಟಕ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಗೆಲುವು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೆಯ ಮೈಸೂರು ಭಾಗ ಮತ್ತು ಸಮಗ್ರ ಕರ್ನಾಟಕದ ಅಭಿವೃದ್ಧಿಯ ಗೆಲುವು ಎಂದು ಹೇಳಿದ್ದಾರೆ.
ಈ ಉಪ ಚುನಾವಣೆಯ ಅಭೂತಪೂರ್ವ ಫಲಿತಾಂಶವು ನಮ್ಮ ಸರ್ಕಾರದ ಜನಪರ ಆಡಳಿತಕ್ಕೆ, ಅಭಿವೃದ್ಧಿಪರ ನೀತಿಗೆ ಹಾಗೂ ಜನರ ಬದುಕನ್ನು ಬದಲಿಸಿದ ಗ್ಯಾರಂಟಿ ಯೋಜನೆಗಳ ಯಶಸ್ಸಿಗೆ ಹಿಡಿದ ಕನ್ನಡಿ. ಈ ಉಪ ಚುನಾವಣೆಯ ಗೆಲುವು ನಮ್ಮ ಸರ್ಕಾರಕ್ಕೆ ಮತ್ತಷ್ಟು ಬಲ ನೀಡಿದೆ. ಇನ್ನಷ್ಟು ಜನಹಿತದ ಕಾರ್ಯಕ್ರಮಗಳನ್ನು ಕೈಗೊಳ್ಳಲು ಪ್ರೇರಣೆ ಮತ್ತು ಚೈತನ್ಯವನ್ನು ನೀಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಉಪ ಚುನಾವಣೆಯಲ್ಲಿ ಹಗಲು ರಾತ್ರಿ ಎನ್ನದೆ ಅತ್ಯಂತ ಉತ್ಸಾಹದಿಂದ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರಿಗೆ, ನಾಯಕರಿಗೆ, ಕಾರ್ಯಕರ್ತರಿಗೆ ಧನ್ಯವಾದಗಳು. ಜನಾಶೀರ್ವಾದ ಪಡೆದ ಎಲ್ಲ ಅಭ್ಯರ್ಥಿಗಳಿಗೂ ಅಭಿನಂದನೆಗಳು, ಸರ್ಕಾರದ ಜನಹಿತದ ಯೋಜನೆಗಳನ್ನು ತಮ್ಮ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದಕ್ಕೆ ಶ್ರಮಿಸುತ್ತೀರಿ ಎಂಬ ನಂಬಿಕೆ ನನಗಿದೆ ಎಂದು ಪ್ರಿಯಾಂಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications